ತಮ್ಮ ಪರವಾಗಿ ಪ್ರತಿಭಟನೆ ಕುರಿತು ಡಿಕೆಶಿ ಪ್ರತಿಕ್ರಿಯೆ ಏನು ಗೊತ್ತೇ..?

ಬೆಂಗಳೂರು,ಸೆ.11- ತಮ್ಮ ಪರವಾಗಿ ಪ್ರತಿಭಟನೆ ನಡೆಸುತ್ತಿರುವುದಕ್ಕೆ ಕೃತಜ್ಞತಾಪೂರ್ವ ಧನ್ಯವಾದ ಹೇಳಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ.

ಜಾರಿ ನಿರ್ದೇಶನಾಲಯದ ಕಾರ್ಯಾಚರಣೆಯಿಂದ ಬಂಧನಕ್ಕೊಳಗಾಗಿ ವಿಚಾರಣೆಗೊಳಗಾಗಿರುವ ಡಿ.ಕೆ.ಶಿವಕುಮಾರ್ ಅವರ ಟ್ವೀಟರ್ ಖಾತೆಯಲ್ಲಿ ಸಂದೇಶ ಪ್ರಕಟಗೊಂಡಿದ್ದು, ಸಮಾಜದ ನಾನಾ ಕ್ಷೇತ್ರಗಳ ಮುಖಂಡರು, ಸ್ನೇಹಿತರು, ಹಿತೈಷಿಗಳು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿರುವುದು ಕೇಳಿ ನನ್ನ ಮನಸ್ಸು ಕಣ್ಣು ತುಂಬಿಬಂದಿದೆ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನು ಅಬಾರಿ ಎಂದಿದ್ದಾರೆ.

ನಾನು ಮತ್ತೊಮ್ಮೆ ಸಾರಿ ಸಾರಿ ಹೇಳುತ್ತೇನೆ. ನಿಮ್ಮ ಗೌರವ ಜನತೆಗೆ ಧಕ್ಕೆ ತರುವಂತಹ ಯಾವುದೇ ಕೆಲಸವನ್ನು ನಾನು ಮಾಡಿಲ್ಲ. ಮಾಡುವುದೂ ಇಲ್ಲ. ನನ್ನ ಮೇಲೆ ನೀವು ಇಟ್ಟಿರುವ ನಂಬಿಕೆ ಉಳಿಸಿಕೊಳ್ಳಲು ಬದ್ಧನಾಗಿದ್ದೇನೆ. ನನಗೆ ದೇವರು ಮತ್ತು ಈ ನೆಲದ ಕಾನೂನಿನ ಮೇಲೆ ಸಂಪೂರ್ಣ ವಿಶ್ವಾಸವಿದೆ ಜೊತೆಗೆ ನಿಮ್ಮ ಹಾರೈಕೆಯೂ ಇದೆ.

ಈ ಎಲ್ಲ ಸಂಕಷ್ಟಗಳಿಂದ ಪಾರಾಗಿ ಬರುತ್ತೇನೆ. ನಿಮ್ಮ ನಡುವೆಯೇ ಇದ್ದುಕೊಂಡು ಎಂದಿನಂತೆ ಜನಸೇವೆ ಮುಂದುವರೆಸಿಕೊಂಡು ಹೋಗುತ್ತೇನೆ ಎಂದು ಹೇಳಿದ್ದಾರೆ. ಯಾವುದೇ ಪ್ರತಿಭಟನೆಗಳು ಶಾಂತಿಯುತವಾಗಿರಲಿ. ಶಾಂತಿಭಂಗಕ್ಕೆ ಅವಕಾಶ ನೀಡಬೇಡಿ. ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಬೇಡಿ, ಅವರಿಗೆ ನೆಮ್ಮದಿಗೆ ಭಂಗ ತರಬೇಡಿ. ಈ ಸಂದರ್ಭವನ್ನು ದುರುಪಯೋಗ ಮಾಡಿಕೊಳ್ಳುವ ಎದುರಾಳಿಗಳಿಗೆ ಅವಕಾಶ ಮಾಡಿಕೊಡಬೇಡಿ ಎಂದು ಮನವಿ ಮಾಡಿದ್ದಾರೆ.

ಡಿ.ಕೆ.ಶಿವಕುಮಾರ್ ಅವರ ಸಹೋದರರಾಗಿರುವ ಡಿ.ಕೆ.ಸುರೇಶ್ ಅವರು ಟ್ವೀಟರ್ ಖಾತೆಯಲ್ಲಿ , ಶಾಂತಿಯುತ ಪ್ರತಿಭಟನೆ ಮಾಡುವಂತೆ ಮನವಿ ಮಾಡಿದ್ದು, ರಾಜ್ಯದ ಜನರು ತಮ್ಮ ಅಣ್ಣನ ಮೇಲೆ ತೋರಿಸಿರುವ ಪ್ರೀತಿ ವಿಶ್ವಾಸಗಳಿಂದ ಹೃದಯ ತುಂಬಿಬಂದಿದೆ ಎಂದಿದ್ದಾರೆ.  ಬಿಜೆಪಿಯ ದ್ವೇಷದ ರಾಜಕಾರಣದ ವಿರುದ್ದ ಎಲ್ಲರೂ ಒಟ್ಟಾಗಿರುವುದು ಸಮಾಧಾನ ತಂದಿದೆ ಎಂದು ಅವರು ಹೇಳಿದ್ದಾರೆ.

Sri Raghav

Admin