ನಿಷೇಧಿತ ನೋಟುಗಳ ಬದಲಾವಣೆ ಪ್ರಕರಣದಲ್ಲಿ ಡಿಕೆಶಿ ಆಪ್ತರು ಸಲ್ಲಿಸಿದ್ದ ನಿರೀಕ್ಷಣಾ ಅರ್ಜಿ ವಜಾ

notes-ban

ಬೆಂಗಳೂರು. ಜೂ. 29 : ಐನೂರು ಹಾಗೂ ಒಂದು ಸಾವಿರ ಮುಖಬೆಲೆಯ ನೋಟುಗಳ ಬದಲಾವಣೆ ಪ್ರಕರಣದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಆಪ್ತರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನನ್ನು ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ.  ಇದರಿಂದಾಗಿ ಈ ಪ್ರಕರಣದ ಆರು ಆರೋಪಗಳನ್ನು ಸಿಬಿಐ ಯಾವುದೇ ಸಂದರ್ಭದಲ್ಲೂ ಬಂಧಿಸುವ ಸಾಧ್ಯತೆ ಇದೆ‌.  ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಆಪ್ತ ಸಹಾಯಕ ಬಿ.ಪದ್ಮನಾಭಯ್ಯ,ಶಿವಕುಮಾರ್ ಮಾಜಿ ಪಿ.ಎ. ಪಿ.ಎ ಶೇಷಗಿರಿ, ಎಸ್ ಪದ್ಮರೇಖಾ, ತಿಮ್ಮಯ್ಯ , ಶಿವನಾಂದ್ ಹಾಗೂ ನಂಜಪ್ಪ ಅವರುಗಳ ನಿರೀಕ್ಷಣಾ ಅರ್ಜಿಯನ್ನು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಎಸ್.ಹೆಚ್. ಪುಷ್ಪಂಜಾಲಿ ದೇವಿ ವಜಾಗೊಳಿಸಿದರು.

ಇದೊಂದು ಗಂಭೀರ ಪ್ರಕರಣವಾಗಿರುವುದರಿಂದ ಆರೋಪಗಳಿಗೆ ಈ ಹಂತದಲ್ಲಿ ಜಾಮೀನು ನೀಡುವುದು ಸರಿಯಲ್ಲ ಎಂದು ಸಿಬಿಐ ಪರ ವಕೀಲರು ವಾದ ಮಂಡಿಸಿದರು.  ಇದನ್ನು ಮಾನ್ಯ ಮಾಡಿದ ನ್ಯಾಯಮೂರ್ತಿ ಜಾಮೀನು ಅರ್ಜಿಯನ್ನು ವಜಾಮಾಡಿದರು.  ಈ ಎಲ್ಲಾ ಆರೋಪಿಗಳು ಐನೂರು ಹಾಗೂ ಒಂದು ಸಾವಿರ ಮುಖಬೆಲೆಯ ನೋಟುಗಳನ್ನು ಕೇಂದ್ರ ಸರ್ಕಾರ ಅಮಾನೀಕರಣಗೊಳಿಸಿದ ಸಂದರ್ಭದಲ್ಲಿ ಸುಮಾರು 10 ಲಕ್ಷ ಹಣವನ್ನು ರಾಮನಗರ ಕಾರ್ಪೋರೇಷನ್ ಬ್ಯಾಂಕಿನಲ್ಲಿ ಬದಲಾವಣೆ ಮಾಡಿದ್ದರೆಂಬ ಆರೋಪ ಕೇಳಿ ಬಂದಿತ್ತು.

ಬ್ಯಾಂಕ್ ನ ವ್ಯವಸ್ಥಾಪಕರು ಹಾಗೂ ಕೆಲ ಸಿಬ್ಬಂದಿಗಳ ಜೊತೆ ಸೇರಿಕೊಂಡು ನೋಟುಗಳನ್ನು ಬದಲಾವಣೆ ಮಾಡಿಕೊಂಡಿದ್ದರು ಎನ್ನಲಾಗಿದೆ.  ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖಾ ತಂಡ ಕೆಲ ದಿನಗಳ ಹಿಂದೆ ಬೆಂಗಳೂರು, ರಾಮನಗರ, ಕನಕಪುರ, ನೆಲಮಂಗಲ ಸೇರಿದಂತೆ ಅನೇಕ ಕಡೆ ದಾಳಿ ನಡೆಸಿ ಕೆಲವು ದಾಖಲೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಸಿಬಿಐ ದಾಳಿ ನಡೆಸುವ ಮುನ್ನವೇ ಸಚಿವ ಶಿವಕುಮಾರ್ ಹಾಗೂ ಸುರೇಶ್ ಅವರುಗಳು ಪತ್ರಿಕಾಗೋಷ್ಠಿ ನಡೆಸಿ , ಕೇಂದ್ರ ಸರ್ಕಾರ ತಮ್ಮ ಮೇಲೆ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದರು.  ಒಂದು ವೇಳೆ ಸಿಬಿಐ ತನಿಖಾ ತಂಡವು ಹೆಚ್ಚಿನ ಮಾಹಿತಿಗಾಗಿ ಶಿವಕುಮಾರ್ ಆಪ್ತರನ್ನು ಬಂಧಿಸಿದರೆ, ಮತ್ತೊಮ್ಮೆ ರಾಜಕೀಯ ಜಟಾಪಟಿಗೆ ವೇದಿಕೆಯಾಗುವ ಸಾಧ್ಯತೆ ಇದೆ.

Sri Raghav

Admin