ದೊಡ್ಡಬಳ್ಳಾಪುರದಲ್ಲಿ ರುಂಡ ಕತ್ತರಿಸಿ ಕೊಲೆ ಮಾಡಿದ್ದ ಆರೋಪಿ ಅರೆಸ್ಟ್

Arrest--01

ಬೆಂಗಳೂರು, ಜೂ.4-ವ್ಯಕ್ತಿಯೊಬ್ಬನ ರುಂಡ-ಮುಂಡ ಬೇರ್ಪಡಿಸಿ ಭೀಕರವಾಗಿ ಕೊಲೆ ಮಾಡಿ ರುಂಡವನ್ನು ಬೇರೆಡೆ ತಂದು ಬಿಸಾಡಿ ಪರಾರಿಯಾಗಿದ್ದ ಆರೋಪಿಯನ್ನು ದೊಡ್ಡಬಳ್ಳಾಪುರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ದೊಡ್ಡಬಳ್ಳಾಪುರದ ನಿವಾಸಿ, ರೌಡಿ ಪವನ್ ಅಲಿಯಾಸ್ ಪವನಿ(21) ಬಂಧಿತ ಕೊಲೆ ಆರೋಪಿ. ಕರೇನಹಳ್ಳಿ ನಿವಾಸಿ ಉಮಾಶಂಕರ್ ಎಂಬುವರ ಮಗ ಉಪೇಂದ್ರ ಎಂಬಾತನನ್ನು ಆರೋಪಿ ರುಂಡ-ಮುಂಡ ಬೇರ್ಪಡಿಸಿ ಭೀಕರವಾಗಿ ಕೊಲೆ ಮಾಡಿದ್ದನು.

ಘಟನೆ ವಿವರ:

ಮೇ 29 ರಂದು ದೊಡ್ಡಬಳ್ಳಾಪುರದ ನಿವಾಸಿ ಅಶೋಕ ಮತ್ತು ಆತನ ಸಹಚರರು ತನ್ನ ಸ್ನೇಹಿತನ ಬೈಕ್ ಕಿತ್ತುಕೊಂಡು ಹೋಗಿದ್ದ ವಿಚಾರದಲ್ಲಿ ಜಗಳವಾಗಿದೆ. ಅಶೋಕನ ಸಹಚರ ಉಪೇಂದ್ರ ತನ್ನ ಹಾಗೂ ಸಹಚರರ ಬಗ್ಗೆ ಮಾಹಿತಿಯನ್ನು ಅಶೋಕನಿಗೆ ಹೇಳಿ ಹೊಡೆಸುತ್ತಾನೆಂದು ತಿಳಿದ ಆರೋಪಿ ಪವನ್ ಮೇ 30ರಂದು ಸಂಜೆ ಉಪೇಂದ್ರನನ್ನು ನಂಬಿಸಿ ನಾಗರಕೆರೆಯ ನಡುಗಡ್ಡೆಯ ಮೇಲ್ಭಾಗಕ್ಕೆ ಕರೆದುಕೊಂಡು ಹೋಗಿದ್ದನು. ಆ ಸ್ಥಳದಲ್ಲಿ ಉಪೇಂದ್ರನ ಜೊತೆ ಜಗಳವಾಡಿ ಆತನ ರುಂಡ-ಮುಂಡವನ್ನು ಕತ್ತರಿಸಿ ಭೀಕರವಾಗಿ ಕೊಲೆ ಮಾಡಿ, ತಲೆಯನ್ನು ಮಾತ್ರ ಚೀಲದಲ್ಲಿಟ್ಟುಕೊಂಡು ಚಿಕ್ಕಪೇಟೆ ಬಳಿಯ ಕೆರೆಯಂಚಿನಲ್ಲಿ ಎಸೆದು ಆರೋಪಿ ಪವನ್ ಅದೇ ದಿನ ರಾತ್ರಿ ಅಶೋಕ ಮತ್ತು ಅವನ ಸಹಚರರು ತನಗೆ ಒಡೆದು ಕೊಲೆಗೆ ಯತ್ನಿಸಿದರೆಂದು ದೂರು ನೀಡಿದ್ದನು.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಅಶೋಕ ಮತ್ತು ಐದು ಮಂದಿ ಸಹಚರರನ್ನು ಬಂಧಿಸಿದ್ದರು. ಜೂ.1 ರಂದು ಸಂಜೆ 7.45ರಲ್ಲಿ ಚಿಕ್ಕಪೇಟೆಯ ನಾಗರಕೆರೆ ಪಕ್ಕ ಇರುವ ಮನೆ ಹಿಂಭಾಗದಲ್ಲಿ ಸುಮಾರು 20 ರಿಂದ 25ವರ್ಷದ ವಯಸ್ಸಿನ ವ್ಯಕ್ತಿಯ ರುಂಡ ಬಿದ್ದಿರುವುದನ್ನು ಗಮನಿಸಿ ಸ್ಥಳೀಯರು ದೊಡ್ಡಬಳ್ಳಾಪುರ ನಗರ ಪೊಲೀಸರಿಗೆ ವಿಷಯ ತಿಳಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ತೀವ್ರಗೊಳಿಸಿದಾಗ ಕರೇನಹಳ್ಳಿ ನಿವಾಸಿ ಉಪೇಂದ್ರ ಮೂರ್ನಾಲ್ಕು ದಿನದಿಂದ ಕಾಣೆಯಾಗಿದ್ದನೆಂಬ ಮಾಹಿತಿ ಕಲೆ ಹಾಕಿ ತನಿಖೆ ಕೈಗೊಂಡಾಗ ಈತನನ್ನು ರೌಡಿ ಪವನ್ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ತಕ್ಷಣ ಆರೋಪಿ ಪವನ್‍ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಈ ಪ್ರಕರಣವನ್ನು ಬೇಧಿಸಿದ ಪೊಲೀಸ್ ತನಿಖಾ ತಂಡಕ್ಕೆ ಬಹುಮಾನ ಘೋಷಿಸಲಾಗಿದೆ.

Sri Raghav

Admin