‘ಗೂಂಡಾಗಳನ್ನು ಬಿಟ್ಟು ಕೆಲವು ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಬಲವಂತವಾಗಿ ಕೂಡಿಹಾಕಿದೆ’

D-K-Suresh--01

ನವದೆಹಲಿ, ಫೆ.7- ರಾಜ್ಯ ಸರ್ಕಾರವನ್ನು ಕೆಡವಲು ಯತ್ನಿಸುತ್ತಿರುವ ಬಿಜೆಪಿ, ಕೆಲವು ಶಾಸಕರನ್ನು ಬಲವಂತವಾಗಿ ಕೂಡಿಹಾಕಿದೆ. ಪೊಲೀಸರು ಹಾಗೂ ಗೂಂಡಾಗಳಿಂದ ಬೆದರಿಕೆ ಒಡ್ಡಲಾಗಿದೆ ಎಂದು ಸಂಸದ ಡಿ.ಕೆ.ಸುರೇಶ್ ಗಂಭೀರ ಆರೋಪ ಮಾಡಿದರು.

ಕಾಂಗ್ರೆಸ್-ಜೆಡಿಎಸ್‍ನ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಪಕ್ಷದವರು ಶಾಸಕರನ್ನು ಬಲವಂತವಾಗಿ ಕೂಡಿಹಾಕಿರುವುದಕ್ಕೆ ನಮ್ಮ ಬಳಿ ಎಲ್ಲ ದಾಖಲೆಗಳಿವೆ.

ನಮ್ಮ ಶಾಸಕರಿಗೆ ಹಣದ ಆಮಿಷ ಒಡ್ಡಿರುವುದಲ್ಲದೆ ರಾಜಕೀಯವಾಗಿ ಅವರನ್ನು ಮುಗಿಸುತ್ತೇವೆ ಎಂಬ ಬೆದರಿಕೆಯೊಡ್ಡಿ ಒಂದೆಡೆ ಕೂಡಿ ಹಾಕಿದ್ದಾರೆ. ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಲಾಗಿದೆ. ಈ ಸಂದರ್ಭದಲ್ಲಿ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿಯಿಂದ ಸಂವಿಧಾನ ವಿರೋಧಿ ಕೆಲಸ ನಡೆಯುತ್ತಿದೆ. ಬಹುಮತವಿರುವ ಸಮ್ಮಿಶ್ರ ಸರ್ಕಾರವನ್ನು ಪತನ ಮಾಡುವ ಯತ್ನಕ್ಕೆ ಮುಂದಾಗಿದ್ದಾರೆ. ಇದಕ್ಕೆ ಮೋದಿ, ಅಮಿತ್ ಷಾ ನೇರವಾಗಿ ಕುಮ್ಮಕ್ಕು ನೀಡುತ್ತಿದ್ದಾರೆ. ಶಾಸಕರನ್ನು ತಮ್ಮ ಕ್ಷೇತ್ರಕ್ಕೆ ಹೋಗಲು ಬಿಡದೆ 25 ರಿಂದ 50 ಕೋಟಿ ನೀಡುವ ಆಮಿಷವೊಡ್ಡಿ ಕೂಡಿಟ್ಟುಕೊಂಡಿದ್ದಾರೆ. ಈಗ ಐಟಿ, ಇಡಿ ಇಲಾಖೆಗಳು ಎಲ್ಲಿ ಹೋಗಿವೆ ಎಂದು ಕಿಡಿಕಾರಿದರು.

ಈ ಹಿಂದೆ ಆಪರೇಷನ್ ಕಮಲ ಎಂಬುದನ್ನು ಯಾರೂ ನೋಡಿರಲಿಲ್ಲ. ಅದನ್ನು ಪ್ರಾರಂಭಿಸಿದ್ದೇ ಬಿ.ಎಸ್.ಯಡಿಯೂರಪ್ಪ. ಮೊದಲಿಗೆ ಕರ್ನಾಟಕದಲ್ಲೇ ಆಪರೇಷನ್ ಕಮಲ ಆರಂಭಿಸಿದ್ದರು. ರಾಜ್ಯ ಸರ್ಕಾರವನ್ನು ಕೆಡವಲು ನಿರಂತರವಾಗಿ ಪ್ರಯತ್ನಿಸಿದ್ದು, ಇದಕ್ಕೆ ಮಹಾರಾಷ್ಟ್ರ ಸರ್ಕಾರವು ಕೈ ಜೋಡಿಸಿದೆ ಎಂದು ಆರೋಪಿಸಿದರು.

ಶಾಸಕರನ್ನು ಬಂಧನದಲ್ಲಿಟ್ಟಿರುವ ಬಗ್ಗೆ ನಮ್ಮ ಬಳಿ ದಾಖಲೆಗಳಿವೆ. ಈ ಬಗ್ಗೆ ವರಿಷ್ಠರ ಜತೆ ಚರ್ಚಿಸಿ ಸೂಕ್ತ ಸಂದರ್ಭದಲ್ಲಿ ಬಿಡುಗಡೆ ಮಾಡಲಿದ್ದೇವೆ ಎಂದು ಡಿ.ಕೆ.ಸುರೇಶ್ ತಿಳಿಸಿದರು.

ಪ್ರಜಾಪ್ರಭುತ್ವದ ಕಗ್ಗೊಲೆಗೆ ಮುಂದಾಗಿರುವ ಪ್ರತಿಪಕ್ಷದವರಿಗೆ ಕೇಂದ್ರ ನಾಯಕರು ಬೆಂಬಲವಾಗಿದ್ದಾರೆ. ನರೇಂದ್ರ ಮೋದಿ ಯುಗ ಅಂತ್ಯವಾಗಲಿದೆ ಎಂದು ಎಚ್ಚರಿಸಿದ ಅವರು, ಕೇಂದ್ರದಿಂದ ಅಧಿಕಾರ ದುರ್ಬಳಕೆಯಾಗುತ್ತಿದ್ದರೂ ಈ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ.

ಮೂರು ತಿಂಗಳಿನಿಂದ ರಾಜಕೀಯ ಅಸ್ಥಿರತೆ ಮೂಡಿಸುವ ಯತ್ನಗಳು ನಡೆಯುತ್ತಿದ್ದರೂ ಯಾರೂ ಇದನ್ನು ತಡೆಯಲು ಮುಂದಾಗಿಲ್ಲ ಎಂದು ಆಕ್ಷೇಪಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್, ಜೆಡಿಎಸ್ ಸಂಸದರು, ಕುಪೇಂದ್ರರೆಡ್ಡಿ, ಉಗ್ರಪ್ಪ, ಮುದ್ದಹನುಮೇಗೌಡ ಮತ್ತಿತರರಿದ್ದರು.

Sri Raghav

Admin