ದಿಢೀರ್ ದೆಹಲಿಗೆ ಹಾರಿದ ಡಿಕೆಶಿ, ಸೋನಿಯಾ ಗಾಂಧಿ ಭೇಟಿ ಸಾಧ್ಯತೆ

ಬೆಂಗಳೂರು, ಮೇ 23- ರಾಜ್ಯಸಭೆ, ವಿಧಾನಸಭೆ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿರುವ ಸಮಯದಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ನಿನ್ನೆ ರಾತ್ರಿ ಡೀರ್ ದೆಹಲಿಗೆ ತೆರಳಿದ್ದು, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ.

ಈ ಭೇಟಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಭೇಟಿಗೆ ಸಮಯ ನೀಡುವಂತೆ ಸೋನಿಯಾ ಗಾಂಧಿ ಅವರಿಗೆ ಹಲವು ಬಾರಿ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದರು. ಆದರೆ ಪೂರ್ಣ ಪ್ರಮಾಣದ ಸಮಯ ಸಿಕ್ಕಿರಲಿಲ್ಲ. ಪ್ರತಿ ಬಾರಿ ರಾಹುಲ್‍ಗಾಂಧಿ, ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ ಅವರ ನಡುವಿನ ಸಭೆಗೆ ದೆಹಲಿ ಭೇಟಿ ಸೀಮಿತವಾಗುತ್ತಿತ್ತು. ಹುಟ್ಟು ಹಬ್ಬ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಡಿ.ಕೆ.ಶಿವಕುಮಾರ್ ಅವರು ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡುತ್ತಿದ್ದರಾದರೂ ಅದು ಫೋಟೊ ಮಟ್ಟಿಗಷ್ಟೆ ಇರುತ್ತಿತ್ತು.

ರಾಜ್ಯ ರಾಜಕೀಯದಲ್ಲಿ ಗುಂಪುಗಾರಿಕೆ, ವಲಸಿಗರ ಮೇಲಾಟ ಸೇರಿದಂತೆ ಹಲವು ಬೆಳವಣಿಗೆಗಳು ಕಾಂಗ್ರೆಸ್‍ನ್ನು ಕುಗ್ಗಿಸಿವೆ. ಪಕ್ಷದ ನಿಷ್ಠಾವಂತ ನಾಯಕರು ಕ್ಷುಲ್ಲಕ ಕಾರಣಕ್ಕಾಗಿ ಅವಕಾಶ ವಂಚಿತರಾಗುತ್ತಿದ್ದು, ಬೇರೆ ಪಕ್ಷಗಳತ್ತ ಮುಖ ಮಾಡುತ್ತಿದ್ದಾರೆ. ಈಗಾಗಲೇ ಪಕ್ಷ ಬಿಟ್ಟು ಹೋಗಿರುವ ರೋಷನ್ ಬೇಗ್ ಸೇರಿದಂತೆ ಪ್ರಮುಖ ನಾಯಕರು ಮತ್ತೆ ಕಾಂಗ್ರೆಸ್ ಸೇರಲು ಆಸಕ್ತಿ ಹೊಂದಿದ್ದರಾದರೂ ಅವರಿಗೆ ಅಡ್ಡಿ ಪಡಿಸಲಾಗುತ್ತಿದೆ. ಪಕ್ಷಕ್ಕೆ ಆಸ್ತಿಯಾಗಬಹುದಾದ ಬಹಳಷ್ಟು ನಾಯಕರನ್ನು ಕಾಂಗ್ರೆಸ್ ಕಳೆದುಕೊಂಡಿದೆ.

ಅಧಿಕಾರ ಮತ್ತು ಅವಕಾಶಗಳಿಗೆ ಸೀಮಿತವಾಗಿ ತಮ್ಮ ಬೇಳೆ ಬೇಯಿಸಿಕೊಳ್ಳುವ ನಾಯಕರಿಗೆ ಹೆಚ್ಚಿನ ಮಣೆ ಹಾಕಲಾಗುತ್ತಿದೆ. ಸಿ.ಎಂ.ಇಬ್ರಾಹಿಂ, ಜಮೀರ್ ಅಹ್ಮದ್ ಖಾನ್‍ರಂತಹ ನಾಯಕರಿಗೆ ಅಗತ್ಯ ಮೀರಿ ಆದ್ಯತೆ ನೀಡಲಾಗಿದೆ. ಕೊನೆಗೆ ವಿಧಾನ ಪರಿಷತ್ ನಾಯಕ ಸ್ಥಾನ ದಕ್ಕಲಿಲ್ಲ ಎಂಬ ಕಾರಣಕ್ಕೆ ಸಿ.ಎಂ.ಇಬ್ರಾಹಿಂ ಪಕ್ಷದಿಂದ ಹೊರ ಹೋಗಿ ಕಾಂಗ್ರೆಸ್ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.

ಈ ಹಿಂದೆ ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣವಾದ ಗುಂಪು ಕೂಡ ಅವಕಾಶವಾದಿತನ ಪ್ರದರ್ಶನ ಮಾಡಿತ್ತು. ಆ ವೇಳೆ ಎಷ್ಟೇ ಪ್ರಯತ್ನ ಪಟ್ಟರು ಹಠ ಬಿಡದೆ ಬಿಜೆಪಿ ಸಖ್ಯ ಬೆಳೆಸಿದ ಕಾಂಗ್ರೆಸ್‍ನ 14 ಮಂದಿ ಶಾಸಕರಲ್ಲಿ ಬಹುತೇಕರು ವಲಸಿಗರಾಗಿದ್ದರು. ಹಾಗಾಗಿ ಇನ್ನೂ ಮುಂದೆ ಪಕ್ಷ ನಿಷ್ಠರಿಗೆ ಹೆಚ್ಚಿನ ಮಣೆ ಹಾಕಬೇಕು ಎಂಬ ಒತ್ತಾಯಗಳು ಪಕ್ಷದ ಒಳ ವಲಯದಲ್ಲಿ ಕೇಳಿ ಬರುತ್ತಿವೆ.

ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ 150 ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿಗಳು ಮತ್ತು ಉಳಿದ ಕ್ಷೇತ್ರಗಳಲ್ಲಿ ತಳಮಟ್ಟದ ಕಾಂಗ್ರೆಸಿಗರಿಗೆ ಮಾತ್ರ ಅವಕಾಶ ನೀಡಬೇಕು. ಒಂದು ಕುಟುಂಬಕ್ಕೆ ಒಂದು ಟಿಕೆಟ್ ಎಂದು ಉದಯಪುರ ಚಿಂತನಾ ಶಿವಿರ್ ಘೋಷಣೆಯನ್ನು ಕಡ್ಡಾಯವಾಗಿ ಪಾಲಿಸಬೇಕು.

ಎಷ್ಟೇ ದೊಡ್ಡ ನಾಯಕರಾಗಿದ್ದರು ಒಂದೇ ಕ್ಷೇತ್ರದಲ್ಲಿ ಮಾತ್ರ ಸ್ರ್ಪಧಿಸಲು ಅವಕಾಶ ನೀಡಬೇಕು. ಪಕ್ಷ ಸಮೀಕ್ಷೆಗಳನ್ನು ಆಧರಿಸಿ ಅದರಲ್ಲೂ ಪಕ್ಷ ನಿಷ್ಠರಿಗೆ ಟಿಕೆಟ್ ನೀಡಲು ಪೂರ್ಣ ಪ್ರಮಾಣದ ಅಧಿಕಾರ ನೀಡಬೇಕು ಎಂದು ಡಿ.ಕೆ.ಶಿವಕುಮಾರ್ ಬಣ ಮೊದಲಿನಿಂದಲೂ ಪ್ರತಿಪಾದಿಸುತ್ತಿದೆ.
ಬಹಳ ದಿನಗಳ ನಂತರ ಸೋನಿಯಾ ಗಾಂಧಿ ಅವರ ಭೇಟಿಗೆ ಡಿ.ಕೆ.ಶಿವಕುಮಾರ್ ಅವರಿಗೆ ಅವಕಾಶ ಸಿಕ್ಕಿರುವುದು ಕಾಂಗ್ರೆಸ್‍ನಲ್ಲಿ ಸಂಚಲನ ಮೂಡಿಸಿದೆ.

ವಿಧಾನಸಭೆಯಿಂದ ರಾಜ್ಯಸಭೆ ಮತ್ತು ವಿಧಾನಪರಿಷತ್‍ಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಗೆ ಶುಕ್ರವಾರ, ಶನಿವಾರ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ದೆಹಲಿಯಲ್ಲೇ ಇದ್ದರೂ ರಣದೀಪ್ ಸಿಂಗ್ ಸುರ್ಜೇವಾಲ ಮತ್ತು ಕೆ.ಸಿ.ವೇಣುಗೋಪಾಲ್ ಅವರೊಂದಿಗೆ ಸಭೆ ನಡೆಸಲಾಯಿತು. ಸೋನಿಯಾ ಗಾಂ ಭೇಟಿಗೆ ಪ್ರಯತ್ನಿಸಿದಾದರೂ ಅವಕಾಶ ಸಿಕ್ಕಿರಲಿಲ್ಲ.

ನಿನ್ನೆ ಬೆಂಗಳೂರಿಗೆ ಆಗಮಿಸಿದ ಇಬ್ಬರು ನಾಯಕರು ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಡೀರ್ ಬೆಳವಣಿಗೆಯಲ್ಲಿ ಹೈಕಮಾಂಡ್ ಬುಲಾವ್ ಬಂದಿದ್ದು, ತುಮಕೂರಿನಲ್ಲಿ ಕಾರ್ಯಕ್ರಮವನ್ನು ಆತುರಾತುರವಾಗಿ ಮುಗಿಸಿ ಡಿ.ಕೆ.ಶಿವಕುಮಾರ್ ರಾತ್ರಿ ದೆಹಲಿಗೆ ತೆರಳಿದ್ದಾರೆ. ಇಂದು ರಾಷ್ಟ್ರೀಯ ಅಧ್ಯಕ್ಷರ ಜೊತೆ ಸಮಾಲೋಚನೆ ನಡೆಸಲಿದ್ದಾರೆ.