ಬೆಂಗಳೂರು,ಮಾ.4- ಪಾರಂಪರಿಕ ನೋಂದಾಯಿತ ಶಾಶ್ವತ ದಾಖಲೆಗಳನ್ನು ತಿರುಚುವುದನ್ನು ತಪ್ಪಿಸುವ ಸಲುವಾಗಿ ಸ್ಕ್ಯಾನಿಂಗ್ ಮೂಲಕ ಡಿಜಟಲೀಕರಣಗೊಳಿಸಲು 15 ಕೋಟಿ ರೂ.ಗಳನ್ನು ನಿಗದಿ ಮಾಡಲಾಗಿದೆ.
ಮೊದಲ ಹಂತದಲ್ಲಿ ಬಿಬಿಎಂಪಿ ಹಾಗೂ ರಾಜ್ಯದ 10 ಮಹಾನಗರ ಪಾಲಿಕೆಗಳಲ್ಲಿರುವ ದಾಖಲಾತಿಗಳನ್ನು ಹಂತ ಹಂತವಾಗಿ ಸ್ಕ್ಯಾನ್ ಮಾಡಲಾಗುವುದು. ಇದರಿಂದ ದಾಖಲಾತಿಗಳನ್ನು ನಕಲು ಮಾಡಿ ಮೋಸ ಮಾಡುವುದನ್ನು ತಡೆಯಲು ಸಾಧ್ಯವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.
ರಾಜ್ಯಾದ್ಯಂತ ಈಗಾಗಲೇ ಆರಂಭಗೊಂಡಿರುವ ಡ್ರೋಣ್ ಆಧಾರಿತ ಸ್ವತ್ತುಗಳ ಸರ್ವೇ ಕಾರ್ಯಕ್ಕೆ 287 ಕೋಟಿ ಖರ್ಚು ಮಾಡಲಾಗುತ್ತಿದೆ. ಮುಂದಿನ ಮೂರು ವರ್ಷಗಳಲ್ಲಿ ಇದು ಪೂರ್ಣಗೊಳ್ಳಲಿದ್ದು, ಬಳಿಕ ವಿದ್ಯುನ್ಮಾನ ಪಹಣ ಮತ್ತು ನಕ್ಷೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಉಪ ನೋಂದಾಣಾಕಾರಿಗಳ ಮಾಹಿತಿ ತಂತ್ರಜ್ಞಾನ ಉಪಕರಣಗಳು ಹಾಗೂ ಮೂಲ ಸೌಕರ್ಯಗಳನ್ನು 406 ಕೋಟಿ ರೂ. ವೆಚ್ಚದಲ್ಲಿ ಉನ್ನತ್ತೀಕರಿಸಲಾಗುತ್ತದೆ. ಈ ಮೂಲಕ ಸಾರ್ವಜನಿಕರ ಮೂಲ ಸೌಲಭ್ಯಗಳನ್ನು ಹೆಚ್ಚಿಸಲಾಗುವುದು.ಫ್ರೂಟ್ಸ್ ಮತ್ತು ಕಾವೇರಿ ತಂತ್ರಾಂಶಗಳನ್ನು ಸಂಯೋಜಿಸಿ ರೈತರು ಬೆಳೆ ಸಾಲ ನೋಂದಾಯಿಸಲು ಉಪ ನೋಂದಣಾಕಾರಿಗಳ ಕಚೇರಿಗೆ ಭೇಟಿ ನೀಡುವುದನ್ನು ತಪ್ಪಿಸುವುದಾಗಿ ಭರವಸೆ ನೀಡಿದ್ದಾರೆ.
