ಬೆಂಗಳೂರು, ಜ.21- ಸೋಂಕು ಕಡಿಮೆಯಿದ್ದಾಗ ರಾಜಕೀಯ ಕಾರಣಗಳಿಗಾಗಿ ವಾರಾಂತ್ಯದ ನಿರ್ಬಂಧ ಜಾರಿ ಮಾಡಿದ್ದ ರಾಜ್ಯ ಸರ್ಕಾರ, ಸೋಂಕು ಹೆಚ್ಚಾಗಿರುವಾಗ ನಿರ್ಬಂಧವನ್ನು ತೆಗೆದು ಹಾಕಿದೆ. ನಾನು ಈ ಮೊದಲೇ ಹೇಳಿದಂತೆ ಇದು ಬಿಜೆಪಿಯ ಲಾಕ್‍ಡೌನ್ ಮತ್ತು ಕಪ್ರ್ಯೂ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತ ಪಡಿಸಿದರು.
ನಗರದಲ್ಲಿಂದು ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಮೇಕೆದಾಟು ಯೋಜನೆ ಶೀಘ್ರ ಅನುಷ್ಠಾನಕ್ಕೆ ಒತ್ತಾಯಿಸಿ ಪಾದಯಾತ್ರೆ ಆರಂಭಿಸಿದಾಗ ಅದಕ್ಕೆ ತೊಂದರೆ ಕೊಡುವ ಸಲುವಾಗಿ ವಾರಾಂತ್ಯದ ನಿರ್ಬಂಧ ಜಾರಿಗೆ ತಂದರು.
ಆಗ ಕೊರೊನಾ ಸೋಂಕಿನ ಪ್ರಮಾಣ ಕಡಿಮೆ ಇತ್ತು. ನಮ್ಮ ಮೇಲಿನ ದ್ವೇಷಕ್ಕಾಗಿ ಲಾಕ್‍ಡೌನ್ ಜಾರಿ ಮಾಡಿ ಜನರಿಗೆ ಸಾವಿರಾರು ಕೋಟಿ ರೂಪಾಯಿ ನಷ್ಟ ಮಾಡಿದರು. ಈಗ ಸೋಂಕಿನ ಪ್ರಮಾಣ ಏರಿಕೆಯಾಗಿದೆ. ಆದರೂ ಲಾಕ್‍ಡೌನ್ ತೆರವು ಮಾಡಿದ್ದಾರೆ ಎಂದು ಅಸಮದಾನ ವ್ಯಕ್ತ ಪಡಿಸಿದರು.
ತಾವು ಮೊದಲೇ ಸರ್ಕಾರದ ನಿರ್ಧಾರವನ್ನು ಬಿಜೆಪಿ ಹಿತಾಸಕ್ತಿಯ ಕ್ರಮ ಎಂದು ಟೀಕೆ ಮಾಡಿದ್ದನ್ನು ಸ್ಮರಿಸಿಕೊಂಡ ಡಿ.ಕೆ.ಶಿವಕುಮಾರ್, ಅವರಿಗೆ ಬೇಕಾದಂತೆ ಲಾಕ್‍ಡೌನ್ ಮಾಡುತ್ತಾರೆ, ಬೇಡವಾದಾಗ ತೆಗೆಯುತ್ತಾರೆ. ಇದರ ಹಿಂದೆ ರಾಜಕೀಯ ದುರುದ್ದೇಶವಿದೆಯೋ ಹೊರತು ಜನರ ಹಿತಾಸಕ್ತಿ ಇಲ್ಲ. ನಮ್ಮ ಪಾದಯಾತ್ರೆಯನ್ನು ತಡೆಯಲು ಜನರಿಗೆ ಸರ್ಕಾರ ಕಿರುಕೂಳ ನೀಡಿತ್ತು ಎಂದು ಕಿಡಿಕಾರಿದರು.
ಸರ್ಕಾರದ ಲಾಕ್‍ಡೌನ್, ಕಫ್ರ್ಯೂ, ಸ್ಪೀಡ್‍ಡೌನ್, ಬ್ರೆಕ್‍ಡೌನ್‍ನಂತಹ ಕ್ರಮಗಳಿಂದ ಜನರ ಆದಾಯ ಕುಸಿತವಾಗಿದೆ. ಜನರಲ್ಲಿ ದುಡ್ಡಿಲ್ಲದ ವೇಳೆ ಹಾಲು ಮತ್ತು ವಿದ್ಯುತ್ ದರ ಏರಿಕೆಯಂತಹ ಜನ ವಿರೋ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಸರ್ಕಾರ ಮೊದಲು ಜನರ ಆದಾಯ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಿ. ಅನಂತರ ಬೇಕಾದರೆ ಏನಾದರೂ ಮಾಡಿಕೊಳ್ಳಲಿ ಎಂದರು.
ಕಬ್ಬಿಣ, ಸೀಮೆಂಟ್ ದರಗಳು ನಿರಂತರವಾಗಿ ಹೆಚ್ಚಳವಾಗಿ ಜನ ಸಾಮಾನ್ಯರು ಸಂಕಷ್ಟ ಪಡುತ್ತಿದ್ದಾರೆ. ಅವುಗಳ ಬೆಲೆ ಕಡಿಮೆ ಮಾಡಲು ಸರ್ಕಾರ ಯಾವ ಕ್ರಮಗಳನ್ನು ಕೈಗೊಂಡಿಲ್ಲ. ಇನ್ನೊಂದೆಡೆ ಲಾಕ್‍ಡೌನ್, ಕಫ್ರ್ಯೂ, ಕೊರೊನಾದಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಅವರ ನೆರವಿಗೆ ಸರ್ಕಾರ ಏನನ್ನು ಮಾಡಿಲ್ಲ. ಬದಲಾಗಿ ಮತ್ತಷ್ಟು ಬೆಲೆ ಹೆಚ್ಚಳ ಮಾಡಿ ಜನ ಸಾಮಾನ್ಯರನ್ನು ಸಂಕಷ್ಟಕ್ಕೀಡು ಮಾಡುತ್ತಿದೆ ಎಂದು ಆರೋಪಿಸಿದರು.
ಸರ್ಕಾರದ ಸಾರಿಗೆ ಬಸ್, ಮೆಟ್ರೋಗಳಲ್ಲಿ ಪೂರ್ಣ ಪ್ರಮಾಣದ ಜನ ಸಂಚಾರ ಮಾಡಬಹು ಎಂಬ ನಿಯಮ ಇದೆ. ಅದೇ ಖಾಸಗಿಯವರು ನಡೆಸುವ ಹೊಟೇಲ್‍ಗಳು, ಥಿಯೆಟರ್‍ಗಳಲ್ಲಿ ಮಾತ್ರ ಅರ್ಧದಷ್ಟು ಸೀಟುಗಳ ಭರ್ತಿಗೆ ನಿಯಮ ಪಾಲನೆ ಮಾಡಬೇಕಿದೆ. ಕುಟುಂಬ ಒಟ್ಟಾಗಿ ಹೋದಾಗ 50:50 ಸೀಟು ನಿಯಮ ಪಾಲನೆ ಮಾಡಲು ಸಾಧ್ಯವೆ, ಅದು ವಾಸ್ತವಿಕವಲ್ಲ. ಸರ್ಕಾರ ಸಂಪೂರ್ಣ ಅವೈಜ್ಞಾನಿಕವಾದ ನಿಯಮಗಳನ್ನು ಮಾಡುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.
ವಿದ್ಯುತ್ ದರ ಏರಿಕೆ ಸಂಪೂರ್ಣ ಅವೈಜ್ಞಾನಿಕವಾಗಿದೆ. ವಿದ್ಯುತ್ ಬಾಕಿ ಪಾವತಿ ಮಾಡುವಂತೆ ಜನರ ಹಾಗೂ ಉದ್ಯಮಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಬಾಕಿ ಏಕೆ ಕೊಡಬೇಕು. ರಾಜ್ಯದಲ್ಲಿ ಸಾಕಷ್ಟು ವಿದ್ಯುತ್ ಉತ್ಪಾದನೆಯಿತ್ತು. ಆದರೂ ದರ ಏರಿಕೆಯೇಕೆ ಎಂದ ಪ್ರಶ್ನಿಸಿದ ಅವರು, ನಾನು ವಿದ್ಯುತ್ ಸಚಿವನಾಗಿ ಕೆಲಸ ಮಾಡಿದ್ದೇನೆ. ಎಸ್ಕಾಂಗಳ ಪರಿಸ್ಥಿತಿ ಬಗ್ಗೆ ನನಗೂ ಅರಿವಿದೆ. ಸಂಕಷ್ಟ ಸಮಯದಲ್ಲಿ ದರ ಏರಿಕೆ ಬೇಕಿಲ್ಲ ಎಂದರು.
ತಮಿಳು ನಾಡು ಹೋಗೆನಕಲ್ ಎರಡನೇ ಹಂತದ ಯೋಜನೆ ಜಾರಿಗೊಳಿಸಲು ಮುಂದಾಗಿರುವುದಕ್ಕೆ ಸದ್ಯಕ್ಕೆ ತಾವು ಪ್ರತಿಕ್ರಿಯಿಸುವುದಿಲ್ಲ. ಸರ್ಕಾರದವರು ಮೊದಲು ಏನು ಹೇಳುತ್ತಾರೋ ಹೇಳಲಿ. ನಂತರ ನಾನು ಮಾತನಾಡುತ್ತೇನೆ ಎಂದು ಹೇಳಿದರು. ಕಾಂಗ್ರೆಸ್ ಸದಸ್ಯತ್ವ ನೋಂದಣಿಗೆ ಪ್ರತಿ ಬೂತ್ ಮಟ್ಟಕ್ಕೂ ತಲಾ ಇಬ್ಬರನ್ನು ಸದಸ್ಯರನ್ನಾಗಿ ಮಾಡಲಾಗಿದೆ ಎಂದು ಹೇಳಿದರು.
