ಡಿ.ಕೆ.ಶಿವಕುಮಾರ್ ಬಂಧನದ ಕಿಚ್ಚು: ಕನಕಪುರ, ರಾಮನಗರದಲ್ಲಿ ಸ್ಫೋಟ, 16 ಬಸ್‍ಗಳಿಗೆ ಹಾನಿ

Spread the love

ಬೆಂಗಳೂರು,ಸೆ.4- ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿರುವುದನ್ನು ವಿರೋಧಿಸಿ ಕನಕಪುರ ಮತ್ತು ರಾಮನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿ ಬೆಂಕಿ ಹಚ್ಚಿದ್ದರಿಂದ ಕೆಎಸ್‍ಆರ್‍ಟಿಸಿಯ ಎರಡು ಬಸ್‍ಗಳು ಸುಟ್ಟುಹೋಗಿವೆ. ಕಲ್ಲು ತೂರಾಟ ನಡೆಸಿದ್ದರಿಂದ ಒಟ್ಟು 16 ಬಸ್‍ಗಳಿಗೆ ಹಾನಿ ಉಂಟಾಗಿದೆ.

ಪ್ರತಿಭಟನೆ ಸಂದರ್ಭದಲ್ಲಿ ಕನಕಪುರ ಪಟ್ಟಣದಲ್ಲಿ ಒಂದು ಬಸ್ ಸಂಪೂರ್ಣ ಸುಟ್ಟು ಹೋಗಿದ್ದರೆ, ಮತ್ತೊಂದು ಬಸ್ ಭಾಗಶಃ ಸುಟ್ಟು ಹೋಗಿದೆ. ಒಂದು ವೋಲ್ವೊ ಸೇರಿದಂತೆ 16 ಬಸ್‍ಗಳು ಹಾನಿಗೀಡಾಗಿದ್ದು, ಕಲ್ಲು ತೂರಾಟದಿಂದಾಗಿ ಬಸ್‍ಗಳ ಗಾಜು ಒಡೆದುಹೋಗಿವೆ ಎಂದು ಕೆಎಸ್‍ಆರ್‍ಟಿಸಿ ಮೂಲಗಳು ತಿಳಿಸಿವೆ.  ಕಾಂಗ್ರೆಸ್ ಕಾರ್ಯಕರ್ತರು ರಾಮನಗರ ಹಾಗೂ ಕನಕಪುರದಲ್ಲಿ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಇಂದು ಬೆಂಗಳೂರು-ಮೈಸೂರು ನಡುವಿನ ಬಸ್ ಸಂಚಾರವೂ ಸ್ಥಗಿತಗೊಂಡಿದೆ.

ಬೆಂಗಳೂರಿನಿಂದ ಕನಕಪುರದ ಮೂಲಕ ಹಾಗೂ ರಾಮನಗರದ ಮೂಲಕ ಸಂಚರಿಸುತ್ತಿದ್ದ ಎಲ್ಲ ಬಸ್‍ಗಳ ಸಂಚಾರ ಸ್ಥಗಿತವಾಗಿದ್ದು, ಕೆಲವು ಬಸ್‍ಗಳಿಗೆ ಪರ್ಯಾಯ ಮಾರ್ಗದ ಮೂಲಕ ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ.  ರಾಮನಗರದ ಐಜೂರು ವೃತ್ತದಲ್ಲಿ ಪ್ರತಿಭಟನೆ ಮಾಡುತ್ತಿರುವುದರಿಂದ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ. ಮೈಸೂರು ಕಡೆಗೆ ಸಂಚರಿಸಬೇಕಾಗಿದ್ದ ಕೆಎಸ್‍ಆರ್‍ಟಿಸಿ ಬಸ್‍ಗಳನ್ನು ಮಾಗಡಿ-ಹುಲಿಯೂರುದುರ್ಗ-ಮದ್ದೂರು- ಮಂಡ್ಯ ಮಾರ್ಗವಾಗಿ ಮೈಸೂರು ತಲುಪಲು ಸೂಚಿಸಲಾಗಿದೆ.

ಆದರೂ ಕೆಲವೇ ಕೆಲವು ಬಸ್‍ಗಳು ಮಾತ್ರ ಈ ಪರ್ಯಾಯ ಮಾರ್ಗದಲ್ಲಿ ಸಂಚರಿಸುತ್ತಿವೆ. ಬೆಂಗಳೂರು-ಮೈಸೂರು ನಡುವಿನ ಫ್ಲೈಬಸ್ ಸೇವೆಗಳು ಕೂಡ ನೆಲಮಂಗಲ, ಕುಣಿಗಲ್, ಬೆಳ್ಳೂರು ಕ್ರಾಸ್, ಪಾಂಡವಪುರ ಮೂಲಕ ಮೈಸೂರು ತಲುಪುತ್ತಿವೆ ಎಂದು ಮೂಲಗಳು ತಿಳಿಸಿವೆ.