ಶ್ರೀನಗರ,ಫೆ13- ತಾನು ಇಸ್ಲಾಮಿಕ್ ತತ್ವಗಳನ್ನು ಅನುಸರಿಸುತ್ತೇನೆ ಮತ್ತು ತಾನು ಉತ್ತಮ ಮುಸ್ಲಿಂ ಎಂದು ಸಾಬೀತುಪಡಿಸಲು ಹಿಜಾಬ್ ಧರಿಸುವ ಅಗತ್ಯವಿಲ್ಲ ಎಂದು ಕಾಶ್ಮೀರದಲ್ಲಿ 12ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ಅಗ್ರಸ್ಥಾನ ಗಳಿಸಿರುವ ಅರೂಸಾ ಪರ್ವೈಜ್ ಹೇಳಿದ್ದಾರೆ.
ಹಿಜಾಬ್ ಧರಿಸದಿದ್ದಕ್ಕಾಗಿ ಆನ್‍ಲೈನ್ ಟ್ರೋಲಿಂಗ್‍ಗೆ ಗುರಿಯಾಗಿ ಕೊಲೆ ಬೆದರಿಕೆಗಳನ್ನೂ ಎದುರಿಸುತ್ತಿರುವ ಆರೂಸಾ ಅವರು, ನಾನು ಅಲ್ಲಾನಲ್ಲಿ ನಂಬಿಕೆ ಹೊಂದಿದ್ದೇನೆ ಮತ್ತು ಇಸ್ಲಾಮಿಕ್ ತತ್ವಗಳನ್ನು ಅನುಸರಿಸುತ್ತೇನೆ. ನಾನು ಉತ್ತಮ ಮುಸ್ಲಿಂ ಎಂದು ಸಾಬೀತುಪಡಿಸಲು ನಾನು ಹಿಜಾಬ್ ಧರಿಸುವ ಅಗತ್ಯವಿಲ್ಲ ಹೇಳಿದ್ದಾರೆ.
ಆನ್‍ಲೈನ್ ಟ್ರೋಲಿಂಗ್‍ನಿಂದ ನಾನು ತುಂಬಾ ಅಸಮಾಧಾನಗೊಂಡಿದ್ದೇನೆ ಎಂದು ಅರೋಸಾ ಪರ್ವೈಜ್ ಹೇಳಿದ್ದಾರೆ. ನಾನು ಇದರಿಂದ ತಲೆಕೆಡಿಸಿಕೊಂಡಿಲ್ಲ . ಆದರೆ ಸಾಮಾಜಿಕ ಮಾಧ್ಯಮದಲ್ಲಿ ಈ ಕಾಮೆಂಟ್‍ಗಳ ನಂತರ ನನ್ನ ಪೋಷಕರು ತುಂಬಾ ಚಿಂತಿತರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಎಲ್ಲಾಹಿಬಾಗ್ ಪ್ರದೇಶದವರಾದ ಪರ್ವೈಜ್ ವಿಜ್ಞಾನ ವಿಭಾಗದಲ್ಲಿ 500ಕ್ಕೆ 499 ಅಂಕಗಳನ್ನು (ಶೇ 99.80) ಗಳಿಸಿ ಅತ್ಯುನ್ನತ ಸ್ಥಾನದಲ್ಲಿ ತೇರ್ಗಡೆಯಾದವರು. ಶ್ರೀನಗರದ ಡೆಪ್ಯುಟಿ ಕಮಿಷನರ್ ಮೊಹಮ್ಮದ್ ಐಜಾಜ್ ಅಸದ್ ಅವರು ತಮ್ಮ ಕಚೇರಿ ಕೊಠಡಿಯಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಅವರನ್ನು ಸನ್ಮಾನಿಸಿದ್ದರು.
