ಬೆಂಗಳೂರು, ಮಾ.1- ನೀರಿಗಾಗಿ ನಡಿಗೆ ಮೇಕೆದಾಟು ಪಾದಯಾತ್ರೆ ಬೆಂಗಳೂರು ಪ್ರವೇಶಿಸಿದ್ದು, ಇಂದಿನಿಂದ ಮೂರು ದಿನಗಳ ಕಾಲ ನಗರದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲು ಸಂಚರಿಸಲಿದ್ದು, ಅನಿವಾರ್ಯವಾಗಿ ಎದುರಾಗುವ ಸಂಚಾರ ದಟ್ಟಣೆಗೆ ಕ್ಷಮೆ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.
ಫೆ.27ರಿಂದ ಎರಡನೇ ಹಂತದಲ್ಲಿ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಯನ್ನು ಆರಂಭಿಸಿದೆ. ಮೊದಲ ದಿನ ರಾಮನಗರದಿಂದ ಪಾದಯಾತ್ರೆ ಶುರುವಾದಾಗ ಮೈಸೂರು, ಮಂಡ್ಯ ಭಾಗದ ಜನ ಸಂಚಾರ ದಟ್ಟಣೆಯಿಂದ ಹೈರಾಣಾಗಿ ಹೋಗಿದ್ದರು. ಎರಡನೇ ದಿನ ಪರಿಸ್ಥಿತಿ ಸುಧಾರಣೆಯಾಗಿದ್ದು, ನಿನ್ನೆ ಕೆಂಗೇರಿಗೆ ಪಾದಯಾತ್ರೆ ಪ್ರವೇಶ ಪಡೆದಿದೆ. ಇಂದಿನಿಂದ ನಗರದಾದ್ಯಂತ ಸಂಚರಿಸಲಿದೆ.
ಪಾದಯಾತ್ರೆಯಲ್ಲಿ ಸಾವಿರಾರು ಮಂದಿ ಭಾಗವಹಿಸುವುದರಿಂದ ಸಹಜವಾಗಿ ಸಂಚಾರದ ಮೇಲೆ ಒತ್ತಡ ಬೀಳುತ್ತದೆ. ಮೊದಲೇ ಬೆಂಗಳೂರಿನ ರಸ್ತೆಗಳು ವಾಹನಗಳಿಂದ ತುಂಬಿ ತುಳುಕುತ್ತಿದ್ದು, ವೇಗ ಮಿತಿ 10 ಕಿ.ಮೀ. ದಾಟುವುದಿಲ್ಲ. ಇನ್ನು ಪಾದಯಾತ್ರೆಯಿಂದ ಹೆಚ್ಚುವರಿಯಾಗಿ 10ರಿಂದ 15 ಸಾವಿರ ಜನರ ರಸ್ತೆಗಳ ತುಂಬೆಲ್ಲಾ ನಡೆದು ಹೋಗಲು ಆರಂಭಿಸಿದರೆ ವಾಹನ ಸಂಚಾರ ಅಕ್ಷರಶಃ ಸ್ಥಗಿತಗೊಳ್ಳುವ ಹಂತಕ್ಕೆ ತಲುಪುತ್ತದೆ. ಇದರಿಂದ ಪಾದಯಾತ್ರೆಯ ಸುತ್ತಮುತ್ತಲ ಭಾಗದಲ್ಲಿ ಜನ ಸಂಕಷ್ಟಕ್ಕೊಳಗಾಗುತ್ತಾರೆ.
ಅದಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ವಿಡಿಯೋ ಸಂದೇಶದ ಮೂಲಕ ಜನರ ಕ್ಷಮೆಯಾಚಿಸಿದ್ದಾರೆ. ನಾಡಿನ ಜನತೆಗೆ ಶಿವರಾತ್ರಿ ಹಬ್ಬದ ಶುಭಾಶಯಗಳೊಂದಿಗೆ ಮಾತು ಆರಂಭಿಸಿರುವ ಅಧ್ಯಕ್ಷರು, ಕಾಂಗ್ರೆಸ್ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದೆ.
ಸಂಘ-ಸಂಸ್ಥೆಗಳು, ಗುರು-ಹಿರಿಯರು, ಮಠಾೀಧಿಶರು ಹೆಜ್ಜೆ ಹಾಕುತ್ತಿದ್ದಾರೆ. ಕಾವೇರಿ ನೀರಿನ ಹಕ್ಕಿಗಾಗಿ ನಡೆಯುತ್ತಿರುವ ಪಾದಯಾತ್ರೆಯಲ್ಲಿ ಹೆಚ್ಚಿನ ಸಾರ್ವಜನಿಕರು ಭಾಗವಹಿಸಬೇಕು. ಈಗಾಗಲೇ ಆರು ದಿನಗಳ ಪಾದಯಾತ್ರೆ ಮುಕ್ತಾಯವಾಗಿದೆ. ಮುಂದಿನ ಮೂರು ದಿನಗಳ ಕಾಲ ನಗರದಾದ್ಯಂತ ಸಂಚರಿಸುತ್ತೇವೆ. ಈ ವೇಳೆ ಉಂಟಾಗುವ ಸಂಚಾರ ಅವ್ಯವಸ್ಥೆಗೆ ಕ್ಷಮೆ ಇರಲಿ ಎಂದಿದ್ದಾರೆ.
ಮೂರು ದಿನಗಳ ಕಾಲ ಸಂಚಾರದ ಸಮಸ್ಯೆಗಳನ್ನು ಸಹಿಸಿಕೊಂಡರೆ ಮುಂದಿನ 30 ವರ್ಷಗಳ ಕಾಲ ಕುಡಿಯಲು ಕಾವೇರಿ ನೀರು ಸಿಗುತ್ತದೆ. ಸರ್ಕಾರದ ಮೇಲೆ ಒತ್ತಡ ಹೇರಲು ಹೋರಾಟ ಅನಿವಾರ್ಯ ಎಂದು ಸ್ಪಷ್ಟಪಡಿಸಿದ್ದಾರೆ.
