ಬೆಂಗಳೂರು, ಜ.31- ಲಾಡ್ಜ್ವೊಂದರಲ್ಲಿ ಬಿಎಂಟಿಸಿ ಚಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಹಲವಾರು ಅನುಮಾನ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿ ಕೆಂಗೇರಿ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಚನ್ನಪಟ್ಟಣ ಮೂಲದ ಪುಟ್ಟೇಗೌಡ(28) ಕೆಲಸಕ್ಕೆ ಹೋಗುವುದಾಗಿ ಮನೆಯಲ್ಲಿ ಹೇಳಿ ಹೊರ ಬಂದಿದ್ದು, ಮಲ್ನಾಡ್ ಲಾಡ್ಜ್ಗೆ ಏಕೆ ಬಂದಿದ್ದ, ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಪುಟ್ಟೇಗೌಡನ ಮೊಬೈಲ್ಗೆ ಬಂದಿರುವ ಕರೆಗಳ ಬಗ್ಗೆಯೂ ಪೊಲೀಸರು ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ. ಲಾಡ್ಜ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿದು ಕೆಂಗೇರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದಾಗ ಪುಟ್ಟೇಗೌಡನ ಹಣೆಯ ಮೇಲೆ ಗಾಯದ ಗುರುತು ಇರುವುದು ಕಂಡು ಬಂದಿದೆ.
ಪೊಲೀಸರು ಲಾಡ್ಜ್ನ ಸಿಸಿ ಟಿವಿ ಪರಿಶೀಲಿಸಿದಾಗ ಪುಟ್ಟೇಗೌಡ ಉಳಿದುಕೊಂಡಿದ್ದ ಕೊಠಡಿಯ ಬಾಗಿಲು ಲಾಕ್ ಮಾಡಿಕೊಂಡು ಯುವತಿ ಹೊರಗೆ ಹೋಗಿರುವುದು ಗೊತ್ತಾಗಿದೆ.
ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಇಲ್ಲಿಗೆ ಬಂದಿದ್ದ ಯುವತಿ ಯಾರು, ಪುಟ್ಟೇಗೌಡನಿಗೆ ಪರಿಚಯಸ್ಥರೇ, ಇವರಿಬ್ಬರ ನಡುವೆ ಜಗಳವೇನಾದರೂ ನಡಿಯಿತೆ ಎಂಬಿತ್ಯಾದಿ ಮಾಹಿತಿಗಳನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.
#Doubts, #Surround, #BMTC, #driver, #suicide,