ಭಯಮುಕ್ತ ಆರ್.ಆರ್.ನಗರ ನಿರ್ಮಾಣವೇ ಕಾಂಗ್ರೆಸ್ ನ ಆದ್ಯತೆ : ಡಿಕೆ ಸುರೇಶ್

Spread the love

ಬೆಂಗಳೂರು, ಅ.28- ಕ್ಷೇತ್ರದಲ್ಲಿ ನಿರ್ಭೀತ ವಾತಾವರಣ ನಿರ್ಮಿಸುವುದು ನಮ್ಮ ಮೊದಲ ಆದ್ಯತೆ. ಯಾವುದೇ ಕಾರಣಕ್ಕೂ ಭಯಬೀಳಬೇಡಿ ಎಂದು ಬೆಂಗ ಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಹೇಳಿದರು. ರಾಜರಾಜೇಶ್ವರಿನಗರ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರ ಜತೆ ಕ್ಷೇತ್ರಾದ್ಯಂತ ಪ್ರಚಾರ ನಡೆಸಿದ ಅವರು, ಇಂದು ಬೆಳಗ್ಗೆ ಜ್ಞಾನಭಾರತಿ ವಾರ್ಡ್‍ನ ಪಾರ್ಕ್‍ಗಳಿಗೆ ಹೋಗಿ ವಾಯುವಿಹಾರದಲ್ಲಿ ತೊಡಗಿದ್ದವರ ಜತೆ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಮಹಿಳೆಯೊಬ್ಬರು ಬಂದು ನಮಗೆ ಕುಸುಮಾ ಅವರನ್ನು ಬೆಂಬಲಿಸುವ ಆಸೆ ಇದೆ. ಆದರೆ, ನಾನಿಲ್ಲಿ ಬಂದು ನಿಮ್ಮ ಜತೆ ಮಾತನಾಡುತ್ತಿದ್ದಂತೆಯೇ ಸಮಗ್ರ ಮಾಹಿತಿಯನ್ನು ಕೆಲವರು ಬಿಜೆಪಿಯವರಿಗೆ ಕಳುಹಿಸುತ್ತಾರೆ. ಪೋಟೋ ವಿಡಿಯೋ ಸಹಿತ ಅಲ್ಲಿಗೆ ಮಾಹಿತಿ ರವಾನೆಯಾಗುತ್ತದೆ. ನಂತರದ ಬೆಳವಣಿಗೆಯಲ್ಲಿ ನಮ್ಮನ್ನು ಹೆದರಿಸುವ ಪ್ರಯತ್ನ ನಡೆಯುತ್ತದೆ. ಅದಕ್ಕಾಗಿ ಭಯವಾಗುತ್ತಿದೆ ಎಂದು ಹೇಳಿದರು.

ಅವರಿಗೆ ಧೈರ್ಯ ಹೇಳಿದ ಡಿ.ಕೆ.ಸುರೇಶ್, ಕ್ಷೇತ್ರಾದ್ಯಂತ ಈ ರೀತಿಯ ಮಾತುಗಳು ಕೇಳಿ ಬರುತ್ತಿದೆ. ಇದಕ್ಕೆಲ್ಲಾ ಕೊನೆಯಾಡಲೇಬೇಕು. ಮುಂದಿನ ದಿನಗಳಲ್ಲಿ ರಾಜರಾಜೇಶ್ವರಿನಗರದ ಈ ತುದಿಯಿಂದ ಆ ತುದಿಯವರೆಗೂ ನಿರ್ಭೀತ ವಾತಾವರಣ ನಿರ್ಮಿಸುವುದು ನಮ್ಮ ಗುರಿ. ಯಾರೂ ಹೆದರಬೇಡಿ. ನಿಮ್ಮೊಂದಿಗೆ ನಾನಿದ್ದೇನೆ ಎಂದು ಅಭಯ ನೀಡಿದರು. ಮತ್ತೊಂದೆಡೆ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರನ್ನು ಸುತ್ತುವರೆದ ಕ್ಷೇತ್ರದ ಮತದಾರರು ಹಾಗೂ ಮಹಿಳೆಯರು ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಕ್ಕಾಗಿ ಅಭಿನಂದಿಸಿದರು.

ನಿಮ್ಮ ತಂದೆ ನಗರಸಭೆ ಅಧ್ಯಕ್ಷರಾಗಿದ್ದಾಗ ಈ ಭಾಗದಲ್ಲಿ ಬೋರ್‍ವೆಲ್ ಕೊರೆಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು. ಒಳ್ಳೆಯ ಕೆಲಸಗಳಾಗಿದ್ದರೆ, ಅಭಿವೃದ್ಧಿ ಎಂಬುದಾಗಿದ್ದರೆ ಆ ಕಾಲದಲ್ಲಿ ಮಾತ್ರ. ಈಗ ಕೆಟ್ಟಿರುವ ಬೋರ್‍ವೆಲ್ ಕೂಡ ರಿಪೇರಿ ಮಾಡಿಸುತ್ತಿಲ್ಲ ಎಂದು ಹಿರಿಯ ನಾಗರಿಕರೊಬ್ಬರು ಕುಸುಮಾ ಅವರ ಬಳಿ ಹೇಳಿದರು.

ನಾನು ನಿಮ್ಮ ಜತೆ ಇರುತ್ತೇನೆ. ಈ ಕ್ಷೇತ್ರದಲ್ಲೇ ವಾಸ ಇರುವುದರಿಂದ ಯಾವುದೇ ಕೆಲಸಗಳಾಗಬೇಕಾದರೂ ನೀವು ನನ್ನನ್ನು ತಕ್ಷಣ ಸಂಪರ್ಕಿಸಬಹುದು. ನಾನು ಹೊರಭಾಗದಲ್ಲಿ ವಾಸವಿಲ್ಲ. ಕಷ್ಟ-ಸುಖ ಎಲ್ಲದಕ್ಕೂ ನಿಮ್ಮ ಜತೆ ಇರುತ್ತೇನೆ. ನಿಮ್ಮ ಮನೆ ಮಗಳಾಗಿದ್ದೇನೆ. ನ.3ರಂದು ನಡೆಯುವ ಚುನಾವಣೆಯಲ್ಲಿ ಕ್ರಮ ಸಂಖ್ಯೆ 1ಕ್ಕೆ ಮತ ಹಾಕುವ ಮೂಲಕ ನನ್ನನ್ನು ಗೆಲ್ಲಿಸಿ ಎಂದು ಪ್ರಾರ್ಥಿಸಿದರು.

ಮತ್ತೊಂದು ಸ್ಥಳದಲ್ಲಿ ಮಹಿಳೆಯೊಬ್ಬರು ಕುಸುಮಾ ಮತ್ತು ಡಿ.ಕೆ.ಸುರೇಶ್ ಅವರ ಜತೆ ಮಾತನಾಡುತ್ತಾ, ಕೋವಿಡ್ ಸಂದರ್ಭದಲ್ಲಿ ಕುಸುಮಾ ಅವರು ನಮ್ಮ ಜತೆ ನಿಂತಿದ್ದರು. ಅವರ ಕೈಲಾದ ಸಹಾಯ ಮಾಡಿದರು. ಆಗ ಅವರು ರಾಜಕೀಯ ಸೇರುವ ಯಾವ ಸೂಚನೆಗಳೂ ಇರಲಿಲ್ಲ.

ನಾವೇ ಅವರಿಗೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಎಂದು ಸಲಹೆ ಮಾಡಿದೆವು. ಜನರ ಕಷ್ಟಕ್ಕೆ ಸ್ಪಂದಿಸುವುದಷ್ಟೇ ನನ್ನ ಉದ್ದೇಶ. ರಾಜಕೀಯ ಮುಖ್ಯ ಅಲ್ಲ ಎಂದು ಕುಸುಮಾ ಹೇಳಿದ್ದರು. ಅದೃಷ್ಟವಶಾತ್ ಅವರನ್ನೇ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಮಾಡಿದೆ ಎಂದು ಮಹಿಳೆ ಮನದುಂಬಿ ನುಡಿದರು.

ನಿಮ್ಮ ಹಾರೈಕೆಯಂತೆ ನಾನು ಚುನಾವಣೆಯಲ್ಲಿ ನಿಂತಿದ್ದೇನೆ. ಬೆಂಬಲ ನೀಡಿ ಎಂದು ಕುಸುಮಾ ಅವರು ಮನವಿ ಮಾಡಿದಾಗ, ನೀವು ಕೇಳುವುದೇ ಬೇಡ ನಮ್ಮ ವೋಟು ನಿಮಗೆ ಎಂದು ಹೇಳುವ ಮೂಲಕ ಬೆಂಬಲ ವ್ಯಕ್ತಪಡಿಸಿದರು. ಸಂಸದ ಡಿ.ಕೆ.ಸುರೇಶ್ ಹಾಗೂ ಸ್ಥಳೀಯ ನಾಯಕರು ಇಂದು ಫಾರೆಸ್ಟ್ ಲೇಔಟ್, ಕೆಂಗುಂಟೆ ಸ್ಲಂ, ಮಲ್ಲತ್ತಹಳ್ಳಿ, ಎಸ್‍ಕೆಪಿ ಕಲ್ಯಾಣಮಂಟಪ, ಚನ್ನಪ್ಪ ಬಡಾವಣೆ, ಮುನೇಶ್ವರ ಬಡಾವಣೆ, ಪ್ರೆಸ್‍ಲೇಔಟ್, ಪಾಂಚಜನ್ಯ ವಿದ್ಯಾಪೀಠ, ಅನ್ನಪೂರ್ಣೇಶ್ವರಿ ಬಡಾವಣೆ, ಉಲ್ಲಾಳ ಮುಖ್ಯರಸ್ತೆ, ವಿಶ್ವವಿದ್ಯಾನಿಲಯದ ವಸತಿ ನಿಲಯಗಳು, ಪಾಪರೆಡ್ಡಿಪಾಳ್ಯ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು.

ಹೋದ ಕಡೆಯಲ್ಲೆಲ್ಲಾ ಕುಸುಮಾ ಅವರಿಗೆ ಭಾರೀ ಜನ ಬೆಂಬಲ ವ್ಯಕ್ತವಾಯಿತು. ಬಹಳ ದಿನಗಳ ನಂತರ ರಾಜರಾಜೇಶ್ವರಿನಗರಕ್ಕೆ ಸುಸಂಸ್ಕøತ ಮತ್ತು ಸದ್ಗುಣಗಳ ಅಭ್ಯರ್ಥಿ ಸಿಕ್ಕಿದ್ದಾರೆ ಎಂದು ಮತದಾರರು ಹರ್ಷ ವ್ಯಕ್ತಪಡಿಸುತ್ತಿದ್ದದ್ದು ಸಾಮಾನ್ಯವಾಗಿತ್ತು.

Facebook Comments