ಬಾಯಿಮುಚ್ಚಿಕೊಂಡು ಕೆಲಸ ಮಾಡಿ : ಡಿಕೆಶಿ ಎಚ್ಚರಿಕೆ

Social Share

ಬೆಂಗಳೂರು, ಜು.23- ಎಲ್ಲಾ ನಾಯಕರು ಬಾಯಿ ಮುಚ್ಚಿಕೊಂಡು ವ್ಯಕ್ತಿ ಪೂಜೆ ಬಿಟ್ಟು, ಪಕ್ಷ ಸಂಘಟನೆ ಮಾಡಿ. ಮೊದಲು ಕಾಂಗ್ರೆಸ್‍ನ್ನು ಅಧಿಕಾರಕ್ಕೆ ತನ್ನಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಖಡಕ್ ಸೂಚನೆ ನೀಡಿದ್ಧಾರೆ.

ಸದಾಶಿವನಗರ ನಿವಾಸದ ಬಳಿ ಇಂದು ಮಾಧ್ಯಮಗಳು ಮುಖ್ಯಮಂತ್ರಿ ಸ್ಥಾನ ವಿಚಾರವಾಗಿ ಜಮೀರ್ ಅಹಮ್ಮದ್ ನೀಡಿರುವ ಹೇಳಿಕೆ ಸಂಬಂಧ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಲೆವೆಲ್‍ಗೆ ಮಾತನಾಡುವವರ ವಿಚಾರ ನಾನು ಮಾತನಾಡುತ್ತೇನೆ. ಸದ್ಯಕ್ಕೆ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸವನ್ನು ಬಾಯಿ ಮುಚ್ಚಿಕೊಂಡು ಎಲ್ಲರೂ ಮಾಡಬೇಕು.

ಎಲ್ಲರಿಗೂ ನಾನು ಈ ಮಾತನ್ನು ಹೇಳುತ್ತಿದ್ದೇನೆ ಎಂದರು. ಪಕ್ಷದ ಬಗ್ಗೆ ನಿಜವಾಗಲೂ ಆಸಕ್ತಿ ಇದ್ದರೆ ವ್ಯಕ್ತಿ ಪೂಜೆ ಬಿಟ್ಟು ಪಕ್ಷ ಪೂಜೆ ಮಾಡಿ. ಹೆಚ್ಚಿನ ಜನರನ್ನು ಪಕ್ಷಕ್ಕೆ ಕರೆ ತರುವತ್ತ ಗಮನಹರಿಸಿ. ಎಲ್ಲರೂ ತಮ್ಮ ಸಮುದಾಯಗಳನ್ನು ಸಂಘಟನೆ ಮಾಡಿ, ಪಕ್ಷವನ್ನು ಅಕಾರಕ್ಕೆ ತನ್ನಿ ಎಂದು ಖಾರವಾಗಿ ತಿರುಗೇಟು ನೀಡಿದರು.

ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಎಂದು ಜಮೀರ್ ಹೇಳಿಕೆ ನೀಡಿದ್ದರು, ಇದಕ್ಕೆ ನಿನ್ನೆ ಸಿಡಿಮಿಡಿ ವ್ಯಕ್ತ ಪಡಿಸಿದ್ದ ಡಿ.ಕೆ.ಶಿವಕುಮಾರ್ ಅವರು, ಮುಖ್ಯಮಂತ್ರಿ ವಿಷಯವಾಗಿ ಹೇಳಿಕೆ ನೀಡದಂತೆ ಸೂಚನೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಜಮೀರ್ ಅಹಮದ್ ಖಾನ್ ನನ್ನ ಹೇಳಿಕೆಯಿಂದ ಡಿ.ಕೆ.ಶಿವಕುಮಾರ್ ಅವರಿಗೆ ಬೇಸರವಾಗಿದ್ದರೆ ನಾನು ಏನು ಮಾಡಲು ಸಾಧ್ಯವಿಲ್ಲ ಎಂದು ಉದ್ಧಟತನದಿಂದ ಮಾತನಾಡಿದ್ದರು.

ಇಂದು ಅದಕ್ಕೆ ತಿರುಗೇಟು ನೀಡಿರುವ ಡಿ.ಕೆ.ಶಿವಕುಮಾರ್ ಬಾಯಿ ಮುಚ್ಚಿಕೊಂಡು ಸಂಘಟನೆ ಮಾಡಿ ಎಂದು ತಾಕೀತು ಮಾಡಿದ್ದಾರೆ. ನಾನು ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರ ಸ್ಪರ್ಧೆಯ ಮಧ್ಯೆ ಹೋಗುವುದಿಲ್ಲ, ನನ್ನದೇ ಆದ ಪ್ರತ್ಯೇಕ ಗುರುತು ಇದೆ ಎಂಬ ಎಂ.ಬಿ. ಪಾಟೀಲ್ ಅವರ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, 224 ಕ್ಷೇತ್ರಗಳಲ್ಲಿ ಗೆಲ್ಲುವ ಎಲ್ಲರೂ ಮುಖ್ಯಮಂತ್ರಿ ಸ್ಥಾನಕ್ಕೆ ಆಸೆ ಪಟ್ಟರೆ ತಪ್ಪಿಲ್ಲ ಎಂದರು.

ಮುಸಲ್ಮಾನರ ಸಲೂನ್ ಬಂದ್ ಮಾಡಿಸಬೇಕು ಎಂಬ ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಅವರ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ನಾನು ಪ್ರಮೋದ್ ಮುತಾಲಿಕ್ ಅವರಿಗೆ ಉತ್ತರ ನೀಡುವುದಿಲ್ಲ. ರಾಜ್ಯದಲ್ಲಿ ಸಂವಿಧಾನ ಬದ್ಧವಾಗಿ ಎಲ್ಲರಿಗೂ ರಕ್ಷಣೆ ನೀಡುತ್ತೇವೆ ಎಂದು ಪ್ರಮಾಣ ಮಾಡಿರುವ ಮುಖ್ಯಮಂತ್ರಿಗಳು, ಗೃಹ ಸಚಿವರು ಈ ಬಗ್ಗೆ ಉತ್ತರ ನೀಡಬೇಕು.

ಈ ಎಲ್ಲವನ್ನು ಬಿಜೆಪಿ ಹಾಗೂ ಬಿಜೆಪಿ ಸರ್ಕಾರವೇ ಹೇಳಿಸುತ್ತಿದೆ. ಹಳೇ ಮೈಸೂರು ಸೇರಿದಂತೆ ಅನೇಕ ಭಾಗಗಳಲ್ಲಿ ಅವರು ಈ ರೀತಿ ಪ್ರಚೋದಿಸುತ್ತಿದ್ದಾರೆ. ಅವರು ಅಂತರಿಕವಾಗಿ ಮಾಡಿರುವ ತಂತ್ರಗಳು ನನಗೆ ಗೋತ್ತಿದೆ. ಇದೆಲ್ಲದರ ಬಗ್ಗೆ ನಾನು ಈಗ ಮಾತನಾಡುವುದಿಲ್ಲ. ಮೊದಲು ಮುಖ್ಯಮಂತ್ರಿಗಳು ಉತ್ತರಿಸಲಿ, ಆಮೇಲೆ ನಾನು ಮಾತಾಡುತ್ತೇನೆ ಎಂದು ತಿಳಿಸಿದರು.

ಕೋಲಾರದಲ್ಲಿ ಬೇರೆ, ಬೇರೆ ಬಣಗಳ ಪ್ರತಿಭಟನೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಕೋಲಾರದಲ್ಲಿ ಯಾವುದೇ ಬಣ ಇಲ್ಲ. ಸೋನಿಯಾ ಗಾಂ ಅವರಿಗೆ ರಕ್ಷಣೆ ಸಿಗಬೇಕು ಎಂದು ಎಲ್ಲರೂ ಹೋರಾಟ ಮಾಡುತ್ತಿದ್ದೇವೆ. ನಾವು ಎಲ್ಲ ಜಿಲ್ಲೆಯಲ್ಲಿ ಪ್ರತಿಭಟನೆ ಮಾಡಲು ಸೂಚಿಸಿದ್ದು, ಅದರಂತೆ ಅವರು ಮಾಡಿದ್ದಾರೆ ಎಂದು ಉತ್ತರಿಸಿದರು.

Articles You Might Like

Share This Article