ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರ ಜೇಬಿಗೆ ಕನ್ನ ಹಾಕುತ್ತಿವೆ : ಡಿಕೆಶಿ ಆಕ್ರೋಶ

Spread the love

ಬೆಂಗಳೂರು, ಜೂ.11- ದರ ಏರಿಕೆಯ ಮೂಲಕ ಸರ್ಕಾರಗಳು ಜನರ ಜೋಬಿಗೆ ಕನ್ನ ಹಾಕಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದರು. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ನಾಟ್ಔಟ್ 100, ಐದು ದಿನಗಳ ಪ್ರತಿಭಟನೆಯ ಆರಂಭದ ದಿನವಾದ ಇಂದು ಬೆಂಗಳೂರಿನ ಶಿವಾನಂದ ಸರ್ಕಲ್ ನ ರೆಡ್ಡಿ ಪೆಟ್ರೋಲ್ ಬಂಕ್ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ದೇಶದ 140 ಕೋಟಿ ಜನರಿಗೂ ತೈಲ ಬೆಲೆ ಏರಿಕೆ ಮೂಲಕ ಬರೆ ಎಳೆದಿದ್ದಾರೆ.

ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದ ದಿನ ನಿತ್ಯ ವಸ್ತುಗಳ ಬೆಲೆ ಕೂಡ ಹೆಚ್ಚಾಗುತ್ತಿದೆ. ಹಿಂದೆ ಎರಡು, ಮೂರು ರೂಪಾಯಿ ಹೆಚ್ಚಾದಾಗ ಬಿಜೆಪಿಯ ಶೋಭಾ ಕರಂದ್ಲಾಜೆ, ಯಡಿಯೂರಪ್ಪ, ಅಶೋಕ್ ಅವರು ಏನೆಲ್ಲಾ ಪ್ರತಿಭಟನೆ ಮಾಡಿದ್ದರು ಎಂದು ನೆನಪಿಸಿಕೊಳ್ಳಿ. ಕಳೆದ ವರ್ಷ ಜೂನ್ ನಿಂದ ಈವರೆಗೂ 42 ಬಾರಿ ದರ ಹೆಚ್ಚಾಗಿದೆ.

ಏಪ್ರಿಲ್, ಮೇನಲ್ಲಿ ಚುನಾವಣೆ ಕಾರಣಕ್ಕೆ ದರ ಹೆಚ್ಚಿಸಲಿಲ್ಲ. ಉಳಿದಂತೆ ತೈಲ ಬೆಲೆ ಹೆಚ್ಚಳದಿಂದ ಕೇಂದ್ರ ಸರ್ಕಾರ 20.60 ಲಕ್ಷ ಕೋಟಿ ತೆರಿಗೆ ಸಂಗ್ರಹಿಸಿದೆ. ದರ ಏರಿಕೆ ಮೂಲಕ ಕೇಂದ್ರ ಸರ್ಕಾರ ಜನರ ಜೇಬುಕಳ್ಳತನ ಮಾಡುತ್ತಿದೆ. ಇದು ಪಿಕ್ ಪ್ಯಾಕೇಟ್ ಸರ್ಕಾರ ಎಂದು ಕಿಡಿಕಾರಿದದರು.

ನಾವು ಐದು ದಿನ ಪ್ರತಿಭಟನೆ ಮಾಡುತ್ತೇವೆ. ಕೋವಿಡ್ ಕಾರಣಕ್ಕೆ ಪ್ರತಿಭಟನೆ ನಡೆಸಿದರೆ ಕೇಸು ದಾಖಲಿಸುವುದಾಗಿ ಪೊಲೀಸರು ಹೆದರಿಸುತ್ತಿದ್ದಾರೆ. ಸರ್ಕಾರ ಚುನಾವಣೆ ಮಾಡುವಾಗ ಕೇಸು ಹಾಕಲಿಲ್ಲ. ಜನ ಪರವಾಗಿ ಪ್ರತಿಭಟನೆ ಮಾಡಿದರೆ ಕೇಸು ಹಾಕುತ್ತಾರಂತೆ ನಾವು ಹೆದರುವುದಿಲ್ಲ. ಸ್ವತಂತ್ರ್ಯಕ್ಕಾಗಿ ಹೋರಾಟ ನಡೆಸಿದ ವಂಶಸ್ಥರು ನಾವು. ಕೇಸು, ಜೈಲಿಗೆ ಹೆದರುವುದಿಲ್ಲ ಎಂದರು.

ಹಿಂದೆ ತೈಲ ಬೆಲೆ ಹೆಚ್ಚಳವಾದಾಗ ಯಡಿಯೂರಪ್ಪ, ಈಶ್ವರಪ್ಪ ಸೇರಿದಂತೆ ಅನೇಕರು ನಡೆಸಿದ ಪ್ರತಿಭಟನೆಯ ಕುರಿತು ನಮ್ಮಲ್ಲಿ ಪೋಟೋಗಳಿವೆ. ಅವುಗಳನ್ನು ಯಡಿಯೂರಪ್ಪ ಅವರಿಗೆ 15ನೇ ತಾರಿಕಿನ ಬಳಿಕ ಉಡುಗೊರೆಯಾಗಿ ಕಳುಹಿಸಿಕೊಡುತ್ತೇವೆ. ಕೇಂದ್ರ ಸರ್ಕಾರ ಕೂಡಲೇ ತೆರಿಗೆ ಕಡಿಮೆ ಮಾಡಬೇಕು, ಜನರ ಮೇಲಿನ ಹೊರೆಯನ್ನು ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದರು.

ಮಾಜಿ ಸಚಿವ ಆರ್.ವಿದೇಶಪಾಂಡೆ ಮಾತನಾಡಿ, ವಿರೋಧ ಪಕ್ಷದಲ್ಲಿದ್ದಾಗ ಏನೆಲ್ಲಾ ಟೀಕೆ ಮಾಡಿದ್ದರು, ಪ್ರತಿಭಟೆ ಮಾಡಿದ್ದರು ಎಂದು ಸ್ಮರಿಸಿಕೊಳ್ಳಲಿ. ಇವರಿಗೆ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಇಲ್ಲ. ರಾಜಿನಾಮೆ ಕೊಟ್ಟು ಮನೆಗೆ ಹೋಗಿ ಎಂದು ಒತ್ತಾಯಿಸಿದರು.

ಶಾಸಕರನ್ನು ಖರೀದಿ ಮಾಡಿ ಸರ್ಕಾರ ರಚಿಸುವುದು ಮಾತ್ರ ಬಿಜೆಪಿಗೆ ಗೋತ್ತು, ಆ ರೀತಿ ಸರ್ಕಾರ ರಚನೆ ಮಾಡಿದ ಕರ್ನಾಟಕದಲ್ಲಿ ಅನುಭವಿಸುತ್ತಿದ್ದಾರೆ, ಮುಖ್ಯಮಂತ್ರಿ ವಿರುದ್ಧವೇ ಸಹಿ ಸಂಗ್ರಹ ನಡೆಯುತ್ತಿದೆ. ತೈಲ ಬೆಲೆ ಏರಿಕೆ ನಡುವೆ, ವಿದ್ಯುತ್ ದರ ಕೂಡ ಹೆಚ್ಚಿಸಿರುವುದು ಖಂಡನೀಯ ಎಂದು ಕಿಡಿಕಾರಿದರು.

ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಮೋದಿ ಅವರ ಆಡಳಿತಕ್ಕೆ ಪೆಟ್ರೋಲ್, ಡೀಸೆಲೆ ಬೆಲೆ ಏರಿಕೆ ಒಂದು ಉದಾಹರಣೆಯಾಗಿದೆ. ಜನರಿಗೆ ಎಷ್ಟೇ ತೊಂದರೆ ಕೊಟ್ಟರೂ ಜನ ನಮಗೆ ಮತ ಹಾಕುತ್ತಾರೆ ಎಂದು ಮೋದಿ ನಂಬಿದ್ದಾರೆ. ಅವರಿಗೆ ಕಣ್ಣು, ಕಿವಿ ಇಲ್ಲ. ಜನರ ಕಷ್ಟ ಕಾಣುತ್ತಿಲ್ಲ.

ಮೋದಿ ಏಳು ವರ್ಷದಿಂದ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದೀರಾ, 100 ನಾಟೌ ಔಟ್ ಆಗಿದ್ದಾರೆ. ಒಂದು ಮೋದಿ ಬಿಳಿ ಗಡ್ಡ, ಮತ್ತೊಂದು ತೈಲ ಬೆಲೆ ಚೆನ್ನಾಗಿ ಬೆಳೆಯುತ್ತಿದೆ. ಉಳಿದಂತೆ ಜನರ ಜೇಬು ಖಾಲಿಯಾಗಿದೆ. ನೋಟ್ ಬ್ಯಾನ್ ಮಾಡಿ ಕಷ್ಟ ತಂದಿಟ್ಟರು. ಲಾಕ್ ಡೌನ್ ನಿಂದ ಮತ್ತಷ್ಟು ಹೈರಾಣು ಮಾಡಿದರು.

ಕಷ್ಟದಲ್ಲಿರುವವರಿಗೆ ಕೇಂದ್ರ ಸರ್ಕಾರ ಒಂದು ರೂಪಾಯಿ ಕೂಡ ಸಹಾಯ ಮಾಡಿಲ್ಲ. ಚುನಾವಣಾ ಆಗುತ್ತಿದ್ದಂತೆ ತೈಲ ಬೆಲೆ ಏರಿಕೆ ಮಾಡಿ ತೊಂದರೆ ಕೊಡುತ್ತಿದ್ದಾರೆ. ಬಡವರಿಗೆ ಸಹಾಯ ಮಾಡಿಲ್ಲ, ಬದಲಿಗೆ ಶ್ರೀಮಂತರ ಆಸ್ತಿ ಬೆಳೆಯಲು ಕಾರಣರಾಗಿದ್ದಾರೆ ಎಂದು ಕಿಡಿಕಾರಿದರು.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಹಿರಿಯ ನಾಯಕರಾದ ವಿ.ಆರ್.ಸುದರ್ಶನ್, ಅಶೋಕ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಶೇಖರ್ ಸೇರಿದಂತೆ ಅನೇಕ ನಾಯಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪ್ರತಿಭಟನೆಯ ಬಳಿಕ ಪೊಲೀಸರು ನಾಯಕರನ್ನು ವಶಕ್ಕೆ ಪಡೆದು ಬಿಡುಗಡೆ ಮಾಡಿದರು.

Facebook Comments

Sri Raghav

Admin