ದೇವರ ಬಳಿ ಮೂರು ಬೇಡಿಕೆ ಇಟ್ಟು ದಸರಾ ಮಹೋತ್ಸವನ್ನು ಉದ್ಘಾಟಿಸಿದ ಡಾ. ಸಿ.ಎನ್. ಮಂಜುನಾಥ್

Spread the love

ಮೈಸೂರು, ಅ.17- ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವವನ್ನು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಅವರು ಇಂದು ಉದ್ಘಾಟಿಸುವ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು.  ಬೆಳಗ್ಗೆ 7.45ರ ಶುಭ ಮುಹೂರ್ತದಲ್ಲಿ ಚಾಮುಂಡಿ ಬೆಟ್ಟದ ಶ್ರೀ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ನಾನು ದೇವರ ಬಳಿ ಮೂರು ಬೇಡಿಕೆ ಇಟ್ಟಿದ್ದೇನೆ. ವಿಶ್ವ ಕೊರೊನಾ ಮುಕ್ತವಾಗಲಿ, ಎರಡನೆಯದು ಬೇಗ ಲಸಿಕೆ ಸಿಗಲಿ, ಮೂರನೆಯದಾಗಿ ರಾಜ್ಯವು ಜಲಸಂಕಷ್ಟದಿಂದ ಮುಕ್ತವಾಗಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸಿದ್ದೇನೆ. ವೈಯುಕ್ತಿಕವಾಗಿ ಹಾಗೂ ಕುಟುಂಬಕ್ಕೋಸ್ಕರ ಏನನ್ನೂ ಕೇಳಿಕೊಂಡಿಲ್ಲ. ಇದು ನನ್ನ ಪತ್ನಿ ಹಾಗೂ ಮಕ್ಕಳ ಉದ್ದೇಶವೂ ಆಗಿದೆ ಎಂದು ಅವರು ತಿಳಿಸಿದರು.

ದಸರಾ ಮಹೋತ್ಸವ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಉದ್ಘಾಟನೆ ಮಾಡಲು ವೈದ್ಯರಿಗೆ ಅವಕಾಶ ಮಾಡಿಕೊಟ್ಟ ಸರ್ಕಾರ ಹಾಗೂ ಮುಖ್ಯಮಂತ್ರಿಗಳಿಗೆ ಧನ್ಯವಾದ ಎಂದು ಹೇಳಿದರು. ದಸರಾ ಮಹೋತ್ಸವವು ನಾಡಿನ ಭಾಷೆ, ಸಂಸ್ಕøತಿ, ಸಂಪ್ರದಾಯ ಹಾಗೂ ದೇಶೀಯತೆಯನ್ನು ಸಾರುತ್ತದೆ ಎಂದು ತಿಳಿಸಿದರು.

ಪರಿಸರವನ್ನು ನಾವು ಬೆಳೆಸಬೇಕು. ಅದನ್ನು ಹಾಳು ಮಾಡಿದರೆ ಹೇಗೆ ಸಂಕಷ್ಟ ಎದುರಾಗುತ್ತದೆ ಎಂಬುದನ್ನು ಇಂದು ಪ್ರಕೃತಿ ತೋರಿಸುತ್ತಿದೆ. ಇದಕ್ಕಾಗಿ ನಾವು ಶುಚಿತ್ವವನ್ನು ಕಾಪಾಡಿಕೊಳ್ಳಬೇಕು, ಸ್ಯಾನಿಟೈಸೇಷನ್ ಮಾಡಿಕೊಳ್ಳಬೇಕು, ವ್ಯಕ್ತಿಗತ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್ ಹಾಕಿಕೊಳ್ಳಬೇಕು ಎಂದು ನಾನು ಮನವಿ ಮಾಡುತ್ತೇನೆ ಎಂದು ಡಾ. ಮಂಜುನಾಥ್ ಹೇಳಿದರು.

ಕೊರೊನಾ ಸಂಕಷ್ಟಗಳ ವಿರುದ್ಧ ರಾಜ್ಯ ಸರ್ಕಾರ ಸಹ ಹೋರಾಡುತ್ತಿದೆ. ಈಗಾಗಲೇ 150ಕ್ಕೂ ಹೆಚ್ಚು ಲ್ಯಾಬ್ ಟೆಸ್ಟ್ ಕೇಂದ್ರಗಳಿದ್ದು, ದಿನಕ್ಕೆ 1 ಲಕ್ಷ ಪರೀಕ್ಷೆಗಳಾಗುತ್ತಿವೆ ಎಂದು ತಿಳಿಸಿದರು. ಸಮಾಜವನ್ನು ಜಾಲಾಡುತ್ತಿರುವ ಸಾಮಾಜಿಕ ಜಾಲತಾಣ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದೆ. ಸಮಾಜವನ್ನು ಜಾಲಾಡುತ್ತಿದೆ. ಜನರ ದಿಕ್ಕು ತಪ್ಪಿಸುತ್ತಿದೆ. ಕೊರೊನಾ ಸೇರಿದಂತೆ ಹಲವು ವಿಷಯಗಳ ಬಗ್ಗೆ ತಪ್ಪು ಮಾಹಿತಿಗಳು ರವಾನೆಯಾಗುತ್ತಿರುವುದು ನಿಲ್ಲಬೇಕಿದೆ ಎಂದು ಡಾ. ಮಂಜುನಾಥ್ ಹೇಳಿದರು.

ನಾವು ಸೋಂಕಿತರಿಂದ ದೈಹಿಕವಾಗಿ ಮಾತ್ರ ದೂರವಿರಬೇಕು, ಮಾನಸಿಕವಾಗಿ ಹತ್ತಿರವಾಗಿದ್ದು, ಆತ್ಮವಿಶ್ವಾಸ ತುಂಬಬೇಕು ಎಂದು ತಿಳಿಸಿದರು. ಇಂದು ವೈದ್ಯರಿಗೆ ಅಭದ್ರತೆ ಕಾಡುತ್ತಿದೆ. ಅವರು ವೃತ್ತಿಯ ಒತ್ತಡ, ಮಾನಸಿಕ ಒತ್ತಡ ಹಾಗೂ ದೈಹಿಕ ಒತ್ತಡಗಳನ್ನು ಎದುರಿಸುತ್ತಿದ್ದಾರೆ. ಹಲ್ಲೆ ಭೀತಿಯಿಂದ ಗ್ರಾಮೀಣ ಭಾಗಗಳಿಗೆ ವೈದ್ಯರು ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಅವರಿಗೆ ಸೌಹಾರ್ದಯುತ ವಾತಾವರಣ ಹಾಗೂ ಭದ್ರತೆಯನ್ನು ಸರ್ಕಾರ ಕಲ್ಪಿಸಬೇಕಿದೆ ಎಂದು ಡಾ. ಮಂಜುನಾಥ್ ತಿಳಿಸಿದರು.

ಯಾರು ಎಷ್ಟೇ ವಿದ್ಯೆ ಪಡೆದಿದ್ದರೂ ನಮ್ಮ ಸಂಸ್ಕಾರ ಬಹಳ ಮುಖ್ಯವಾಗುತ್ತದೆ. ನಾವು ಸಹ ಜನರ ಜೀವ ಮೊದಲು ಆಮೇಲೆ ಶುಲ್ಕ ಎಂಬ ನಿಟ್ಟಿನಲ್ಲಿ ಕಾರ್ಯನಿರ್ವಹಣೆ ಮಾಡಲಾಗುತ್ತಿದೆ ಎಂದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಕೃಷಿ ಸಚಿವ ಬಿ.ಸಿ.ಪಾಟೀಲ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಸಂಸದ ಪ್ರತಾಪ್ ಸಿಂಹ, ಶಾಸಕರಾದ ರಾಮದಾಸ್, ನಾಗೇಂದ್ರ, ಹರ್ಷವರ್ಧನ್, ಮಹೇಶ್, ನಿರಂಜನ್, ವಿಧಾನ ಪರಿಷತ್ ಸದಸ್ಯ ವಿಶ್ವನಾಥ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Facebook Comments