ಬೆಂಗಳೂರು, ಜೂ.20- ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಕ್ಯಾಬಿನ್ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ ಮತ್ತು ವಿಮಾನವನ್ನು ಸ್ಪೋಟಿಸುವುದಾಗಿ ಬೆದರಿಕೆ ಹಾಕಿದ ಆರೋಪದ ಮೇಲೆ 36 ವರ್ಷದ ವೈದ್ಯೆಯನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಂಗಳವಾರ ಮಧ್ಯಾಹ್ನ 2.30ರ ಸುಮಾರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಕೆಐಎ) ಸೂರತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಮಾನ ಸಂಖ್ಯೆ ಐಎಕ್ಸ್ 2749 ಹೊರಡಲು ನಿಗದಿಯಾಗಿದ್ದ ಕೆಲವೇ ನಿಮಿಷಗಳ ಮೊದಲು ಈ ಘಟನೆ ನಡೆದಿದೆ.
ಈ ವೈದ್ಯರು ಬೆಂಗಳೂರಿನ ಯಲಹಂಕ ಬಳಿಯ ಶಿವನಹಳ್ಳಿ ನಿವಾಸಿ ಎಂದು ತಿಳಿದುಬಂದಿದೆ.ಮಹಿಳಾ ಪ್ರಯಾಣಿಕ ವ್ಯಾಸ್ ಹಿರಾಲ್ ಮೋಹನ್ ಭಾಯ್ ಅವರು ತಮಗೆ ನಿಗಧಿಯಾಗಿದ್ದ ಆಸನ ಸಂಖ್ಯೆ 20ರಲ್ಲಿ ಕುಳಿತುಕೊಳ್ಳುವ ಮೊದಲು ವಿಮಾನದ ಮೊದಲ ಸಾಲಿನಲ್ಲಿ ತಮ್ಮ ಸಾಮಾನುಗಳನ್ನು ಇಟ್ಟು ಹೋಗಿದ್ದರು.
ವೈದ್ಯೆ ಬ್ಯಾಗ್ ಇಡುವುದಕ್ಕೆ ಕ್ಯಾಬಿನ್ ಸಿಬ್ಬಂದಿ ಆಕ್ಷೇಪ ವ್ಯಕ್ತಪಡಿಸಿ, ಅದನ್ನು ತನ್ನ ಸೀಟಿನ ಬಳಿಯ ಓವರೈಡ್ ಕಂಪಾರ್ಟ್ ಮೆಂಟ್‌ನಲ್ಲಿ ಇಡಲು ಹೇಳಿದಾಗ, ನಿರಾಕರಿಸಿದರು. ಬದಲಾಗಿ ಸಿಬ್ಬಂದಿ ತನ್ನ ಬ್ಯಾಗ್‌ನ್ನು ತನ್ನ ಸೀಟಿಗೆ ಸ್ಥಳಾಂತರಿಸಬೇಕೆಂದು ಒತ್ತಾಯಿಸಿದರು.
ಸಿಬ್ಬಂದಿ ಮತ್ತು ಪೈಲಟ್‌ನ ಮಧ್ಯ ಪ್ರವೇಶಿಸಿ ವಿನಂತಿಗಳ ಹೊರತಾಗಿಯೂ, ಮೋಹನ್ ಭಾಯ್ ಅದನ್ನು ನಿರಾಕರಿಸಿ, ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದರು ಎಂದು ಆರೋಪಿಸಲಾಗಿದೆ. ತನ್ನೊಂದಿಗೆ ವಾದ ಮಾಡಲು ಪ್ರಯತ್ನಿಸಿದ ಸಹ ಪ್ರಯಾಣಿಕರ ಮೇಲೂ ಅವರು ಕೂಗಾಡಿದ್ದಾರೆ.
ಈ ವೇಳೆ ಸಹನೆಕಳೆದುಕೊಂಡ ಮಹಿಳೆಯೂ ವಿಮಾನವನ್ನು ಸ್ಪೋಟಿಸುವುದಾಗಿ ಬೆದರಿಕೆ ಹಾಕಿದಾಗ ಪರಿಸ್ಥಿತಿ ಉಲ್ಬಣಗೊಂಡಿತು. ಪೈಲಟ್ ಮತ್ತು ಸಿಬ್ಬಂದಿ ಭದ್ರತಾ ಸಿಬ್ಬಂದಿ ಮತ್ತು ಸಿಐಎಸ್‌ಎಫ್ ಸಿಬ್ಬಂದಿಗೆ ಮಾಹಿತಿ ನೀಡಿದರು. ನಂತರ ಅವರನ್ನು ವಿಮಾನದಿಂದ ಬಲವಂತವಾಗಿ ಕೆಳಗಿಳಿಸಲಾಯಿತು.
ಮಹಿಳೆಯ ವರ್ತನೆಯಿಂದ ಉಳಿದ ಪ್ರಯಾಣಿಕರ ಸುರಕ್ಷತೆಗೆ ಭಂಗವನ್ನುಂಟುಮಾಡಿದೆ ಎಂದು ಮೂಲಗಳು ತಿಳಿಸಿವೆ.ಮೋಹನ್ ಭಾಯಿ ಕೆಐಎ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಅಧಿಕಾರಿಗಳನ್ನು ನಿಂದಿಸಿ, ಹಲ್ಲೆ ನಡೆಸಿದ್ದಾರೆ. ಅವರು ವೈದ್ಯಕೀಯ ವೃತ್ತಿಯನ್ನು ನಿಲ್ಲಿಸಿದ್ದಾರೆ ಎಂದು ಅವರ ಪತಿ ಪೊಲೀಸರಿಗೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಮಹಿಳೆಯ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 351 (4) (ಅನಾಮಧೇಯ ಸಂವಹನದಿಂದ ಕ್ರಿಮಿನಲ್ ಬೆದರಿಕೆ) ಮತ್ತು 353 (1) (ಬಿ) (ಸಾರ್ವಜನಿಕ ಕಿಡಿಗೇಡಿತನದ ಹೇಳಿಕೆಗಳು) ಹಾಗೂ ನಾಗರಿಕ ವಿಮಾನಯಾನ ಸುರಕ್ಷತೆಯ ವಿರುದ್ಧ ಕಾನೂನುಬಾಹಿರ ಕಾಯ್ದೆಯ ಸೆಕ್ಷನ್ 3 (1) (ಎ) (ವಿಮಾನದಲ್ಲಿ ವ್ಯಕ್ತಿಯ ವಿರುದ್ಧ ಹಿಂಸಾಚಾರದ ಕೃತ್ಯ)ರಡಿ ಪ್ರಕರಣ ದಾಖಲಿಸಲಾಗಿದೆ.
- ಬೆಂಗಳೂರಲ್ಲಿ ಇಂದು ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರ ಸಾವು
- ಶಾಲೆಗಳಿಗೆ ಬಾಂಬ್ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ : ಗೃಹಸಚಿವ ಪರಮೇಶ್ವರ
- ನೈರುತ್ಯ ಮುಂಗಾರು ಚೇತರಿಕೆ, ರಾಜ್ಯದ ಹಲವೆಡೆ ಮಳೆ
- 20 ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ, ಬೆಚ್ಚಿ ಬಿದ್ದ ದೆಹಲಿ
- ಟಿಆರ್ಎಫ್ನ್ನು ಜಾಗತಿಕ ಭಯೋತ್ಪಾದಕ ಸಂಘಟನೆಗೆ ಎಂದು ಘೋಷಿಸಿದ ಅಮೆರಿಕ ; ಭಾರತ ಸ್ವಾಗತ