ಹುಬ್ಬಳ್ಳಿ, ಮೇ 31- ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರನ್ನು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೇಟಿ ಮಾಡಿ ಹೈಕಮಾಂಡ್ ಸಂದೇಶವನ್ನು ತಲುಪಿಸಿದ್ದಾರೆ.
ನಿನ್ನೆ ರಾತ್ರಿ ಉದ್ದೇಶಪೂರ್ವಕವಾಗಿ ಈ ಇಬ್ಬರು ನಾಯಕರ ಭೇಟಿಗಾಗಿಯೇ ಬೆಂಗಳೂರಿನಿಂದ ತೆರಳಿದ್ದ ಡಿ.ಕೆ.ಶಿವಕುಮಾರ್, ನಿನ್ನೆ ಲಕ್ಷ್ಮಣ ಸವದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇಂದು ಬೆಳಗ್ಗೆ ಜಗದೀಶ್ ಶೆಟ್ಟರ್ ಅವರನ್ನು ಭೇಟಿ ಮಾಡಿದರು. ಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್ ಮತ್ತಿತರರು ಉಪಸ್ಥಿತರಿದ್ದರು.
ಹುಬ್ಬಳ್ಳಿಯ ನಿವಾಸಕ್ಕೆ ಇಂದು ಆಗಮಿಸಿದ ಕಾಂಗ್ರೆಸ್ ಪಕ್ಷದ ಜನಪ್ರಿಯ ಉಪಮುಖ್ಯಮಂತ್ರಿಗಳು ಹಾಗೂ ಆತ್ಮೀಯರಾದ ಶ್ರೀ ಡಿ.ಕೆ ಶಿವಕುಮಾರ್, ಸಚಿವರಾದ ಶ್ರೀ ಸತೀಶ್ ಜಾರಕಿಹೊಳಿ, ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್, ಹಾಗೂ ಶಾಸಕರಾದ ಶ್ರೀ ಎನ್.ಎಚ್ ಕೋನರೆಡ್ಡಿ ಅವರನ್ನು ಪ್ರೀತಿಯಿಂದ ಬರಮಾಡಿಕೊಂಡು, ಸನ್ಮಾನಿಸಿ, ಅಭಿನಂದಿಸಿದ ಕ್ಷಣ.#Hubballi pic.twitter.com/sQ2fziD6O9
— Jagadish Shettar (@JagadishShettar) May 31, 2023
ಲಕ್ಷ್ಮಣ ಸವದಿ ಸಚಿವ ಸಂಪುಟದ ಆಕಾಂಕ್ಷಿಯಾಗಿದ್ದರು. ಆದರೆ, ಅದು ಸಂಪುಟ ವಿಸ್ತರಣೆಯಲ್ಲಿ ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಅವರೊಂದಿಗೆ ಡಿ.ಕೆ.ಶಿವಕುಮಾರ್ ಅವರ ಚರ್ಚೆ ಕುತೂಹಲ ಕೆರಳಿಸಿದೆ. ಮತ್ತೊಂದೆಡೆ ಚುನಾವಣೆಯಲ್ಲಿ ಸೋಲು ಕಂಡಿರುವ ಜಗದೀಶ್ ಶೆಟ್ಟರ್ ಅವರನ್ನು ಕಾಂಗ್ರೆಸ್ ಕಡೆಗಣಿಸುತ್ತಿದೆ ಎಂಬ ಅಭಿಪ್ರಾಯ ಬರದಂತೆ ಎಚ್ಚರಿಕೆ ವಹಿಸುವ ಸಲುವಾಗಿ ಡಿ.ಕೆ.ಶಿವಕುಮಾರ್ ಚರ್ಚೆ ನಡೆಸಿದ್ದಾರೆ.
ಈ ಇಬ್ಬರು ನಾಯಕರಿಗೆ ಸೂಕ್ತ ಸ್ಥಾನಮಾನ ನೀಡುವುದಾಗಿ ಹೈಕಮಾಂಡ್ ಭರವಸೆ ನೀಡಿದೆ. ಆ ಸಂದೇಶವನ್ನು ಡಿ.ಕೆ.ಶಿವಕುಮಾರ್ ತಲುಪಿಸಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ, ಲೋಕಸಭೆ ಚುನಾವಣೆವರೆಗೂ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳುವಂತೆ ಜಗದೀಶ್ ಶೆಟ್ಟರ್ ಅವರಿಗೆ ಡಿ.ಕೆ.ಶಿವಕುಮಾರ್ ಮನವಿ ಮಾಡಿರುವುದಾಗಿ ತಿಳಿದುಬಂದಿದೆ.
ಹುಬ್ಬಳ್ಳಿಯಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ, ಗುಬ್ಬಿಯ ಶ್ರೀನಿವಾಸ್, ಅರಸೀಕೆರೆಯ ಶಿವಲಿಂಗೇಗೌಡ, ಗುರು ಮಿಟ್ಕಲ್‍ನ ಬಾಬುರಾವ್ ಚಿಂಚನಸೂರ್ ಅವರ ಸೇರ್ಪಡೆಯಿಂದ ಕಾಂಗ್ರೆಸ್‍ಗೆ ಶಕ್ತಿ ಬಂದಿದೆ.
ಚುನಾವಣೆಯಲ್ಲಿ ಸೋಲು-ಗೆಲುವು ಇರೋದೆ. ದೇವರು ವರವನ್ನೂ ಕೊಡುವುದಿಲ್ಲ, ಶಾಪವನ್ನೂ ಕೊಡುವುದಿಲ್ಲ ಅವಕಾಶ ಮಾತ್ರ ಕೊಟ್ಟಿರುತ್ತಾನೆ. ಈಗ ನಮಗೆ ಅವಕಾಶ ಕೊಟ್ಟಿದ್ದಾನೆ. ಅದನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದರ ಬಗ್ಗೆ ನಾವು ಎಚ್ಚರಿಕೆಯಿಂದ ನಡೆದುಕೊಳ್ಳುತ್ತೇವೆ ಎಂದು ಹೇಳಿದರು.
ಡಬ್ಬಲ್ ಇಂಜಿನ್ ಸರ್ಕಾರದ ನಿರ್ಧಾಗಳಿಂದ ಜನ ಸಾಲಗಾರರಾಗಿದ್ದಾರೆ: ಸಚಿವ ಪ್ರಿಯಾಂಕ ಖರ್ಗೆ
ಬಿ ಫಾರಂ ಕೊಟ್ಟ ಮೇಲೆ ಜಗದೀಶ್ ಶೆಟ್ಟರ್ ಅವರ ಜತೆ ಮಾತನಾಡಲು ನನಗೆ ಸಮಯ ಸಿಕ್ಕಿರಲಿಲ್ಲ. ಚುನಾವಣೆ ಪ್ರಚಾರ, ಸರ್ಕಾರ ರಚನೆ, ಸಂಪುಟ ರಚನೆಯಲ್ಲಿ ತೊಡಗಿಸಿಕೊಂಡಿದ್ದೆ. ಸುಮಾರು 15 ದಿನಗಳ ಬಳಿಕ ಈ ಇಬ್ಬರು ನಾಯಕರನ್ನು ಭೇಟಿ ಮಾಡಲೇಬೇಕು ಎಂದು ಆಗಮಿಸಿದ್ದೆ. ಅವರು ನಮಗೆ ಮಾರ್ಗದರ್ಶನ ಕೊಟ್ಟಿದ್ದಾರೆ ಎಂದರು.
ಈ ನಾಯಕರುಗಳಿಂದ ರಾಜ್ಯ ರಾಜಕೀಯದಲ್ಲಿ ಬದಲಾವಣೆ ಆಗಿದೆ. ನಾವು ಕೂಡ ಮೂರೂವರೆ ವರ್ಷಗಳಿಂದ ಪಕ್ಷ ಸಂಘಟನೆ ಮಾಡಿದ್ದೇವೆ. ಬಿಜೆಪಿ ಸರ್ಕಾರದ ಲೋಪದೋಷಗಳನ್ನು ಜನರ ಮುಂದಿಟ್ಟಿದ್ದೆವು. ಅದಕ್ಕಾಗಿ ನಮಗೆ ದೊಡ್ಡ ಪ್ರಮಾಣದ ಅವಕಾಶ ಸಿಕ್ಕಿದೆ ಎಂದರು.
ಮುಜರಾಯಿ ದೇವಸ್ಥಾನದ ತಸ್ತಿಕ್ ಭತ್ಯೆ ಹೆಚ್ಚಳಕ್ಕೆ ಅರ್ಚಕರ ಮನವಿ
ಹೈಕಮಾಂಡ್ ನೀಡಿರುವ ಸಂದೇಶವನ್ನು ನಾನು ಶೆಟ್ಟರ್ ಅವರಿಗೆ ತಲುಪಿಸಿದ್ದೇನೆ. ಅವರಿಗೆ ಮುಂದಿನ ದಿನಗಳಲ್ಲಿ ಯಾವ ಸ್ಥಾನಮಾನ ನೀಡಬೇಕು ಎಂಬುದನ್ನು ಬಹಿರಂಗವಾಗಿ ಹೇಳಿಯೇ ಮಾಡುತ್ತೇವೆ. ಪಕ್ಷ ಶೆಟ್ಟರ್ ಅವರ ಜತೆಯಲ್ಲಿದೆ ಎಂದು ಸ್ಪಷ್ಟಪಡಿಸಿದರು.
DKShivakumar, meets, #jagadishshettar, #lakshmansavadi,