ಜೈಲಿಗೆ ಕಳುಹಿಸಿದರೂ ಮೇಕೆದಾಟು ಪಾದಯಾತ್ರೆ ನಿಲ್ಲಲ್ಲ: ಡಿ ಕೆ ಶಿವಕುಮಾರ್

Social Share

ಬೆಂಗಳೂರು,ಜ.4- ಕೊರೊನಾ ಪ್ರಕರಣಗಳ ಬಗ್ಗೆ ಅನಗತ್ಯ ವೈಭವೀಕರಣ ನಡೆಯುತ್ತಿದೆ. ಯಾರು ಎಷ್ಟೇ ಎದುರಿಸಿದರೂ ನಮ್ಮ ಪಾದಯಾತ್ರೆ ನಿಲ್ಲುವುದಿಲ್ಲ. ಜೈಲಿಗೆ ಹಾಕಿದರೂ ನಾವು ಹಿಂದೆ ಸರಿಯುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಿರುವುದರಿಂದ ಸಭೆ ಸಮಾರಂಭಗಳಿಗೆ ನಿರ್ಬಂಧ ವಿಸಲಾಗುವುದು. ಕಾಂಗ್ರೆಸಿಗರು ಪಾದಯಾತ್ರೆ ಕೈಬಿಡಬೇಕು ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಮಾಡಿರುವ ಮನವಿಗೆ ಪ್ರತಿಕ್ರಿಯಿಸಿದ ಅವರು, ಕೊರೊನಾ ಹೆಸರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕಿರುಕುಳ ನೀಡಲಾಗುತ್ತಿದೆ.
ಪ್ರತಿಯೊಬ್ಬರಿಂದ 3ರಿಂದ 4 ಸಾವಿರ ರೂ. ವಸೂಲಿ ಮಾಡಲಾಗುತ್ತಿದೆ. ಸುಧಾಕರ್ ಅವರು ಮೊದಲು ಅಲ್ಲಿಗೆ ಹೋಗಿ ವ್ಯವಸ್ಥೆ ಸರಿಪಡಿಸಲಿ, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಸಾವಿರಾರು ಕೋಟಿ ರೂ.ಗಳ ಹಣ ಬಾಕಿ ಬರಬೇಕು. ಅದನ್ನು ವಸೂಲಿ ಮಾಡಿ ಜನರ ಅಭಿವೃದ್ದಿ ಮಾಡಲಿ ಎಂದು ಹೇಳಿದರು.
ನಮ್ಮ ಪಾದಯಾತ್ರೆ ನಡೆಯುತ್ತದೆ. ಈ ಮೊದಲು ಕೋವಿಡ್ ಮಾರ್ಗಸೂಚಿಗಳ ಉಲ್ಲಂಘನೆ ನೆಪದಲ್ಲಿ 100 ನಾಟ್‍ಔಟ್ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ನಾಯಕರ ಮೇಲೆ ಕೇಸು ದಾಖಲಿಸಲಾಗಿದೆ. ಸಮನ್ಸ್ ನೀಡಲಾಗಿದೆ. ಅದೇ ಸಂದರ್ಭದಲ್ಲಿ ರ್ಯಾಲಿ ನಡೆಸಿದ, ಮನೆ ಮನೆ ಭೇಟಿ ಮಾಡಿದ ಬಿಜೆಪಿ ನಾಯಕರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ಷೇಪಿಸಿದರು.
ನಮ್ಮ ಮೇಲೆ 100 ಕೇಸ್ ಹಾಕಲಿ, ನೂರು ಬಾರಿ ಜೈಲಿಗೆ ಕಳುಹಿಸಲಿ ಹೆದರುವುದಿಲ್ಲ. ಜನರಿಗಾಗಿ ಹೋರಾಟ ಮಾಡುತ್ತಿದ್ದೇವೆ ಅದನ್ನು ಮುಂದುವರೆಸುತ್ತೇವೆ ಎಂದು ಸ್ಪಷ್ಟಪಡಿಸಿದರು. ರಾಮನಗರದಲ್ಲಿ ನಿನ್ನೆ ನಡೆದ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಸಚಿವ ಅಶ್ವಥ್ ನಾರಾಯಣ ಅವರ ನುಡಿಮುತ್ತುಗಳ ಬಗ್ಗೆ ಬಿಜೆಪಿ ರಾಜ್ಯಧ್ಯಕ್ಷರು, ಅಶೋಕ್ ಸೇರಿದಂತೆ ಹಲವು ಸಚಿವರು ಪ್ರಮಾಣ ಪತ್ರ ನೀಡಿದ್ದಾರೆ. ಅವರಿಗೆ ಇನ್ನಷ್ಟು ಬಡ್ತಿ ನೀಡಲಿ ಎಂದು ಲೇವಡಿ ಮಾಡಿದರು.
ಸಚಿವರ ಸಂಸ್ಕøತಿ ನಿನ್ನೆ ಅನಾವರಣಗೊಂಡಿದೆ. ಅವರ ವಿಶ್ವರೂಪ ಪ್ರದರ್ಶನವಾಗಿದೆ. ಬಿಜೆಪಿಯವರು ಅಶ್ವಥ್ ನಾರಾಯಣ ಅವರನ್ನು ಬೆಂಬಲಿಸಿ ರಾಜ್ಯ ಮಟ್ಟದಲ್ಲಷ್ಟೇ ಅಲ್ಲ ರಾಷ್ಟ್ರ ಮಟ್ಟದಲ್ಲೂ ಪ್ರತಿಭಟನೆ ಮಾಡಲಿ ಎಂದು ಹೇಳಿದರು.
ರಾಮನಗರ ರಿಪಬ್ಲಿಕ್ ಆಗುತ್ತಿದೆ ಎಂದು ಬಿಜೆಪಿ ಮಾಡುತ್ತಿರುವ ಆರೋಪಕ್ಕೆ ಉತ್ತರ ನೀಡಲು ಬಹಳಷ್ಟು ಜನರು ಇದ್ದಾರೆ. ನಾನು ಅದಕ್ಕೆ ಪ್ರತಿಕ್ರಿಯಿಸುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

Articles You Might Like

Share This Article