ಕುರುಡುಮಲೆ ಗಣೇಶನ ಮೊರೆಹೋದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ

ಬೆಂಗಳೂರು,ಮಾ.1- ಮುಂದಿನ ವಿಧಾನಸಭೆ ಚುನಾವಣೆಗೆ ಪೂರ್ವ ತಯಾರಿಯಾಗಿ ನೂರು ವಿಧಾನಸಭಾ ಕ್ಷೇತ್ರಗಳ ಪ್ರವಾಸವಾದ ಜನಧ್ವನಿ ಯಾತ್ರೆಗೆ ಯಾವುದೇ ವಿಘ್ನ ಎದುರಾಗಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡುಮಲೆ ಗಣೇಶನ ಮೊರೆ ಹೋಗಿದ್ದಾರೆ. ಇಂದು ಬೆಳಗ್ಗೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಕೂಡುಮಲೆ (ಕುರಡುಮಲೆ) ದೇವಸ್ಥಾನಕ್ಕೆ ತೆರಳಿದ ಡಿ.ಕೆ.ಶಿವಕುಮಾರ್ ಅವರು ಗಣೇಶ ಹಾಗೂ ಆಂಜನೇಯ ಸ್ವಾಮಿಯ ದರ್ಶನ ಪಡೆದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಾ.3ರಿಂದ ಜನಧ್ವನಿ ಯಾತ್ರೆ ಆರಂಭವಾಗಲಿದೆ. ಇದಕ್ಕೆ ಯಾವುದೇ ಅಡೆತಡೆಗಳು ಎದುರಾಗದಂತೆ ದೇವರಲ್ಲಿ ಪ್ರಾರ್ಥಿಸಿದ್ದೇನೆ ಎಂದು ಹೇಳಿದರು. ಮಾ.3ರಂದು ಜನಧ್ವನಿ ಯಾತ್ರೆಯನ್ನು ಉದ್ಘಾಟಿಸಲಿರುವ ಕಾಂಗ್ರೆಸ್ ವಿಧಾನಸಭೆ ಅಧಿವೇಶನದ ನಡುವೆ ಬಿಡುವಿನ ವೇಳೆಯಲ್ಲಿ ಆಯ್ದ ಕ್ಷೇತ್ರಗಳಲ್ಲಿ ಕಾರ್ಯಕ್ರಮ ನಡೆಸಲಿದೆ. ಅಧಿವೇಶನದ ಬಳಿಕ ನಿರಂತರವಾಗಿ ಪ್ರವಾಸ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

ಯಾತ್ರೆ ವೇಳೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕೆಲವು ಕಡೆ ಜೊತೆಯಾಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದು, ಇನ್ನು ಕೆಲವು ಕ್ಷೇತ್ರಗಳಲ್ಲಿ ಪ್ರತ್ಯೇಕವಾಗಿ ಭಾಗವಹಿಸುತ್ತಿದ್ದಾರೆ. ಮೊದಲ ಹಂತದ ಜನಧ್ವನಿ ಯಾತ್ರೆ 2018ರ ಚುನಾವಣೆಯಲ್ಲಿ ಸೋಲು ಕಂಡ ಕಾಂಗ್ರೆಸ್ ಅಭ್ಯರ್ಥಿಗಳ ಕ್ಷೇತ್ರಗಳಲ್ಲಿ ನಡೆಯಲಿದೆ.

ನಂತರ ಕಾಂಗ್ರೆಶ್ ಶಾಸಕರ ಕ್ಷೇತ್ರಗಳಲ್ಲಿ ಯಾತ್ರೆ ಆರಂಭವಾಗಲಿದೆ. ಮೊದಲ ಮತ್ತು 2ನೇ ಹಂತ ಸೇರಿ ಒಟ್ಟು 150 ಕ್ಷೇತ್ರಗಳನ್ನು ಗುರಿಯಾಗಿಟ್ಟುಕೊಂಡು ಕಾಂಗ್ರೆಸ್ ಯಾತ್ರೆಯ ವೇಳಾಪಟ್ಟಿಯನ್ನು ರೂಪಿಸಿದೆ.