ಡಿ.ಕೆ.ಶಿವಕುಮಾರ್‌‌ರನ್ನು ನಿಂದಿಸಿದವನಿಗೆ 2 ವರ್ಷ ಜೈಲು ಶಿಕ್ಷೆ..!

ಮಂಗಳೂರು, ಏ.19- ವಿದ್ಯುತ್ ಕಡಿತ ಕುರಿತಂತೆ ಆಕ್ರೋಶಗೊಂಡು ಆಗಿನ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ನಿಂದಿಸಿದ ಆರೋಪಿಗೆ ಸುಳ್ಯ ಸಿವಿಲ್ ನ್ಯಾಯಾಲಯ ಎರಡು ವರ್ಷ ಜೈಲು ಮತ್ತು ಐದು ಸಾವಿರ ರೂಪಾಯಿ ದಂಡ ವಿಧಿಸಿದೆ.

2016ರ ಫೆಬ್ರವರಿ 28ರಂದು ಆಗಿನ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಕರೆ ಮಾಡಿದ್ದ ಬೆಳ್ಳಾರೆಯ ಗಿರಿಧರ ರೈ ಎಂಬುವರು ತರಾಟೆಗೆ ತೆಗೆದುಕೊಂಡಿದ್ದರು. ಮಧ್ಯರಾತ್ರಿ ಕರೆ ಮಾಡಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದ ಆರೋಪ ಕೇಳಿ ಬಂದಿತ್ತು. ಸಚಿವರ ಪರವಾಗಿ ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿಯ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದರು.

ಕರೆ ಮಾಡಿದ ವ್ಯಕ್ತಿಯನ್ನು ಪತ್ತೆ ಹಚ್ಚಿದ ಪೊಲೀಸರು ರಾತ್ರೋರಾತ್ರಿ ಬಂಧನ ಕಾರ್ಯಾಚರಣೆ ನಡೆಸಿದ್ದರು. ಗಿರಿಧರ್ ರೈ ಬಾಗಿಲು ತೆರೆಯದಿದ್ದಾಗ ಹೆಂಚು ತೆಗೆದು ಮನೆ ಒಳಗೆ ಇಳಿದ ಪೊಲೀಸರು ಬಂಧಿಸಿದ್ದರು. ಗಿರಿಧರ್ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂಧನೆ, ಜೀವ ಬೆದರಿಕೆ, ಮಾನ ಹಾನಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಸೇರಿ ಐದು ಸೆಕ್ಷನ್‍ಗಳ ಅಡಿ ಪ್ರಕರಣ ದಾಖಲಾಗಿತ್ತು.

ಸುಳ್ಯ ಠಾಣೆಯ ಎಸ್.ಐ.ಚಂದ್ರಶೇಖರ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸಮ್ಮಿಶ್ರ ಸರ್ಕಾರ ಪತನವಾದ ಬಳಿಕ ಮಾಜಿ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಕಳೆದ ಅಕ್ಟೋಬರ್ 5ರಂದು ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷ್ಯ ನುಡಿದಿದ್ದರು.

ಸರ್ಕಾರದ ಪರವಾಗಿ ಎಪಿಪಿ ಜನಾರ್ದನ ವಾದಿಸಿದ್ದರು. ವಿಚಾರಣೆ ನಡೆಸಿದ ನ್ಯಾಯೀಧಿಶರಾದ ಸೋಮಶೇಖರ್ ತೀರ್ಪು ಪ್ರಕಟಿಸಿದ್ದು, ಆರೋಪಿಗೆ ನಾಲ್ಕು ಅಪರಾಧಗಳಿಗೆ ಎರಡು ವರ್ಷ ಶಿಕ್ಷೆ, ಒಂದು ಪ್ರಕರಣದಲ್ಲಿ ಐದು ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ದಂಡ ತೆರಲು ತಪ್ಪಿದ್ದಲ್ಲಿ ಒಂದು ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.