ರಾಜ್ಯಸಭೆಗೆ ಡಾ.ಕೆ.ನಾರಾಯಣ್ ನಾಮಪತ್ರ ಸಲ್ಲಿಕೆ

Spread the love

ಬೆಂಗಳೂರು,ನ.18-ಅಶೋಕ್ ಗಸ್ತಿ ನಿಧನದಿಂದ ತೆರವಾಗಿರುವ ರಾಜ್ಯಸಭೆಯ ಒಂದು ಸ್ಥಾನಕ್ಕೆ ಬಿಜೆಪಿಯಿಂದ ಡಾ.ಕೆ.ನಾರಾಯಣ್ ಅವರು ಇಂದು ನಾಮಪತ್ರ ಸಲ್ಲಿಸಿದರು.  ಚುನಾವಣಾ ಅಧಿಕಾರಿಯೂ ಆಗಿರುವ ವಿಧಾನಸಭೆಯ ಕಾರ್ಯದರ್ಶಿ ವಿಶಾಲಾಕ್ಷಿ ಅವರಿಗೆ ನಾರಾಯಣ್ ಅವರು ನಾಮಪತ್ರ ಸಲ್ಲಿಕೆ ಮಾಡಿದರು.
ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಸೇರಿದಂತೆ ಸಚಿವರು, ಶಾಸಕರು, ಪಕ್ಷದ ಮುಖಂಡರು ನಾಮಪತ್ರ ಸಲ್ಲಿಕೆ ವೇಳೆ ಹಾಜರಿದ್ದರು.

ಡಿಸೆಂಬರ್ 1ರಂದು ಚುನಾವಣೆ ನಡೆಯಲಿದ್ದು, ಒಂದು ವೇಳೆ ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಹಾಗೂ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸದಿದ್ದರೆ ನಾರಾಯಣ್ ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.  ನಾಳೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಸೋಮವಾರ ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಯಾರೊಬ್ಬರೂ ಸ್ಪರ್ಧೆ ಮಾಡದಿದ್ದರೆ ಅವಿರೋಧ ಆಯ್ಕೆಯೇ ಅಂತಿಮವಾಗಲಿದೆ.

ವಿಧಾನಸಭೆಯಲ್ಲಿ ಹೊಂದಿರುವ ಬಲಾಬಲದ ಪ್ರಕಾರ ಬಿಜೆಪಿ ಸ್ಪಷ್ಟ ಬಹುಮತ ಹೊಂದಿದ್ದು, ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಅಷ್ಟು ಸಂಖ್ಯೆಯ ಸದಸ್ಯರನ್ನು ಹೊಂದಿಲ್ಲ.  ರಾಜ್ಯಸಭೆಗೆ ಆಯ್ಕೆಯಾಗಬೇಕಾದರೆ 112 ಮತಗಳನ್ನು ಪಡೆಯಬೇಕು. ಬಿಜೆಪಿಯೇ 119 ಸದಸ್ಯರ ಜತೆ ಸಚಿವ ಎಚ್.ನಾಗೇಶ್ ಹಾಗೂ ಬಿಎಸ್‍ಪಿಯ ಎಂ.ಮಹೇಶ್ ಅವರ ಬೆಂಬಲವೂ ಇದೆ.

ಒಂದು ವೇಳೆ ಚುನಾವಣೆ ನಡೆದರೂ ನಾರಾಯಣ್ ಗೆಲ್ಲುವುದು ಖಚಿತ. ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆ ಕಂಡುಬರುತ್ತಿಲ್ಲ.  ಇನ್ನು ಪಕ್ಷೇತರ ಅಭ್ಯರ್ಥಿ ನಾಮಪತ್ರ ಸಲ್ಲಿಸಿದರೂ ಅವರಿಗೆ ಸೂಚಕರಾಗಿ ಕನಿಷ್ಠಪಕ್ಷ 10 ಶಾಸಕರು ಸಹಿ ಹಾಕಬೇಕು. ಶಾಸಕರ ಸಹಿ ಇಲ್ಲದಿದ್ದರೆ ಅಂತಹ ನಾಮಪತ್ರ ತಿರಸ್ಕøತವಾಗಲಿದೆ. ಹೀಗಾಗಿ ನಾರಾಯಣ್ ಅವರು ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.
ಬಿಜೆಪಿಯಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ಅಶೋಕ್ ಗಸ್ತಿ ಕೆಲ ದಿನಗಳ ಹಿಂದೆ ಕೋವಿಡ್ ಸೋಂಕು ಕಾಣಿಸಿಕೊಂಡು ನಿಧನರಾಗಿದ್ದರು.

 

Facebook Comments