ಸ್ವಾತಂತ್ರ್ಯ ದಿನಾಚರಣೆಯಂದು ಮೇಟ್ರೋದಲ್ಲಿ ರಿಯಾಯಿತಿ ನೀಡುವಂತೆ ಡಿಕೆಶಿ ಮನವಿ ಪತ್ರ

Social Share

ಬೆಂಗಳೂರು, ಆ.10- ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಗಸ್ಟ್ 15ರಂದು ನಡೆಯಲಿರುವ ಪಾದಯಾತ್ರೆಯಲ್ಲಿ ಎಲ್ಲರೂ ಭಾಗವಹಿಸಲು ಅನುಕೂಲವಾಗುವಂತೆ ಮೇಟ್ರೋ ಪ್ರಯಾಣ ದರದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ.

ಬಿಎಂಆರ್‍ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿರುವ ಅವರು, ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಬೆಂಗಳೂರಿನಲ್ಲಿ ಸಂಗೊಳ್ಳಿ ರಾಯಣ್ಣ ವೃತ್ತದಿಂದ ನ್ಯಾಷನಲ್ ಕಾಲೇಜು ಮೈದಾನದವರೆಗೂ ಆರು ಕಿಲೋ ಮೀಟರ್ ಉದ್ದದ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಅದೇ ದಿನ ಬೆಂಗಳೂರಿನಲ್ಲಿ ಅನೇಕ ಕಡೆ ಕಾರ್ಯಕ್ರಮಗಳು ನಡೆಯಲಿವೆ. ಜನಸಂದಣಿ ಮತ್ತು ವಾಹನ ದಟ್ಟಣೆಯಿಂದ ಸಂಚಾರ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಎಂದಿದ್ದಾರೆ.

ಆ ದಿನ ಸರ್ಕಾರಿ ರಜೆ ಇರುವುದರಿಂದ ಸ್ವಾತಂತ್ರ್ಯ ಸಂಭ್ರಮ, ಸಡಗರದಲ್ಲಿ ಹೆಮ್ಮೆ ಜನ ಅತ್ಯಕ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಅವರ ಪ್ರಯಾಣಕ್ಕೆ ಅನುಕೂಲವಾಗುವಂತೆ ಬೆಂಗಳೂರು ಮೆಟ್ರೋ ವತಿಯಿಂದ ಹಾಲಿ ಇರುವ ಪ್ರಯಾಣ ದರದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಿ ಮುಕ್ತ ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ.

ಮೇಟ್ರೋ ಪ್ರಯಾಣದಲ್ಲಿ ರಿಯಾಯಿತಿ ನೀಡಿದರೆ ಸಂಚಾರ ದಟ್ಟಣೆ ಕಡಿಮೆ ಮಾಡಲು ಸಾಧ್ಯವಾಗುತ್ತದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.ಮತ್ತೊಂಡೆದೆ ಗ್ಲೋಬಲ್ ತಾಂತ್ರಿಕ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ವಿದ್ಯಾರ್ಥಿಗಳು ದೇಶಕ್ಕೆ ದೊಡ್ಡ ಆಸ್ತಿಯಾಗಬೇಕು.

ಇದು ಎಲ್ಲರ ಆಸೆ. ವಿದ್ಯಾರ್ಥಿಗಳನ್ನು ಸರಿಯಾದ ರೀತಿಯಲ್ಲಿ ತಯಾರು ಮಾಡಬೇಕಿರುವುದು ಕಾಲೇಜಿನ ಕರ್ತವ್ಯ. ಆ ನಿಟ್ಟಿನಲ್ಲಿ ಈ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಕೆಲಸ ಮಾಡುತ್ತಿದೆ. ಸಾಧ್ಯವಾದಷ್ಟು ಉತ್ತಮ ಗುಣಮುಟ್ಟದ ಶಿಕ್ಷಣ ನೀಡಲು ಪ್ರಯತ್ನಿಸುತ್ತಿದ್ದೇವೆ ಎಂದಿದ್ದಾರೆ.

ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮ ಆಚರಿಸುತ್ತಿದ್ದೇವೆ. ಶತಮಾನೋತ್ಸವ ಆಚರಣೆ ಮಾಡಲು ನಮಗೆ ಅವಕಾಶ ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಸ್ವಾತಂತ್ರ್ಯ ಹೋರಾಟಗಾರರು ತಮ್ಮ ತ್ಯಾಗ ಬಲಿದಾನಗಳ ಮೂಲಕ ನಮಗೆ ಸ್ವಾತಂತ್ರ್ಯ, ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರಗೀತೆ ಎಲ್ಲವನ್ನು ಕೊಟ್ಟಿದ್ದಾರೆ.

ಹೀಗಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿರುವುದು ಎಲ್ಲರ ಭಾಗ್ಯ ಎಂದರು. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ ಪಕ್ಷದ ಐತಿಹಾಸಿಕ ಪಾದಯಾತ್ರೆಯಲ್ಲಿ ಭಾಗವಹಿಸಲು ಎಲ್ಲರಿಗೂ ಆಹ್ವಾನ ನೀಡುತ್ತಿದ್ದೇನೆ. ಈ ಪಾದಯಾತ್ರೆಗೆ ಎಲ್ಲ ವರ್ಗದವರಿಗೆ ಆಹ್ವಾನ ನೀಡಲಾಗಿದ್ದು, ಈ ಪಾದಯಾತ್ರೆಯಲ್ಲಿ ರಾಷ್ಟ್ರಧ್ವಜ ಹಿಡಿದು ಭಾಗವಹಿಸಿ ಎಂದು ಆಹ್ವಾನಿಸುತ್ತಿರುವುದಾಗಿ ಹೇಳಿದ್ದಾರೆ.

Articles You Might Like

Share This Article