ಬಿಜೆಪಿಯವರು ರಮೇಶ್ ಜಾರಕಿಹೊಳಿ ಭಯದಲ್ಲಿದ್ದಾರೆ : ಡಿ.ಕೆ.ಸುರೇಶ್

Spread the love

ಬೆಂಗಳೂರು,ಮಾ.28- ಸರ್ಕಾರ ರಚನೆ ಮಾಡುವವರು ಅವರೇ, ಬೀಳಿಸುವವರು ಅವರೇ. ಹೀಗಾಗಿ ಬಿಜೆಪಿಯವರಿಗೆ ರಮೇಶ್ ಜಾರಕಿಹೊಳಿ ಅವರ ಬಗ್ಗೆ ಭಯ ಇದೆ ಎಂದು ಸಂಸದ ಡಿ.ಕೆ.ಸುರೇಶ್ ಲೇವಡಿ ಮಾಡಿದ್ದಾರೆ. ನಗರದಲ್ಲಿಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದಲ್ಲಿ ಮುಖ್ಯಮಂತ್ರಿಗಳೂ ಇಲ್ಲ, ಗೃಹ ಸಚಿವರೂ ಇಲ್ಲ. ಹಾಗಾಗಿ ಇನ್ನು ಮುಂದೆ ಮಹಿಳೆಯರಿಗೆ ಸರ್ಕಾರದ ಕಡೆಯಿಂದ ರಕ್ಷಣೆ ಇಲ್ಲ ಎಂಬ ಸಂದೇಶ ಹೋದಂತಾಗಿದೆ ಎಂದರು.

ಇಡೀ ಸರ್ಕಾರ ಒಬ್ಬ ವ್ಯಕ್ತಿಗೆ ಹೆದರಿ ಕುಳಿತುಕೊಳ್ಳುವುದು ಹಾಸ್ಯಾಸ್ಪದ. ಆರೋಪಿಯನ್ನು ಕೂಡಲೇ ಬಂಧಿಸಿ ನಾವು ಕಾನೂನಿನಂತೆ ನಡೆದುಕೊಳ್ಳುತ್ತೇವೆ ಎಂಬ ಸಂದೇಶವನ್ನು ರವಾನಿಸಬೇಕಿತ್ತು. ಆದರೆ, ಆಗುತ್ತಿರುವುದೇ ಬೇರೆ ಎಂದು ಹೇಳಿದರು. ಅಕ್ರಮ ಚಟುವಟಿಕೆಗಳನ್ನು ಮುಚ್ಚಿಹಾಕಿ ಆರೋಪಿಯನ್ನು ರಕ್ಷಣೆ ಮಾಡುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ.

ಇದುವರೆಗೂ ಯುವತಿಯ ಹೇಳಿಕೆ ಮೇಲೆ ವಿಚಾರಣೆ ನಡೆಯುತ್ತಿಲ್ಲ. ಗೃಹ ಸಚಿವರು ಕಾನೂನು ಸುವ್ಯವಸ್ಥೆ ವಿಷಯದಲ್ಲಿ ಕೈಚೆಲ್ಲಿ ಕುಳಿತಿದ್ದಾರೆ. ಹೀಗಾಗಿ ನಾವು ಯುವತಿ ರಕ್ಷಣೆಗೆ ನಿಲ್ಲಬೇಕಾಗುತ್ತದೆ ಎಂದು ಸುರೇಶ್ ತಿಳಿಸಿದರು.

ಡಿ.ಕೆ.ಶಿವಕುಮಾರ್ ವಿಷಯದಲ್ಲಿ ರಮೇಶ್ ಜಾರಕಿಹೊಳಿ ಬಳಸಿರುವ ಅವಾಚ್ಯ ಶಬ್ಧಕ್ಕೆ ಅವರು ಎದುರು ಸಿಕ್ಕಾಗಲೇ ಉತ್ತರ ಹೇಳುತ್ತೇನೆ. ಮಾಧ್ಯಮಗಳ ಮುಂದೆ ಅವರಿಗೆ ಪ್ರತಿಕ್ರಿಯೆ ನೀಡುವುದಿಲ್ಲ. ರಮೇಶ್ ಜಾರಕಿಹೊಳಿ ಅವರು ಕನಕಪುರಕ್ಕಾದರೂ ಬರಲಿ, ಬೆಂಗಳೂರಿಗಾದರೂ ಬರಲಿ. ಬಂದಾಗ ನೋಡಿಕೊಂಡರಾಯಿತು ಎಂದರು.

ಬಿಜೆಪಿಯ ಶಾಸಕರೇ ಸಿಡಿ ವಿಚಾರವಾಗಿ ಜಗಳವಾಡಿರುವುದನ್ನು ನೋಡಿದ್ದೇವೆ. ಕಾಂಗ್ರೆಸಿನವರ್ಯಾರೂ ಸಿಡಿ ಮಾಡಿಸಿಲ್ಲ. ತಮ್ಮ ಮಾನ ಮುಚ್ಚಿಕೊಳ್ಳಲು ಆರು ಮಂದಿ ಸಚಿವರು ಕೋರ್ಟ್ ಮೊರೆ ಹೋಗಿದ್ದು ನಮ್ಮ ಕಣ್ಣೆದುರಿಗೇ ಇದೆ. ಎಲ್ಲೋ ಬಿಟ್ಟಿದ್ದ ಮಾನವನ್ನು ಮುಚ್ಚಿಕೊಳ್ಳಲು ಒದ್ದಾಡುತ್ತಿರುವುದು ಅವರೆ. ಪ್ರಕರಣದ ದಾರಿ ತಪ್ಪಿಸಲು ಅನಗತ್ಯವಾಗಿ ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದರು.

ಸಿಡಿ ಸರ್ಕಾರದ ಪ್ರಾಸ್ತವಿಕ ಡ್ರಾಮ ನಡೆಯುತ್ತಿದೆಯೇ ಹೊರತು ಮಗಳ ವಯಸ್ಸಿನ ಹೆಣ್ಣು ಮಗಳನ್ನು ಬೆತ್ತಲು ಮಾಡಿದರ ಬಗ್ಗೆ ಎಲ್ಲಿಯೂ ಚರ್ಚೆಯಾಗುತ್ತಿಲ್ಲ. ಇಂತಹ ಕೃತ್ಯ ಮಾಡಿದವರ ರಕ್ಷಣೆಗೆ ರಾಷ್ಟ್ರೀಯ ಪಕ್ಷ ನಿಂತಿರುವುದು ನೋಡಿದರೆ ಈ ಸರ್ಕಾರ ಸಿಡಿಯಿಂದ ನಿಂತಿದೆಯೇ ಹೊರತು ಬೇರೆಯವರಿಂದಲ್ಲ ಎಂಬುದು ಸ್ಪಷ್ಟವಾಗುತ್ತಿದೆ ಎಂದು ಹೇಳಿದರು.

Facebook Comments