ಬೆಂಗಳೂರು-ಮೈಸೂರು ರಸ್ತೆ ನಿರ್ಮಿಸಿದವರಿಗೆ ಪದ್ಮಭೂಷಣ ಕೊಡಿಸಬೇಕು..!

Social Share

ಬೆಂಗಳೂರು, ಆ.30- ಮೈಸೂರು ಹೆದ್ದಾರಿ ಪ್ಲಾನ್ ಮಾಡಿರುವ ಇಂಜಿನಿಯರ್ಗಳಿಗೆ ಮುಖ್ಯಮಂತ್ರಿಗಳು ಪದ್ಮಭೂಷಣ ಅಥವಾ ಬೇರೆ ಪ್ರಶಸ್ತಿ ಕೊಡಿಸಬೇಕು. ರಾಷ್ಟ್ರೀಯ ಹೆದ್ದಾರಿ ಮಾಡುವಾಗ ಎತ್ತರ ಪ್ರದೇಶದಲ್ಲಿ ನೀರು ಯಾವ ರೀತಿ ಹೋಗಬೇಕು ಎಂಬುದರ ಬಗ್ಗೆ ಸಾಮಾನ್ಯ ಪ್ರಜ್ಞೆ ಇಟ್ಟುಕೊಂಡು ಯೋಜನೆ ರೂಪಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ರಸ್ತೆಯ ಟೋಲ್ ಜಾಗ ಈಗ ಕೆರೆಯಾಗಿದೆ. ಮುಖ್ಯಮಂತ್ರಿಗಳು ಕೂಡಲೇ ಈ ವಿಚಾರದಲ್ಲಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ರಸ್ತೆ ನಿರ್ಮಾಣ ಎಂದರೆ ಜಲ್ಲಿ, ಟಾರು ಅಥವಾ ಕಾಂಕ್ರೀಟ್ ಹಾಕಿ ಹಣ ಪಡೆಯುವುದಲ್ಲ. ಮಳೆ ಬಂದಾಗ ನೀರು ಹೇಗೆ ಹೋಗಬೇಕು, ಎಲ್ಲಿ ಕಾಲುವೆ ತೆಗೆಯಬೇಕು ಎಂದು ಯೋಜನೆ ರೂಪಿಸುವುದು ಸರ್ಕಾರ ಹಾಗೂ ಇಂಜಿನಿಯರ್ ಗಳ ಕರ್ತವ್ಯ ಎಂದರು.

ರಾಷ್ಟ್ರೀಯ ಹೆದ್ದಾರಿ ಸ್ಥಿತಿ ಹೀಗಾದರೆ ಹಳ್ಳಿ ರಸ್ತೆಗಳ ಪರಿಸ್ಥಿತಿ ಏನಾಗಬೇಕು. ಒಬ್ಬಿಬ್ಬರ ಪ್ರಾಣ ಹಾನಿಯಾಗಿರುವ ಮಾಹಿತಿ ಬಂದಿದ್ದು, ರಾಮನಗರ, ಚನ್ನಪಟ್ಟಣ, ಕನಕಪುರದ ಕೆಲವು ಭಾಗಗಳಿಗೆ ಹೋಗಿ ಪರಿಸ್ಥಿತಿ ಪರಿಶೀಲಿಸುತ್ತೇನೆ. ಅವರಿಗೆ ಧೈರ್ಯ ತುಂಬುತ್ತೇನೆ. ಸರ್ಕಾರದ ಮೇಲೆ ಒತ್ತಡ ಹಾಕುತ್ತೇನೆ ಎಂದರು.

ಈ ಸಮಯದಲ್ಲಿ ಆಡಳಿತ ವ್ಯವಸ್ಥೆ ಚುರುಕಾಗಿ ಕೆಲಸ ಮಾಡಬೇಕು. ಒಂದು ವಾರ ಅಥವಾ 10 ದಿನಗಳಲ್ಲಿ ಪರಿಹಾರ ನೀಡುತ್ತೇನೆ ಎಂದು ಹೇಳುವುದಲ್ಲ. ತಕ್ಷಣ ಸ್ಥಳದಲ್ಲೇ ಚೆಕ್ ಮೂಲಕ ಪರಿಹಾರ ನೀಡಲು ಸಮಸ್ಯೆ ಏನು? ಹಾನಿಗೆ ಒಳಗಾದವರನ್ನು ಬೇರೆ ಕಡೆಗೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು.

ರೈತನ ಮಗನಾಗಿ, ರೈತನಾಗಿ, ಇಂಧನ ಸಚಿವನಾಗಿ, ಜಲಸಂಪನ್ಮೂಲ ಸಚಿವನಾಗಿ ಮಳೆಯ ಅವಶ್ಯಕತೆ ಎಷ್ಟಿದೆ ಎಂಬುದು ನನಗೆ ಅರಿವಿದೆ. ಹೀಗಾಗಿ ಮಳೆ ಬರಬಾರದು ಎಂದು ಹೇಳುವುದಿಲ್ಲ. ಇಷ್ಟು ಮಳೆ ಬಂದು ಪ್ರವಾಹದ ಸ್ಥಿತಿ ನಿರ್ಮಾಣವಾದ ನಂತರ ಎಲ್ಲಾ ನೀರು ಸಮುದ್ರ ಸೇರುತ್ತಿದೆ. ಈ ನೀರನ್ನು ತಡೆಹಿಡಿದು ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮೇಕೆದಾಟು ಯೋಜನೆ ಆಗ್ರಹಿಸಿ ಪಾದಯಾತ್ರೆ ಮಾಡಿದೆವು ಎಂದು ಹೇಳಿದರು.

ರೈತರ ಪಂಪ್ ಸೆಟ್ ವಿದ್ಯುತ್ ಸಬ್ಸಿಡಿಗಾಗಿ ನಮ್ಮ ಸರ್ಕಾರ 12 ರಿಂದ 15 ಸಾವಿರ ಕೋಟಿ ನೀಡಿತ್ತು. ಅಣೆಕಟ್ಟುಗಳು ತುಂಬಿದಾಗ ಕಡಿಮೆ ದರದಲ್ಲಿ ಹೆಚ್ಚಿನ ಪ್ರಮಾಣದ ವಿದ್ಯುತ್ ಉತ್ಪಾದನೆ ಮಾಡಬಹುದು. ಒಂದು ದಿನ ಮಳೆ ಹೆಚ್ಚಾಗಿ ಸುರಿದರೆ ರೈತ ಪಂಪ್ ಸೆಟ್ ಆನ್ ಮಾಡದೆ, ಜನ ಎಸಿ ಬಳಸದೆ ಇದ್ದರೆ ಹಾಗೂ ಇತರ ಮಾರ್ಗಗಳಿಂದ ಸರ್ಕಾರದ ಬೊಕ್ಕಸಕ್ಕೆ 1 ಸಾವಿರ ಕೋಟಿ ರೂ. ಉಳಿಯುತ್ತದೆ. ಹೀಗಾಗಿ ಮಳೆಯಿಂದ ಈ ಎಲ್ಲಾ ಲಾಭದಾಯಕ ಅಂಶಗಳು ಇವೆ ಎಂದು ವಿವರಿಸಿದರು.

ನೋವಿನ ಸಂಗತಿ ಎಂದರೆ ಅತಿಯಾದ ಮಳೆಗೆ ಆಸ್ತಿಪಾಸ್ತಿಗಳು ನಷ್ಟವಾಗುತ್ತಿದೆ. ಹೀಗಾಗಿ ಸರ್ಕಾರ ಸಂತ್ರಸ್ತರ ನೆರವಿಗೆ ನಿಲ್ಲಬೇಕು. ತಗ್ಗು ಪ್ರದೇಶದಲ್ಲಿ ಇರುವ ಜನರಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.

Articles You Might Like

Share This Article