ಬೆಂಗಳೂರು,ಜು.25- ಭ್ರಷ್ಟಾಚಾರದ ಕುರಿತು ಬಹಿರಂಗ ಚರ್ಚೆಗೆ ತಾವು ಸಿದ್ದರಿದ್ದು, ಯಾವುದೇ ಹಂತದಲ್ಲಿ ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಬಿಜೆಪಿ ನಾಯಕ ಸಿ.ಟಿ.ರವಿ ಅವರ ಸವಾಲಿಗೆ ಪ್ರತ್ಯುತ್ತರಿಸಿದರು.
ಯಾವಾಗ, ಎಲ್ಲಿ, ಯಾರು, ಚರ್ಚೆ ಮಾಡಬೇಕು ಎಂಬುದನ್ನು ಶೀಘ್ರವೇ ನಿಗದಿಪಡಿಸಲಾಗುವುದು. ಸಮಯವನ್ನು ನಾನೇ ಹೇಳುತ್ತೇನೆ. ಚರ್ಚೆಯನ್ನು ಸಿ.ಟಿ.ರವಿ ಅವರ ಜೊತೆ ಮಾಡಬೇಕೆ, ಬಿಜೆಪಿ ರಾಜ್ಯಾಧ್ಯಕ್ಷರ ಜೊತೆ ಮಾತನಾಡಬೇಕೆ? ಅಥವಾ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ನಡೆಸಬೇಕೆ ಎಂಬುದನ್ನು ನಿರ್ಧರಿಸಲಾಗುವುದು ಎಂದರು.
ಮೊದಲು ಬಿಜೆಪಿ ಸರ್ಕಾರದ ಅವಯಲ್ಲಿ ನಡೆದಿರುವ ಶೇ.40ರಷ್ಟು ಕಮೀಷನ್ ವ್ಯವಹಾರ, ಕೋವಿಡ್ ಕಾಲದಲ್ಲಿನ ಭ್ರಷ್ಟಾಚಾರಗಳ ಬಗ್ಗೆ ಚರ್ಚೆಯಾಗಬೇಕಿದೆ. ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರು ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು.
ಘಟನೆ ನಡೆದ ದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಈಶ್ವರಪ್ಪ ನಿರ್ದೋಷಿ ಎಂದು ಹೇಳಿಕೆ ನೀಡಿದ್ದಾರೆ. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಬಿ ವರದಿ ಸಲ್ಲಿಸಿದ್ದಾರೆ. ಸರ್ಕಾರವೇ ಒತ್ತಡ ಹೇರಿ ಪೊಲೀಸರಿಂದ ಬಿ ವರದಿ ಹಾಕಿಸಿದೆ. ಈಶ್ವರಪ್ಪ ಅವರ ಮೇಲಿನ ಆರೋಪವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಿದೆ ಎಂದು ಕಿಡಿಕಾರಿದರು.
ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ನ್ಯಾಯಾಂಗ ತನಿಖೆಯಾಗಬೇಕು ಎಂಬುದು ನಮ್ಮ ಒತ್ತಾಯ. ಹೀಗಾಗಿ ಈಶ್ವರಪ್ಪ ಅವರ ವಿರುದ್ಧ ನಾವು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ. ಸಂತೋಷ್ ಪಾಟೀಲ್ ರೀತಿಯಲ್ಲೇ ಬಹಳಷ್ಟು ಮಂದಿ ಭ್ರಷ್ಟಾಚಾರದ ಆರೋಪ ಮಾಡಿ ಪತ್ರ ಬರೆದಿದ್ದಾರೆ. ಬಹುತೇಕ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಮೊದಲು ಇದರ ಬಗ್ಗೆ ಚರ್ಚೆಯಾಗಬೇಕಿದೆ ಎಂದರು.
ಶೇ.40ರಷ್ಟು ಕಮೀಷನ್ ಆರೋಪ ಮಾಡಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ಹೇಳಿಕೆಯನ್ನು ಏಕೆ ಪರಿಗಣಿಸುತ್ತಿಲ್ಲ ಎಂದು ಹೇಳುವ ಭರದಲ್ಲಿ ಕೆಂಪಣ್ಣ ಆಯೋಗದ ಹೇಳಿಕೆಯನ್ನು ಏಕೆ ಪರಿಗಣಿಸಲಿಲ್ಲ ಎಂದು ಹೇಳಿ ತಡವರಿಸಿದರು. ತಕ್ಷಣವೇ ಎಚ್ಚೆತ್ತುಕೊಂಡು ತಪ್ಪನ್ನು ಸರಿಪಡಿಸಿಕೊಂಡರು. ಈಶ್ವರಪ್ಪ ವಿರುದ್ದ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಆರೋಪ ದಾಖಲಿಸದೆ ಇರುವುದು ಏಕೆ ಎಂದು ಪ್ರಶ್ನಿಸಿದರು.