ಸಚಿವ ಆನಂದ್‍ಸಿಂಗ್ – ಡಿಕೆಶಿ ಭೇಟಿ, ರಾಜಕೀಯ ವಲಯದಲ್ಲಿ ಸಂಚಲನ

Social Share

ಬೆಂಗಳೂರು,ಜ.31- ಪ್ರವಾಸೋದ್ಯಮ ಸಚಿವ ಆನಂದ್‍ಸಿಂಗ್ ಅವರು ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಇಂದು ಬೆಳಗ್ಗೆ ಖಾಸಗಿ ಕಾರಿನಲ್ಲಿ ಸದಾಶಿವನಗರದ ಡಿ.ಕೆ.ಶಿವಕುಮಾರ್ ಅವರ ಮನೆಗೆ ಆಗಮಿಸಿದ ಆನಂದ್‍ಸಿಂಗ್ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ರಹಸ್ಯ ಸಭೆ ನಡೆಸಿದರು.
ಕಾಂಗ್ರೆಸಿನಿಂದ ಪಕ್ಷಾಂತರವಾದ ವಲಸಿಗ ಕಾಂಗ್ರೆಸಿಗರು ಮರಳಿ ತವರು ಪಕ್ಷದತ್ತ ಮುಖ ಮಾಡಿದ್ದಾರೆ ಎಂಬ ವದಂತಿಗಳ ನಡುವೆ ಡಿ.ಕೆ.ಶಿವಕುಮಾರ್ ಹಾಗೂ ಆನಂದ್ ಸಿಂಗ್ ಅವರ ಭೇಟಿ ಕುತೂಹಲ ಕೆರಳಿಸಿದೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಈ ಭೇಟಿಯ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇಲ್ಲ.
ಬಳ್ಳಾರಿ ಜಿಲ್ಲೆಯಲ್ಲಿ ತುಂಗಾ ಆರತಿ ಕಾರ್ಯಕ್ರಮ ವೈಭವವಾಗಿ ನಡೆಯುತ್ತಿದ್ದು, ಪ್ರಾಸೋದ್ಯಮಕ್ಕೆ ಉತ್ತೇಜನಕಾರಿಯಾಗಿದೆ. ತಮ್ಮ ತವರು ಕ್ಷೇತ್ರ ಕನಕಪುರದಲ್ಲಿ ಮೇಕೆದಾಟು ಮತ್ತು ಸಂಗಮ ಪ್ರವಾಸಿ ತಾಣಗಳಿದ್ದು, ಅಲ್ಲಿ ಕಾವೇರಿ ಆರತಿ ಆಯೋಜಿಸಲು ಮನವಿ ಮಾಡಿದ್ದೆ. ಅದರ ಬಗ್ಗೆ ಚರ್ಚೆ ಮಾಡಲು ಸಚಿವ ಆನಂದ್‍ಸಿಂಗ್ ಖುದ್ದಾಗಿ ಬಂದಿದ್ದರು. ನೀವು ಹಿರಿಯನಾಯಕರಾಗಿದ್ದರಿಂದ ನಾನೇ ನಿಮ್ಮ ಮನೆಗೆ ಬರುತ್ತೇನೆ ಎಂದು ಆನಂದ್‍ಸಿಂಗ್ ಹೇಳಿದ್ದರು. ರಾಜಕಾರಣವನ್ನು ಮನೆಯಲ್ಲಿ ಭೇಟಿ ಮಾಡಿ ರಾಜಾರೋಷವಾಗಿ ಮಾಡುವುದಿಲ್ಲ. ಇದು ಸಾಮಾನ್ಯ ಪ್ರಜ್ಞೆ.
ರಾಜಕಾರಗಳೇನಿದ್ದರೂ ಹೋಟೆಲ್, ರೆಸಾರ್ಟ್‍ಗಳಲ್ಲಿ ನಡೆಯುತ್ತವೆ. ಸಚಿವರು ಧೈರ್ಯವಾಗಿ ನಮ್ಮ ಮನೆಗೆ ಬರುತ್ತಾರೆ ಎಂದರೆ ಅದು ಅಭಿವೃದ್ಧಿ ವಿಷಯಕ್ಕೆ ಮಾತ್ರ ಎಂದು ಸ್ಪಷ್ಟಪಡಿಸಿದರು. ಆನಂದ್‍ಸಿಂಗ್ ಖಾಸಗಿ ಕಾರಿನಲ್ಲಿ ಬಂದರು ಎಂಬುದು ದೊಡ್ಡ ವಿಷಯವಲ್ಲ. ಈ ಭೇಟಿಯಲ್ಲಿ ಯಾವುದೇ ರಾಜಕೀಯ ಎಲ್ಲ ಎಂದು ಅವರು ಪುನರ್‍ಚ್ಚರಿಸಿದರು.
ಎಸ್.ಆರ್.ಪಾಟೀಲ್ ಮತ್ತು ಸಿ.ಎಂ.ಇಬ್ರಾಹಿಂ ಅವರು ಸಭೆ ನಡೆಸಿ ಅಲ್ಪಸಂಖ್ಯಾತ ಮತ್ತು ಲಿಂಗಾಯಿತ ಸಭೆ ನಡೆಸುವ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಎಸ್.ಆರ್.ಪಾಟೀಲ್ ಹಿರಿಯ ನಾಯಕರು. ಅಷ್ಟು ಸುಲಭವಾಗಿ ಪಕ್ಷ ಬಿಟ್ಟು ಹೋಗುವ ನಾಯಕರಲ್ಲ. ಸಿ.ಎಂ.ಇಬ್ರಾಹಿಂ ಕೂಡ ಇನ್ನು ಕಾಂಗ್ರೆಸ್‍ನಲ್ಲೇ ಇದ್ದಾರೆ. ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಒಂದು ಹುದ್ದೆಗಾಗಿ ಪಕ್ಷ ತೊರೆಯುವುದು ಸೂಕ್ತವಲ್ಲ ಎಂದರು.
ನಾಳೆ ಕೇಂದ್ರ ಸರ್ಕಾರದ ಬಜೆಟ್ ಮಂಡನೆಯಾಗಲಿದೆ. ಅಲ್ಲಿ ಕೋವಿಡ್ ಸಂತ್ರಸ್ತರಿಗೆ ಹೆಚ್ಚಿನ ನೆರವು ಸಿಗುವ ವಿಶ್ವಾಸವಿದೆ ಎಂದ ಅವರು, ಗೋವಾ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದ ಮೂಲಕ ಸರ್ಕಾರ ರಚಿಸಲಿದೆ ಎಂದರು.

Articles You Might Like

Share This Article