ಡಿಕೆಶಿ-ಸಿದ್ದರಾಮಯ್ಯ ಜಂಟಿ ರಥಯಾತ್ರೆ ಅಬ್ಬರ ಜೋರು

Social Share

ಬೆಳಗಾವಿ,ಜ.11- ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನವ ಕರ್ನಾಟಕ ನಿರ್ಮಾಣದ ಸಂಕಲ್ಪದೊಂದಿಗೆ ಇಂದಿನಿಂದ ರಾಜ್ಯದ 20 ಜಿಲ್ಲೆಗಳಲ್ಲಿ ಕಾಂಗ್ರೆಸ್‍ನ ಪ್ರಜಾಧ್ವನಿ ಜಂಟಿ ರಥಯಾತ್ರೆ ಶುರುವಾಗಿದ್ದು, ಗಡಿಜಿಲ್ಲೆ ಬೆಳಗಾವಿಯಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದೆ.

ಬೆಳಗಾವಿ ವೀರಸೌಧದಲ್ಲಿಂದು ಯಾತ್ರೆಯಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಐಸಿಸಿ ಉಸ್ತುವಾರಿ ನಾಯಕ ರಣದೀಪ್‍ಸಿಂಗ್ ಸುರ್ಜೇವಾಲ ಚಾಲನೆ ನೀಡಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ, ಸಲಿಂ ಅಹಮದ್, ಮಾಜಿ ಸಚಿವರಾದ ಆರ್.ವಿ.ದೇಶಪಾಂಡೆ, ಎಂ.ಬಿ.ಪಾಟೀಲ್, ಎಚ್.ಕೆ.ಪಾಟೀಲ್, ಬಸವರಾಜ ರಾಯರೆಡ್ಡಿ, ಯು.ಟಿ.ಖಾದರ್, ಶಾಸಕಿ ಲಕ್ಷ್ಮೀಹೆಬಾಳ್ಕರ್ ಸೇರಿದಂತೆ ಅನೇಕ ನಾಯಕರು ಉಪಸ್ಥಿತರಿದ್ದರು.

ಆರಂಭದಲ್ಲಿ ಅಖಿಲ ಭಾರತ ಕಾಂಗ್ರೆಸ್ ಮಹಾಧಿವೇಶನ ನಡೆದ ಸ್ಥಳದಲ್ಲಿ ಆಯೋಜಿಸಲಾಗಿದ್ದ ಸಾಮೂಹಿಕ ಪ್ರಾರ್ಥನೆಯಲ್ಲಿ ಮುಖಂಡರು ಭಾಗವಹಿಸಿದ್ದರು, ನಂತರ ಛಾಯಚಿತ್ರ ಸಂಗ್ರಹವನ್ನು ವೀಕ್ಷಿಸಿದರು. ಅಲ್ಲಿನ ಬಾವಿಯಿಂದ ಹೊರತೆಗೆದ ನೀರಿನಿಂದ ರಸ್ತೆಯನ್ನು ತೊಳೆದು ಸ್ವಚ್ಚಗೊಳಿಸಿದರು. ಬಿಜೆಪಿ ಆಡಳಿತದಲ್ಲಿ ರಾಜ್ಯಕ್ಕಂಟಿರುವ ಕಳಂಕವನ್ನು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ತೊಳೆಯಲಿದೆ ಎಂದು ನಾಯಕರು ಪ್ರತಿಪಾದಿಸಿದರು.

ಮೆಟ್ರೋ ಪಿಲ್ಲರ್ ದುರಂತ : NCC ಕಂಪೆನಿ, 7 ಮಂದಿ ವಿರುದ್ಧ FIR

ಈ ಸಂದರ್ಭದಲ್ಲಿ ಮಾತನಾಡಿದ ರಣದೀಪ್‍ಸಿಂಗ್ ಸುರ್ಜೇವಾಲ, ಈ ಯಾತ್ರೆ ಕಾಂಗ್ರೆಸ್ ಪಕ್ಷವನ್ನು ಬಲ ಪಡಿಸಲಿದೆ. ರಾಜಕೀಯ ವಾತಾವರಣವನ್ನು ಬದಲಾವಣೆ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯ ಭ್ರಷ್ಟಚಾರ, ಕೋಮುವಾದ ಮತ್ತು ಸಮಾಜ ವಿಭಜನೆ ಮಾಡುತ್ತಿರುವ ಬಸವರಾಜ ಬೊಮ್ಮಾಯಿ ಸರ್ಕಾರದ ವಿರುದ್ಧ ಜನರ ಧ್ವನಿಯಾಗಿ ಕಾಂಗ್ರೆಸ್ ಯಾತ್ರೆ ಹಮ್ಮಿಕೊಂಡಿದೆ. ಮುಂದಿನ ದಿನಗಳಲ್ಲಿನ ಅಭಿವೃದ್ಧಿ ಮತ್ತು ಕೋಮು ಸೌಹಾರ್ದತೆಗೆ ಯಾತ್ರೆಗೆ ನೆರವಾಗಲಿದೆ ಎಂದರು.

ಸಿದ್ದರಾಮಯ್ಯ ಮಾತನಾಡಿ, ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ಪ್ರಶ್ನೆ ಮಾಡಿದವರ ವಿರುದ್ದ ಕೇಸು ಹಾಕಿಸುತ್ತಿದ್ದಾರೆ. ಬಿಜೆಪಿ ಸರ್ಕಾರದ ಭ್ರಷ್ಟಚಾರ ಆಡಳಿತವನ್ನು ತೊಲಗಿಸಲು ಮತ್ತು ಜನ ವಿರೋಧಿ ನೀತಿಗಳನ್ನು ವಿರೋಧಿಸಿ ಯಾತ್ರೆ ನಡೆಸುತ್ತಿರುವುದಾಗಿ ಹೇಳಿದರು.

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವುಕುಮಾರ್, ಇದೊಂದು ಐತಿಹಾಸಿಕ ಯಾತ್ರೆಯಾಗಲಿದೆ. ಜನರ ಸಮಸ್ಯೆ ಮತ್ತು ಅಭಿಪ್ರಾಯಗಳಿಗೆ ಕಾಂಗ್ರೆಸ್ ಧ್ವನಿಯಾಗಲಿದೆ. ನಾಡಿನ ಬದಲಾವಣೆಗೆ ನಾಂದಿಯಾಗಿದೆ ಎಂದರು.

ಈ ಸ್ಥಳದಲ್ಲಿ ಮಹಾತ್ಮಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಮಹಾ ಅಧಿವೇಶನ ನಡೆದಿತ್ತು. ಆ ವೇಳೆ ತೆಗೆದುಕೊಂಡ ನಿರ್ಧಾರದ ಭಾರತದಿಂದ ಬ್ರಿಟಿಷರನ್ನು ಓಡಿಸಲು ಸಹಾಯವಾಯಿತು. ಈ ಸ್ಥಳದಲ್ಲಿ ಬಾವಿಯಿದೆ. ಅದರಿಂದ ನೀರು ತೆಗೆದಿರುವ ತಾಯಂದಿರು ರಾಜ್ಯಕ್ಕೆ ಅಂಟಿಕೊಂಡಿರುವ ಕೊಳೆ ಮತ್ತು ಕಳಂಕವನ್ನು ತೊಳೆಯಲಿದ್ದಾರೆ. ಶಾಪವಾಗಿರುವ ಸರ್ಕಾರವನ್ನು ಕಿತ್ತೊಗೆಯಲಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಮಾದರಿ ಆಡಳಿತ ನೀಡಲಿದೆ. ಬಿಜೆಪಿ ಸರ್ಕಾರದಲ್ಲಿ ಪ್ರತಿದಿನ ಒಂದೊಂದು ಭ್ರಷ್ಟಚಾರಗಳು ಹೊರ ಬರುತ್ತಲೇ ಇವೆ, ಜನರಿಗೆ ಶಾಪವಾಗಿದೆ. ಇದನ್ನು ಕಿತ್ತೊಗೆಯಲು ಯಾತ್ರೆ ಮುನ್ನೆಡೆಯಲಿದೆ, ಜನಜಾಗೃತಿ ಮೂಡಿಸಲಿದೆ ಎಂದು ಸ್ಪಷ್ಟ ಪಡಿಸಿದರು.

ಅತ್ಯಾಚಾರ ಪ್ರಕರಣದಲ್ಲಿ ಕೈಬಿಟ್ಟವರನ್ನು, ಕಮಿಷನ್ ಹಾವಳಿಗೆ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಾಗ ರಾಜೀನಾಮೆ ನೀಡದ್ದ ವ್ಯಕ್ತಿಯನ್ನು ಮತ್ತೆ ಸಂಪುಟಕ್ಕೆ ತೆಗೆದುಕೊಳ್ಳುವ ತಯಾರಿಗಳು ನಡೆದಿವೆ. ಸಂತೋಷ ಆದರೆ ಈ ಮೊದಲು ಅವರನ್ನು ಸಂಪುಟದಿಂದ ಯಾಕೆ ಕೈ ಬಿಡಲಾಗಿತ್ತು. ಈಗ ಯಾಕೆ ಮರಳಿ ಸೇರಿಸಿಕೊಳ್ಳಲಾಗುತ್ತಿದೆ ಎಂದು ಜನರಿಗೆ ಬಿಜೆಪಿ ವಿವರಣೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಈ ತಿಂಗಳು ಜಿಲ್ಲಾಕೇಂದ್ರಗಳನ್ನು ಈ ತಿಂಗಳಲ್ಲಿ ಮುಗಿಸುತ್ತೇವೆ. ನಂತರ ವಿಧಾನಸಭೆ ಕ್ಷೇತ್ರಗಳನ್ನು ಹಂಚಿಕೊಂಡು ಪ್ರವಾಸ ಕೈಗೊಳ್ಳುತ್ತೇವೆ. ಯಾತ್ರೆಯಲ್ಲಿ ಬೆಲೆ ಏರಿಕೆ, ರೈತರ ಸಂಕಷ್ಟಗಳು, ಸರ್ಕಾರ ಭ್ರಷ್ಟಚಾರ, ಲಂಚಗುಳಿತನ ಎಲ್ಲವನ್ನೂ ಕಾಂಗ್ರೆಸ್ ನಾಯಕರು ಪ್ರಸ್ತಾಪಿಸಲಿದ್ದಾರೆ. ಹೊಸಬರಿಗೆ ಟಿಕೆಟ್ ನೀಡಲು ಪಕ್ಷದಲ್ಲಿ ಆದ್ಯತೆ ದೊರೆಯಲಿದೆ. ಹೊಸ ನೀರು ಪಕ್ಷಕ್ಕೆ ಬರಬೇಕಿದೆ. ಆದರೆ ಈ ಯಾತ್ರೆಯಲ್ಲಿ ಟಿಕೆಟ್ ಹಂಚಿಕೆಯ ಬಗ್ಗೆ ಚರ್ಚೆ ಮಾಡುವುದಿಲ್ಲ. ಬದಲಾಗಿ ಜನರ ಬದುಕಿನಲ್ಲಾಗಿರುವ ತಲ್ಲಣಗಳ ಬಗ್ಗೆಚರ್ಚೆ ಮಾಡಲಾಗುವುದು.

ಕಾಂಗ್ರೆಸ್-ಜೆಡಿಎಸ್‍ಗೆ ಸೆಡ್ಡು ಹೊಡೆಯಲು ಬಿಜೆಪಿ ರಣತಂತ್ರ

ಕಾಂಗ್ರೆಸ್ 60 ವರ್ಷ ಆಡಳಿತ ನಡೆಸಿದೆ. ಪ್ರತಿಹಂತದಲ್ಲೂ ಜನರ ಬದುಕು ಸುಧಾರಣೆ ಮಾಡಲು ಯತ್ನಿಸಿದೆ. ಮೂರುವರೆ ವರ್ಷದಲ್ಲಿ ಬಿಜೆಪಿ ಆಡಳಿತದಿಂದ ರಾಜ್ಯಕ್ಕೆ ಕಳಂಕ ಬಂದಿದೆ. ಯಾವುದೇ ಹಗರಣಗಳನ್ನಾದರೂ ಮುಚ್ಚಿ ಹಾಕುವುದರಲ್ಲಿ ಬಿಜೆಪಿ ಸರ್ಕಾರ ಯಶಸ್ವಿಯಾಗಿದೆ.

ಪಿಎಸ್‍ಐ ಸೇರಿ ಬಹುತೇಕ ನೇಮಕಾತಿ ಹಗರಣ, ಕಮಿಷನ್ ಹಗರಣ ಸೇರಿ ಎಲ್ಲದಕ್ಕೂ ಬಿ ವರದಿ ಸಲ್ಲಿಸುತ್ತಾರೆ. ಇದು ಬಿ ವರದಿ ಸರ್ಕಾರ ಎಂದು ಕಿಡಿಕಾರಿದರು.

ಈ ಹಿಂದೆ ಖಾಸಗಿ ಹಿಡಿತದಲ್ಲಿದ್ದ ಉದ್ಯಮಗಳನ್ನು ಖಾಸಗೀಕರಣ ಮಾಡಿ ಕಾಂಗ್ರೆಸ್ ಜನಪರ ಆಡಳಿತ ನೀಡಿತ್ತು. ಬಿಜೆಪಿ ಸರ್ಕಾರ ಈಗ ಸರ್ಕಾರಿ ಸ್ವಾಮ್ಯದ ಎಲ್ಲಾ ಕಾರ್ಖಾನೆಗಳನ್ನು ಖಾಸಗೀಕರಣ ಮಾಡಿ ಜನದ್ರೋಹ ಬಗೆಯುತ್ತಿದೆ. ಇದನ್ನು ಜನರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು.

ಇಂದಿನಿಂದ 20 ದಿನಗಳ ಕಾಲ 20 ಜಿಲ್ಲೆಗಳಲ್ಲಿ ಯಾತ್ರೆ ಸಂಚರಿಸಲಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಜಂಟಿಯಾಗಿ ಪ್ರವಾಸ ಮಾಡಲಿದ್ದಾರೆ. ಬಳಿಕ ಇಬ್ಬರು ಪ್ರತ್ಯೇಕ ತಂಡಗಳನ್ನು ಕಟ್ಟಿಕೊಂಡು ಹಿರಿಯ ನಾಯಕರ ಜೊತೆ ವಿಧಾನಸಭಾ ಕ್ಷೇತ್ರವಾರು ಪ್ರಚಾರ ಮಾಡಲಿದ್ದಾರೆ. ಮೊದಲ ಹಂತದಲ್ಲಿ ಸಿದ್ದರಾಮಯ್ಯ ಉತ್ತರ ಕರ್ನಾಟಕ ಭಾಗದಲ್ಲಿ, ಡಿ.ಕೆ.ಶಿವಕುಮಾರ್ ದಕ್ಷಿಣ ಕರ್ನಾಟಕ ಭಾಗದಲ್ಲಿ ಪ್ರವಾಸ ಮಾಡಲಿದ್ದಾರೆ.

ಎರಡನೇ ಹಂತದಲ್ಲಿ ನಾಯಕರ ತಂಡಗಳು ಪ್ರದೇಶಗಳನ್ನು ಅದಲು ಬದಲು ಮಾಡಿಕೊಳ್ಳಲಿದ್ದಾರೆ. ಒಟ್ಟಾರೆ ಚುನಾವಣೆವರೆಗೂ ಪಕ್ಷ ನಿರಂತರ ಸಕ್ರಿಯವಾಗಿರುವಂತೆ ಮಾಡಲು ಯಾತ್ರೆ ಸಹಕಾರಿಯಾಗಲಿದೆ.

DK Shivakumar, Siddaramaiah, Bus Yatra, Congress,

Articles You Might Like

Share This Article