ಇಷ್ಟಲಿಂಗ ಪೂಜೆ ಮಾಡಿದ ಸಿದ್ದಗಂಗಾ ಶ್ರೀಗಳು, ಆರೋಗ್ಯದಲ್ಲಿ ಚೇತರಿಕೆ

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ತುಮಕೂರು,ಜ.1- ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಶ್ರೀಗಳು ಇಷ್ಟಲಿಂಗಾರಾಧನೆ ನೆರವೇರಿಸಿದ್ದಾರೆ. ಈ ನಡುವೆ ಉಡುಪಿ ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಮತ್ತು ಗೃಹ ಸಚಿವ ಎಂ.ಬಿ.ಪಾಟೀಲ್ ಮಠಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಹೊಸ ವರ್ಷಾಚರಣೆ ಹಿನ್ನೆಲೆ ಹಾಗೂ ಶ್ರೀಗಳ ಆರೋಗ್ಯ ವಿಚಾರಣೆ ಹಿನ್ನೆಲೆಯಲ್ಲಿ ಭಕ್ತರ ದಂಡೆ ಮಠದತ್ತ ಹರಿದು ಬರುತ್ತಿದೆ. ಪಿತ್ತಕೋಶದ ಶಸ್ತ್ರಚಿಕಿತ್ಸೆಯಿಂದಾಗಿ ವಿಶ್ರಾಂತಿಯಲ್ಲಿರುವ ಸಿದ್ದಗಂಗಾ ಶ್ರೀಗಳ ಆರೋಗ್ಯ ಕೊಂಚ ಸುಧಾರಿಸಿದೆ. ಹಳೆ ಮಠದ ಕೊಠಡಿಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಶ್ರೀಗಳ ದೃಶ್ಯಾವಳಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿದೆ.

ಅವರು ಎಂದಿನಂತೆ ತಮ್ಮ ದಿನಚರಿ ಮುಂದುವರೆಸಿಕೊಂಡು ಲವಲವಿಕೆಯಿಮದ ಇದ್ದಾರೆ. ವೈದ್ಯರು, ಪರಿಚಾರಕರು ಆರೈಕೆ ಮಾಡುತ್ತಿದ್ದಾರೆ. ಅವರ ವಿಶ್ರಾಂತಿಗೆ ಯಾವುದೇ ಅಡ್ಡಿಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಭಕ್ತರು ಆತಂಕ ಪಡುವುದು ಬೇಡ, ಗಾಳಿ ಸುದ್ದಿಗೆ ಕಿವಿಗೊಡಬೇಡಿ ಎಂದು ಕಿರಿಯ ಶ್ರೀಗಳಾದ ಸಿದ್ದಲಿಂಗ ಸ್ವಾಮೀಜಿ ಮನವಿ ಮಾಡಿದ್ದಾರೆ.

ಇತ್ತ ಮಠದ ವಿದ್ಯಾರ್ಥಿಗಳು ಶ್ರೀಗಳು ಬೇಗ ಗುಣಮುಖರಾಗಲೆಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ವಿಶ್ವೇಶ್ವರ ತೀರ್ಥ ಸ್ವಾಮೀಜಿ ಇಂದು ಸಿದ್ದಗಂಗಾ ಶ್ರೀಗಳನ್ನು ಭೇಟಿ ಮಾಡಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.

ಶ್ರೀಗಳು ವಿಶ್ರಾಂತಿಯಲ್ಲಿದ್ದರು. ಹಾಗಾಗಿ ನಾವು ಮಾತನಾಡಿಸಲು ಸಾಧ್ಯವಾಗಲಿಲ್ಲ. ಕಿರಿಯ ಶ್ರೀಗಳಿಂದ ಮಾಹಿತಿ ಪಡೆದಿದ್ದೇನೆ. ಅವರು ಆರೋಗ್ಯದಿಂದಿದ್ದಾರೆ. ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಶ್ರೀಗಳ ದರ್ಶನವಿಲ್ಲದ ಕಾರಣ ವಿದ್ಯಾರ್ಥಿಗಳು ಅವರ ಪಾದುಕೆಗಳ ದರ್ಶನ ಪಡೆದು, ಶಾಲೆಗಳಿಗೆ ತೆರಳಿದರು.

Sri Raghav

Admin