ನವದೆಹಲಿ, ಫೆ.11- ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಧಾರ್ಮಿಕತೆಯನ್ನು ಬಿಂಬಿಸುವ ಯಾವುದೇ ಉಡುಪುಗಳನ್ನು ಧರಿಸದಂತೆ ಕರ್ನಾಟಕ ಹೈಕೋರ್ಟ್ ನೀಡಿರುವ ಮಧ್ಯಂತರ ಮೌಕಿಕ ಆದೇಶಕ್ಕೆ ತಡೆಯಾಜ್ಞೆ ನೀಡಲು ಹಾಗೂ ಪ್ರಕರಣದ ತುರ್ತು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ನಿನ್ನೆ ಹೈಕೋರ್ಟ್‍ನಲ್ಲಿ ನೀಡಲಾಗಿದ್ದ ಆದೇಶವನ್ನು ಸುಪ್ರೀಂಕೋರ್ಟ್‍ನಲ್ಲಿ ಪ್ರಶ್ನಿಸಲಾಗಿತ್ತು. ಅರ್ಜಿದಾರರ ಮನವಿಯಂತೆ ಪ್ರಕರಣದ ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್ ನ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ಅವರನ್ನು ಒಳಗೊಂಡ ವಿಭಾಗೀಯ ಪೀಠ ನಿರಾಕರಿಸಿದೆ.
ರಾಜ್ಯದಲ್ಲಿ ಏನಾಗುತ್ತಿದೆ ಮತ್ತು ಹಿಜಾಬ್ ಪ್ರಕರಣದ ವಿಚಾರಣೆಯನ್ನು ನಾವು ಗಮನಿಸುತ್ತಿದ್ದೇವೆ. ಈ ಪ್ರಕರಣವನ್ನು ರಾಷ್ಟ್ರೀಯ ವಿವಾದವನ್ನಾಗಿ ಬೆಳೆಸುವುದು ಸೂಕ್ತವೇ ಎಂಬುದನ್ನು ನೀವು ಪರಿಶೀಲಿಸಿ. ನಾವು ಪ್ರತಿಯೊಬ್ಬರ ಸಾಂವಿಧಾನಿಕ ಹಕ್ಕುಗಳ ರಕ್ಷಣೆಗೆ ಬದ್ಧರಿದ್ದೇವೆ.
ಆದರೆ ಪ್ರಕರಣದಲ್ಲಿ ಜೇಷ್ಠತೆಯ ಆಳಕ್ಕೆ ಹೋಗುವುದು ಬೇಡ. ಒಂದು ವೇಳೆ ವಿದ್ಯಾರ್ಥಿಗಳ ಪರೀಕ್ಷೆ ಅಥವಾ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾದರೆ ಅದನ್ನು ಸುಪ್ರೀಂಕೋರ್ಟ್‍ನ ಗಮನಕ್ಕೆ ತನ್ನಿ, ಆ ಸಂದರ್ಭದಲ್ಲಿ ಮಧ್ಯ ಪ್ರವೇಶಿಸುವ ಬಗ್ಗೆ ಪರಿಶೀಲಿಸುತ್ತೇವೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.
ಅರ್ಜಿದಾರರ ಪರ ವಾದಿಸಿದ ವಕೀಲ ಆರಿಫ್ ಜಮೀಲ್, ಹೈಕೋರ್ಟ್‍ನ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಮನವಿ ಮಾಡಿದ್ದರು. ಶಿಕ್ಷಣ ಸಂಸ್ಥೆಗಳಲ್ಲಿ ಹಿಜಬ್ ಧರಿಸದಂತೆ ಹೈಕೋರ್ಟ್ ನೀಡಿರುವ ಆದೇಶ ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ. ಸೂಕ್ತ ಕಾನೂನು ಇಲ್ಲದೆ ಸಂವಿಧಾನಬದ್ಧವಾಗಿ ಆರ್ಟಿಕಲ್ 19 (ಎ) (ಬಿ) ಅಡಿ ನೀಡಿರುವ ಧಾರ್ಮಿಕ ಆಚರಣೆ ಮತ್ತು ಕಲಂ 25ರ ಅಡಿ ನೀಡಲಾಗಿರುವ ಖಾಸಗಿತನ ರಕ್ಷಣೆಯ ಹಕ್ಕನ್ನು ಉಲ್ಲಂಘಿಸಿದಂತಾಗಿದೆ ಎಂದು ವಾದಿಸಿದರು.
ಫೆಬ್ರವರಿ 15 ರಿಂದ ಪ್ರಾಕ್ಟಿಕಲ್ ಪರೀಕ್ಷೆಗಳು ಶುರುವಾಗಲಿವೆ. ಈ ಆದೇಶದಿಂದ ಮುಸ್ಲಿಂ ಮಹಿಳೆಯರ ಶಿಕ್ಷಣದ ಹಕ್ಕನ್ನು ಕಸಿದಂತಾಗುತ್ತದೆ. ಮುಸ್ಲಿಂ ಸಮುದಾಯದ ಧರ್ಮಾಚರಣೆಯ ಹಕ್ಕನ್ನು ಅಮಾನತು ಮಾಡಿದಂತಾಗಿದೆ ಎಂದು ಹೇಳಿದ್ದರು.ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಅವರು ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿ ಕರ್ನಾಟಕ ಹೈಕೋರ್ಟ್‍ನ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಮನವಿ ಮಾಡಿದ್ದರು.
ಇದಕ್ಕೆ ಪ್ರತಿಯಾಗಿ ಸರ್ಕಾರದ ಪರವಾಗಿ ವಾದಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಹೈಕೋರ್ಟ್ ಇನ್ನೂ ಪೂರ್ಣ ಪ್ರಮಾಣದ ತೀರ್ಪು ನೀಡಿಲ್ಲ, ಆಗಲೇ ಸುಪ್ರೀಂಕೋರ್ಟ್‍ನಲ್ಲಿ ಪ್ರಶ್ನಿಸಲು ಹೇಗೆ ಸಾಧ್ಯ. ಮೊದಲು ಹೈಕೋರ್ಟ್ ಅರ್ಜಿಯನ್ನು ಇತ್ಯರ್ಥಗೊಳಿಸಲು ಅವಕಾಶ ನೀಡಬೇಕು. ಇದನ್ನು ರಾಜಕೀಯ ಮತ್ತು ಧಾರ್ಮಿಕ ವಿವಾದವನ್ನಾಗಿ ಮಾಡಬಾರದು ಎಂದು ಮನವಿ ಮಾಡಿದರು.
ವಾದ ವಿವಾದ ಆಲಿಸಿದ ಬಳಿಕ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ಅವರು, ಹೈಕೋರ್ಟ್ ವಿಚಾರಣೆ ನಡೆಸಲು ಅವಕಾಶ ನೀಡೋಣ. ನಾವಿಲ್ಲಿ ಕುಳಿತಿರುವುದೇ ಎಲ್ಲರ ಮೂಲಭೂತ ಹಕ್ಕುಗಳ ರಕ್ಷಣೆಗಾಗಿ. ಸೂಕ್ತ ಸಮಯದಲ್ಲಿ ನಾವು ವಿಚಾರಣೆ ನಡೆಸುತ್ತೇವೆ ಎಂದಿದ್ದಾರೆ.
ಅರ್ಜಿದಾರರ ಪರವಾಗಿ ಹಿರಿಯ ವಕೀಲ ದೇವದತ್ತ ಕಾಮತ್ ಹಾಜರಾಗಿದ್ದರು.
# ಹಿನ್ನೆಲೆ:
ಕಳೆದ ಡಿಸೆಂಬರ್ ನಿಂದ ಕರಾವಳಿ ಜಿಲ್ಲೆ ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಶುರುವಾದ ಹಿಜಾಬ್ ಗಲಾಟೆ ಹಂತ ಹಂತವಾಗಿ ರಾಜ್ಯದ್ಯಂತ ವ್ಯಾಪಿಸಿತ್ತು. ದೇಶಾದ್ಯಂತ ಪ್ರತಿಭಟನೆಗಳು ನಡೆದಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆದಿದೆ. ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದಕ್ಕೆ ಪ್ರತಿಯಾಗಿ ಕೆಲ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿದ್ದರಿಂದ ಕಾಲೇಜು ಆವರಣದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿ ಕಲ್ಲು ತೂರಾಟ, ಲಾಠಿ ಪ್ರಹಾರದಂತಹ ಅಹಿತಕರ ಘಟನೆಗಳು ನಡೆದಿದ್ದವು.
ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಹಲವಾರು ವಿದ್ಯಾರ್ಥಿನಿಯರು ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಕೃಷ್ಣ ಶ್ರೀಪಾದ್ ದೀಕ್ಷಿತ್ ಅವರನ್ನೊಳಗೊಂಡ ಏಕಸದಸ್ಯ ಪೀಠ ಮಧ್ಯಂತರ ಆದೇಶ ನೀಡಲು ನಿರಾಕರಿಸಿ, ಪ್ರಕರಣವನ್ನು ವಿಸ್ತೃತ ಪೀಠದ ವಿಚಾರಣೆ ನಡೆಸುವುದು ಸೂಕ್ತ ಎಂದು ಹೇಳಿದ್ದರು.
ಬಳಿಕ ಹೈಕೋರ್ಟ್‍ನ ಮುಖ್ಯನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರು ತಮ್ಮ ನೇತೃತ್ವದಲ್ಲಿ ಜೆ.ಎಂ.ಖಾಜಿ ಮತ್ತು ಕೃಷ್ಣ ಶ್ರೀಪಾದ್ ದೀಕ್ಷಿತ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ರಚಿಸಿದರು. ಅಲ್ಲಿ ನಿನ್ನೆ ವಿಚಾರಣೆ ನಡೆದು ಮಧ್ಯಂತರ ಮೌಕಿಕ ಆದೇಶ ನೀಡಲಾಗಿದೆ.
ಶೈಕ್ಷಣಿಕ ಸಂಸ್ಥೆಗಳಲ್ಲಿ ಧಾರ್ಮಿಕತೆಯನ್ನು ಬಿಂಬಿಸುವ ಉಡುಪುಗಳನ್ನು ಧರಿಸಲು ಯಾರಿಗೂ ಅವಕಾಶ ಇಲ್ಲ ಎಂದು ಹೇಳಿದ್ದಲ್ಲದೆ, ರಜೆ ಘೋಷಣೆಯಾಗಿರುವ ಪ್ರೌಢಶಾಲೆಗಳು ಮತ್ತು ಕಾಲೇಜುಗಳನ್ನು ಪುನರ್ ಆರಂಭಿಸುವಂತೆ ಸೂಚಿಸಿತ್ತು. ಮುಂದಿನ ವಿಚಾರಣೆ ಸೋಮವಾರಕ್ಕೆ ಮುಂದೂಡಿಕೆ ಮಾಡಿದೆ.
