ಸರ್ಕಾರದ ನಿರ್ಲಕ್ಷ್ಯದಿಂದ ಶಿಕ್ಷಕರ ಬದುಕು ಕತ್ತಲೆಯಲ್ಲಿದೆ : ಡಿಕೆಶಿ

ಬೆಂಗಳೂರು, ಸೆ.5- ಬಿಜೆಪಿ ಸರ್ಕಾರದ ನಿರ್ಲಕ್ಷ್ಯದಿಂದ ಶಿಕ್ಷಕರ ಬದುಕು ಕತ್ತಲೆಯಲ್ಲಿದೆ. 2 ಲಕ್ಷಕ್ಕೂ ಅಧಿಕ ಶಿಕ್ಷಕರಿಗೆ ನಾಲ್ಕೈದು ತಿಂಗಳುಗಳಿಂದ ಸಂಬಳವನ್ನೇ ಕೊಟ್ಟಿಲ್ಲ. 40 ಸಾವಿರ ಶಿಕ್ಷಕರು ಕೆಲಸ ಕಳೆದುಕೊಂಡಿದ್ದಾರೆ. ಶಿಕ್ಷಣ ಕ್ಷೇತ್ರವನ್ನು ಸರಿದಾರಿಗೆ ತರಲು ಸರ್ಕಾರದ ಯೋಜನೆ ಏನು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಮಕ್ಕಳ ಭವಿಷ್ಯ ರೂಪಿಸಬೇಕಾದ ಶಿಕ್ಷಕರು ತಳ್ಳುಗಾಡಿ ವ್ಯಾಪಾರ, ಗಾರೆ ಕೆಲಸ ಮಾಡುವಾಗ ಶಿಕ್ಷಣ ಕ್ಷೇತ್ರವನ್ನು ಸರಿದಾರಿಗೆ ತರಲು ಸರ್ಕಾರದ ಯೋಜನೆ ಏನು ಎಂದು ಪ್ರಶ್ನಿಸಿದ್ದಾರೆ.  ರಾಜ್ಯದ 80 ಲಕ್ಷ ವಿದ್ಯಾರ್ಥಿಗಳ ಪೈಕಿ ಶೇ.62.5ರಷ್ಟು ಮಕ್ಕಳಿಗೆ ಮಾತ್ರ ಸ್ಮಾರ್ಟ್‍ಪೋನ್, ಲ್ಯಾಪ್‍ಟಾಪ್ ಲಭ್ಯತೆ ಇದೆ.

ಶೇ.53.75ರಷ್ಟು ಮಕ್ಕಳಿಗೆ ಇಂಟರ್‍ನೆಟ್ ಸಂಪರ್ಕವಿದೆ. ಯಾವುದೇ ತಂತ್ರಜ್ಞಾನದ ಲಭ್ಯತೆಯಿಲ್ಲದ ಮಕ್ಕಳು ಆನ್‍ಲೈನ್ ಶಿಕ್ಷಣವನ್ನು ಪಡೆಯುವುದಾದರೂ ಹೇಗೆ? ಈ ಕುರಿತಂತೆ ಸರ್ಕಾರ ಕೂಡಲೇ ನಿದ್ದೆಯಿಂದೆದ್ದು, ಹಳಿ ತಪ್ಪಿರುವ ಶಿಕ್ಷಣ ವ್ಯವಸ್ಥೆಯನ್ನು ಸರಿದಾರಿಗೆ ತರಲು ಹಾಗೂ ಶಿಕ್ಷಕರಿಗೆ ನೆರವಾಗಲು ಕಾಂಗ್ರೆಸ್‍ನ 10 ಹಕ್ಕೊತ್ತಾಯಗಳನ್ನು ಮುಂದಿಟ್ಟಿದ್ದಾರೆ.

ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಹಳ್ಳ ಹಿಡಿಸಿರುವ ಹಾಗೂ ಸಂಕಷ್ಟದಲ್ಲಿರುವ ಶಿಕ್ಷಕರಿಗೆ ಸಹಾಯ ಮಾಡಲು ಯಾವುದೇ ಯೋಜನೆ ರೂಪಿಸಲು ವಿಫಲವಾಗಿರುವ ಬೇಜವಾಬ್ದಾರಿ ರಾಜ್ಯ ಸರ್ಕಾರದ ವೈಫಲ್ಯವನ್ನು ಖಂಡಿಸಿದ್ದಾರೆ.

ಮಧ್ಯಾಹ್ನದ ಬಿಸಿಯೂಟವನ್ನು ವಿದ್ಯಾರ್ಥಿಗಳ ಮನೆಗಳಿಗೆ ನೇರವಾಗಿ ತಲುಪಿಸುವ ವ್ಯವಸ್ಥೆ ಮಾಡುವುದರ ಮೂಲಕ ಅವರ ಪೌಷ್ಠಿಕತೆಯನ್ನು ಕಾಪಾಡಬೇಕು. ಶಾಲೆ ಬಿಟ್ಟ ಮಕ್ಕಳ ಬಗ್ಗೆ ಸಮೀಕ್ಷೆ ನಡೆಸಿ, ಪೋಷಕರ ಮನವೊಲಿಸಿ ಅವರನ್ನು ಮರಳಿ ಶಾಲೆಗೆ ಕರೆತರುವ ಯೋಜನೆ ರೂಪಿಸಬೇಕು.

ಶಿಕ್ಷಣ ಕ್ಷೇತ್ರದಲ್ಲಿ ನೇರವಾಗಿ ಮತ್ತು ಪರೋಕ್ಷವಾಗಿ ಉದ್ಯೋಗದಲ್ಲಿರುವವರಿಗೆ ಆರ್ಥಿಕ ಪರಿಹಾರ ಪ್ಯಾಕೇಜ್, ಕೊರೊನಾ ವಿರುದ್ಧದ ಹೋರಾಟದಲ್ಲಿ ಪ್ರಾಣ ಕಳೆದುಕೊಂಡ ಶಿಕ್ಷಕರಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಬಡ್ಡಿ ರಹಿತ ಸಾಲಗಳನ್ನು ನೀಡುವ ಮೂಲಕ ಶಾಲೆಗಳ ಆರ್ಥಿಕ ಸಾಮಥ್ರ್ಯವನ್ನು ವೃದ್ಧಿಸಬೇಕು. ಖಾಸಗಿ ಶಾಲೆಗಳಿಗೆ ತೆರಿಗೆ ವಿನಾಯತಿ ನೀಡಬೇಕು. ಈ ಮೂಲಕ ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಶಾಲಾ ಶುಲ್ಕ ಕಡಿಮೆ ಮಾಡುವ ಒತ್ತಡವನ್ನು ಸರ್ಕಾರ ಖಾಸಗಿ ಸಂಸ್ಥೆಗಳ ಮೇಲೆ ಹೇರಬೇಕು. ವಿದ್ಯಾರ್ಥಿಗಳ ಆರೋಗ್ಯ ಮತ್ತು ಸುರಕ್ಷತೆಗೆ ಮಾರ್ಗಸೂಚಿ ಹೊರಡಿಸಬೇಕು.

ಆದ್ಯತೆ ಮೇರೆಗೆ ತಂತ್ರಜ್ಞಾನ ಬಳಸಿಕೊಳ್ಳುವ ಅಂತರವನ್ನು ಕಡಿಮೆಗೊಳಿಸಬೇಕು. ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮವನ್ನು ಆದ್ಯತೆಯಾಗಿ ಪರಿಗಣಿಸಬೇಕೆಂದು ಅವರು ಹಕ್ಕೊತ್ತಾಯ ಮಾಡಿದ್ದಾರೆ.