ರಾಜಕೀಯ ಪಿತೂರಿ ಎದುರಿಸಿ ನಿಲ್ಲುತ್ತೇನೆ: ಡಿ ಕೆ ಶಿವಕುಮಾರ್

Spread the love

ಬೆಂಗಳೂರು, ನ.25- ರಾಜ್ಯದಲ್ಲಿ ಯಾರ ವಿರುದ್ಧವೂ ಅಕ್ರಮ ಆಸ್ತಿಗಳಿಕೆ ಬಗ್ಗೆ ಈ ರೀತಿ ಸಿಬಿಐ ತನಿಖೆಗೆ ಅನುಮತಿ ಕೊಟ್ಟಿಲ್ಲ. ನಾನು ಸರ್ಕಾರಿ ಕಚೇರಿಯನ್ನು ದುರುಪಯೋಗಪಡಿಸಿಕೊಂಡಿಲ್ಲ, ಲಂಚ ಹೊಡೆದಿಲ್ಲ. ಯಾರೂ ನನ್ನ ವಿರುದ್ಧ ದೂರೂ ಕೊಟ್ಟಿಲ್ಲ ಅಥವಾ ಯಾವುದೇ ಕೇಸ್ ಆಗಿ ಕೋರ್ಟ್‍ನಲ್ಲಿ ನನ್ನ ವಿರುದ್ಧ ವಿಚಾರಣೆಯೂ ನಡೆಯುತ್ತಿಲ್ಲ.

ಆದರೂ ಸಹ ಸಿಬಿಐ ತನಿಖೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅನುಮತಿ ನೀಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದರು. ರಾಜಕೀಯ ಪಿತೂರಿ ಎದುರಿಸಿ ನಿಲ್ಲುತ್ತೇನೆ. ನಾನೊಬ್ಬನೇ ಏನೂ ಆಸ್ತಿ ಮಾಡಿಲ್ಲ. ಸಿಬಿಐ ಯಾವ ರೀತಿ ತನಿಖೆ ನಡೆಸುತ್ತದೆ ಎಂಬುದನ್ನು ನಾನು ಸರಿಯಾಗಿ ಅರ್ಥ ಮಾಡಿಕೊಂಡಿದ್ದೇನೆ.

48 ದಿನ ಏನನ್ನೂ ಓದದೆ ಸಿಬಿಐ ಮ್ಯಾನ್ಯುಯಲ್ ಮಾತ್ರ ಓದಿದ್ದೇನೆ. ಈ ಮೊದಲು ಸಿಬಿಐನವರು ಮನೆಗೆ ಬಂದಾಗ ಯಾವುದೇ ತೊಂದರೆ ಕೊಟ್ಟಿಲ್ಲ. ಅಧಿಕಾರಿಗಳು ಹೇಳಿದಂತೆ ಕೆಲಸ ಮಾಡಿದ್ದಾರೆ. ಇದಕ್ಕೆ ನನ್ನ ವಿರೋಧವಿಲ್ಲ. ತನಿಖೆಯ ಕ್ರಮವನ್ನು ನಾನು ಪ್ರಶ್ನಿಸುವುದಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಈ ಹಿಂದೆ 23ರಂದು ಹಾಜರಾಗುವಂತೆ ನೀಡಿದ್ದ ನೋಟಿಸ್ ತಾವು 25ರಂದು ವಿಚಾರಣೆಗೆ ಹಾಜರಾಗುವುದಾಗಿ ಹೇಳಿದ್ದಂತೆ ಇಂದು ಹಾಜರಾಗುತ್ತಿದ್ದೇನೆ. ಹೋಗದೆ ಇದ್ದರೆ ತಪ್ಪಾಗುತ್ತದೆ. ಹಾಗಾಗಿ ಇಂದು ಸಂಜೆ 4 ಗಂಟೆಗೆ ವಿಚಾರಣೆಗೆ ತೆರಳುತ್ತಿದ್ದೇನೆ. ನಂತರ ಕಾಂಗ್ರೆಸ್‍ನ ಹಿರಿಯ ನಾಯಕ ಅಹಮ್ಮದ್ ಪಟೇಲ್ ಅವರ ಅಂತಿಮ ದರ್ಶನಕ್ಕೂ ತೆರಳಬೇಕಿದೆ. ಇಂದು ರಾತ್ರಿ 7 ಗಂಟೆಗೆ ವಿಮಾನ ಟಿಕೆಟ್ ಸಹ ಬುಕ್ ಆಗಿದೆ. ಬೋರ್ಡಿಂಗ್ ಪಾಸ್ ಸಹ ಪಡೆದಾಗಿದೆ ಎಂದ ಅವರು, ಸಿಬಿಐ ವಿಚಾರಣೆಯಿಂದ ಬಿಟ್ಟ ಕೂಡಲೇ ತೆರಳುವುದಾಗಿ ವಿವರಿಸಿದರು.

ಅಹಮ್ಮದ್ ಪಟೇಲ್ ನನ್ನ ಮೇಲೆ ಅತ್ಯಂತ ನಂಬಿಕೆ ಇರಿಸಿದ್ದರು. ಗುಜರಾತ್‍ನ ಚುನಾವಣೆ ವೇಳೆ ಎಂಎಲ್‍ಎಗಳನ್ನು ನೋಡಿಕೊಳ್ಳಲು ನನ್ನನ್ನೇ ನೇಮಿಸಿದ್ದರು. ದೇಶದಲ್ಲಿ ಅಕಾರದ ಆಸೆ ಇಲ್ಲದೆ ಪಕ್ಷಕ್ಕಾಗಿ ದುಡಿದ ಏಕೈಕ ನಾಯಕ. ಅವರು ಮನಸ್ಸು ಮಾಡಿದ್ದರೆ ಕೇಂದ್ರ ಸಚಿವ ಅಥವಾ ಯಾವುದೇ ಉನ್ನತ ಹುದ್ದೆ ಅಲಂಕರಿಸಬಹುದಿತ್ತು. ಅಕಾರ ಹಿಂದೆ ಅವರು ಬೀಳಲಿಲ್ಲ. ಅಂತಹವರ ಮಾರ್ಗದರ್ಶನ, ಸಹಕಾರ ನನಗೆ ಬಹಳವಾಗಿ ಸಿಕ್ಕಿದೆ ಎಂದು ಸ್ಮರಿಸಿದರು.

ನನ್ನ ವಿರುದ್ಧ ಆದಾಯ ತೆರಿಗೆ ಇಲಾಖೆಯ ತನಿಖೆ ನಡೆಯುತ್ತಿದೆ. ಆರ್ಥಿಕ ಅಪರಾಧಗಳ ಕೋರ್ಟ್‍ನಲ್ಲಿ ವಿಚಾರಣೆ, ಜಾರಿ ನಿರ್ದೇಶನಾಲಯದಿಂದ ತನಿಖೆ ನಡೆಯುತ್ತಿದೆ. ಈ ನಡುವೆ ಸಿಬಿಐ ತನಿಖೆಗೂ ಒಪ್ಪಿಸಲಾಗಿದೆ. ನಾನು ಇದನ್ನೆಲ್ಲ ಬಿಟ್ಟು ಕದ್ದು ಓಡಿ ಹೋಗುವುದಿಲ್ಲ. ರಾಜಾರೋಷವಾಗಿ ಸಿಬಿಐ ಕಚೇರಿಗೆ ಹೋಗುತ್ತೇನೆ. ಆತಂಕ ಪಡುವ ಅಗತ್ಯವಿಲ್ಲ. ಯಾರೂ ಕಚೇರಿ ಬಳಿ ಬರಬೇಡಿ. ಗುಂಪಲ್ಲಿ ಕಲ್ಲು ಹೊಡೆದರೆ ಅದು ನನಗೆ ಕೆಟ್ಟ ಹೆಸರು ತರುತ್ತದೆ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

Facebook Comments