ಬೆಂಗಳೂರು, ಜ.11- ಕನಕಪುರದಲ್ಲಿಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಶಕ್ತಿ ಪ್ರದರ್ಶನವಾಯಿತು. ನಿನ್ನೆ ಸಂಜೆ ಕನಕಪುರಕ್ಕೆ ತಲುಪಿದ ಪಾದಯಾತ್ರೆ ಇಂದು ಮತ್ತೆ ಬೆಳಗ್ಗೆ ಆರಂಭವಾಯಿತು. ಮೂರನೇ ದಿನದಲ್ಲಿ ಕನಕಪುರ ಮುಖ್ಯರಸ್ತೆಯ ತುಂಬೆಲ್ಲಾ ಜನಸಾಗರ ತುಂಬಿ ತುಳುಕುತ್ತಿತ್ತು.
ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ಡಿ.ಕೆ.ಶಿವಕುಮಾರ್ ಮತ್ತು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ರೋಡ್ ಶೋನಲ್ಲಿ ಭಾಗವಹಿಸಿದ್ದರು. ವಾಹನ ಹತ್ತಿ ನಿಂತ ಇಬ್ಬರು ನಾಯಕರ ಮೇಲೆ ಕಾರ್ಯಕರ್ತರು ಪುಷ್ಪವೃಷ್ಠಿಗರೆದರು. ಭಾರೀ ಗಾತ್ರದ ಸೇಬಿನ ಹಾರ ಮತ್ತು ಹೂವಿನ ಹಾರ ಹಾಕಲಾಯಿತು. ಸುಮಾರು 25 ಸಾವಿರಕ್ಕೂ ಹೆಚ್ಚು ಮಂದಿ ಇಂದು ಸಮಾವೇಶಗೊಂಡು ಡಿ.ಕೆ.ಶಿವಕುಮಾರ ಜೊತೆ ಹೆಜ್ಜೆ ಹಾಕಿದರು.
ಬೆಳಗ್ಗೆ ಉಪಹಾರ ಸೇವನೆ ಬಳಿಕ ಕನಕಪುರ ನಗರದಿಂದ ಪಾದಯಾತ್ರೆ ಆರಂಭಗೊಂಡಾಗ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಭಾವಹಿಸಿದ್ದರು. ಅವರ ಅನಾರೋಗ್ಯ ನಿಮಿತ್ತ ಒಂದಷ್ಟು ದೂರ ತೆರೆದ ವಾಹನದಲ್ಲಿ ನಾಯಕರು ಮೆರವಣಿಯಲ್ಲಿ ಸಾಗಿದರು. ನಂತರ ಡಿ.ಕೆ.ಶಿವಕುಮಾರ್ ವಾಹನದಿಂದ ಇಳಿದು ಪಾದಯಾತ್ರೆ ಆರಂಭಿಸಿದರು.
ಗಾಣಾಲು ವೀರಭದ್ರಸ್ವಾಮಿ ದೇವಸ್ಥಾನದವರೆಗೂ 7 ಕಿಲೋ ಮೀಟರ್ ನಡೆಯಲಾಯಿತು. ಮಧ್ಯಾಹ್ನದ ಬೋಜನ ವಿರಾಮದ ಬಳಿಕ ಮತ್ತೆ ವೀರಭದ್ರ ದೇವಸ್ಥಾನದಿಂದ ಶುರುವಾದ ಪಾದಯಾತ್ರೆ ರಾತ್ರಿ ವೇಳೆಗೆ ಚಿಕ್ಕನಹಳ್ಳಿ ಗ್ರಾಮ ತಲುಪಲಿದೆ. ಅಲ್ಲಿ ರಾತ್ರಿ ವಾಸ್ತವ್ಯ ವ್ಯವಸ್ಥೆ ಮಾಡಲಾಗಿದೆ.
ರಸ್ತೆಯಲ್ಲೆಲ್ಲಾ ತುಂಬಿ ಹೋಗಿದ್ದ ಜನ ಜಾಗ ಸಾಲದೆ ಅಕ್ಕಪಕ್ಕದ ಕಟ್ಟಡಗಳ ಮೇಲೆರಿ ನಿಂತು ತಮ್ಮ ನಾಯಕನಿಗೆ ಬೆಂಬಲ ವ್ಯಕ್ತಪಡಿಸಿದರು. ಕಾರ್ಯಕರ್ತರು ಡಿ.ಕೆ., ಡಿ.ಕೆ., ಎಂದು ಜೈಕಾರ ಕೂಗಿದರು. ಸಿದ್ದರಾಮಯ್ಯ ಅವರಿಗೂ ಕಾರ್ಯಕರ್ತರು ಜೈಕಾರ ಹಾಕಿದರು.
