ಅಂಧಕಾರದಲ್ಲಿರುವ ಮೋದಿ ಕಣ್ಣಾಸ್ಪತ್ರೆ ಮೇಲೆ ಭೂಗಳ್ಳರ ಕಣ್ಣು

Social Share

ಬೆಂಗಳೂರು, ಡಿ.8- ಲಕ್ಷಾಂತರ ಅಂಧರ ಬಾಳಿಗೆ ಬೆಳಕಾಗಿದ್ದ ಡಾ.ಎಂ.ಸಿ.ಮೋದಿ ಕಣ್ಣಾಸ್ಪತ್ರೆಗೆ ಕತ್ತಲೆ ಕವಿದಿದೆ.
ನೂರಾರು ವರ್ಷಗಳ ಇತಿಹಾಸ ಹೊಂದಿರುವ ರಾಜಾಜಿನಗರದ ಮೋದಿ ಆಸ್ಪತ್ರೆಗೆ ಈಗ ಬೀಗ ಜಡಿಯುವ ಸನ್ನಿವೇಶ ನಿರ್ಮಾಣವಾಗಿದೆ.

ನೇತ್ರ ತಜ್ಞ ಡಾ.ಎಂ.ಸಿ.ಮೋದಿ ಅವರು 1947ರಲ್ಲಿ ಸಣ್ಣ ಕಣ್ಣಾಸ್ಪತ್ರೆ ತೆರೆದು ನಂತರ ರಾಜ್ಯದಾದ್ಯಂತ ಇರುವ ಸಣ್ಣ ಸಣ್ಣ ಹಳ್ಳಿಗಳಿಗೂ ಸಂಚರಿಸಿ ಶಸ್ತ್ರಚಿಕಿತ್ಸಾ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಲಕ್ಷಾಂತರ ಅಂಧರ ಬಾಳಿಗೆ ಬೆಳಕು ನೀಡುವ ಮೂಲಕ ನೇತ್ರದಾನಿ ಎಂಬ ಬಿರುದು ಪಡೆದುಕೊಂಡಿದ್ದರು. ಇವರ ಈ ಸಾಧನೆಗೆ ಪದ್ಮಭೂಷಣ ಹಾಗೂ ಪದ್ಮಶ್ರಿ ಪ್ರಶಸ್ತಿಗಳು ಒಲಿದು ಬಂದಿದ್ದವು.

ನೇತ್ರದಾನಿ ಮೋದಿ ಬದುಕಿದ್ದಷ್ಟು ದಿನ ರಾಜ್ಯ ಮತ್ತು ಹೊರ ರಾಜ್ಯಗಳಿಂದ ಪ್ರತಿನಿತ್ಯ ಸಾವಿರಾರು ಮಂದಿ ಮೋದಿ ಕಣ್ಣಾಸ್ಪತ್ರೆಗೆ ಭೇಟಿ ನೀಡುತ್ತಿದ್ದರು. ಆಸ್ಪತ್ರೆಗೆ ಬರುವ ಎಲ್ಲ ರೋಗಿಗಳನ್ನು ಮೋದಿ ಅವರು ಸಮಾಧಾನದಿಂದ ಪರಿಶೀಲಿಸಿ ಅಗತ್ಯ ಚಿಕಿತ್ಸೆ ನೀಡಿ ಕಳುಹಿಸುತ್ತಿದ್ದರು. ಅಂತಹ ಮೋದಿ ನಿಧನದ ನಂತರ ಮೋದಿ ಕಣ್ಣಾಸ್ಪತ್ರೆ ಮೇಲೆ ಭೂಗಳ್ಳರ ಕಣ್ಣು ಬಿದ್ದಿದೆ.

ಗುಜರಾತ್ ಚುನಾವಣೆ ಮೇಲೆ ಪರಿಣಾಮ ಬೀರದ ಮೊರ್ಬಿ ಸೇತುವೆ ದುರಂತ

ನೇತ್ರದಾನಿ ಮೋದಿ ಅವರ ಸಹೋದರ ಎಂದು ಹೇಳಿಕೊಂಡಿರುವ ಸುಭಾಷ್ ಮೋದಿ ಎಂಬಾತ ಮೋದಿ ಕಣ್ಣಾಸ್ಪತ್ರೆ ಆಸ್ತಿ ಮೇಲೆ ಕಣ್ಣಾಕ್ಕಿದ್ದು, ಹಲವಾರು ಬಾರಿ ಮೋದಿ ಕಣ್ಣಾಸ್ಪತ್ರೆಯನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳಲು ಇನ್ನಿಲ್ಲದ ಹರಸಾಹಸ ನಡೆಸುತ್ತಿದ್ದಾರೆ.

ಹಲವಾರು ಬಾರಿ ಆತನ ಪ್ರಯತ್ನಗಳು ವಿಫಲವಾದರೂ ತನ್ನ ಚಾಳಿ ಬಿಡದ ಸುಭಾಷ್ ಮೋದಿ ಕೆಲ ದಿನಗಳ ಹಿಂದೆ ಏಕಾಏಕಿ ಮಗ ಮಲ್ಲಿಕಾರ್ಜುನ್ ಹಾಗೂ ಪುತ್ರಿ ಪ್ರಿಯದರ್ಶಿನಿ ಜೊತೆಗೆ ಆಸ್ಪತ್ರೆ ನುಗ್ಗಿ ಸಿಸಿ ಕ್ಯಾಮರಾ ಬಂದ್ ಮಾಡಿ ಬೀಗ ಒಡೆದು ಆಸ್ಪತ್ರೆಯಲ್ಲಿದ್ದ ದಾಖಲೆ ಪತ್ರಗಳು ಹಾಗೂ ಲಕ್ಷಾಂತರ ರೂ.ಹಣ ಲಪಟಾಯಿಸಿ ಆಸ್ಪತ್ರೆ ಬಾಗಿಲಿಗೆ ಬೇರೆ ಬೀಗ ಜಡಿದು ಪರಾರಿಯಾಗಿದ್ದರು.

ಬೆಳಿಗ್ಗೆ ಬಂದ ರೋಗಿಗಳು ಹಾಗೂ ಸಿಬ್ಬಂದಿಗಳಿಗೆ ಶಾಕ್ ಕಾದಿತ್ತು. ಎಷ್ಟೋತ್ತಾದರೂ ಆಸ್ಪತ್ರೆ ಬಾಗಿಲು ತೆರೆಯದ ಕಾರಣ ರೋಗಿಗಳು ಬಂದ ದಾರಿಗೆ ಸುಂಕವಿಲ್ಲದಂತೆ ಮನೆ ಕಡೆ ಸಾಗಿದರೆ ಆಸ್ಪತ್ರೆ ಸಿಬ್ಬಂದಿಗಳು ಮುಂದೇನು ಮಾಡೋದು ಎನ್ನುವುದನ್ನು ತಿಳಿಯದೆ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಹ ಸನ್ನಿವೇಶ ನಿರ್ಮಾಣವಾಗಿತ್ತು.

ಆದರೂ ಕೆಲವರಂತೂ ನಾವು ಇಲ್ಲೇ ನಮ್ಮ ಕಣ್ಣು ತೋರಿಸುವುದು ಬೇರೆ ಆಸ್ಪತ್ರೆಗೆ ಹೋಗೋದಿಲ್ಲ ಎಂದು ಪಟ್ಟು ಹಿಡಿದಾಗ ಅಲ್ಲಿನ ವೈದ್ಯರು ಅನಿವಾರ್ಯವಾಗಿ ಆಸ್ಪತ್ರೆ ಮುಂಭಾಗದಲ್ಲೇ ಕೆಲವರಿಗೆ ಚಿಕಿತ್ಸೆ ನೀಡಿ ಕಳುಹಿಸಿದ್ದಾರೆ.

ನಾವು ಬಡವರು ಸ್ವಾಮಿ, ನಾವು ಹಲವಾರು ವರ್ಷಗಳಿಂದ ಇಲ್ಲೇ ಚಿಕಿತ್ಸೆ ಪಡೆಯೋದು, ಮೊನ್ನೆ ಕಣ್ಣು ಆಪರೇಷನ್ ಆಯ್ತು ಇಂದು ಕನ್ನಡಕ ಕೊಡ್ತಿನಿ ಅಂತಾ ಹೇಳಿದ್ರೂ ಈಗ ಬಂದರೆ ಆಸ್ಪತ್ರೆಗೆ ಬೀಗ ಹಾಕಲಾಗಿದೆ. ಬೇರೆ ಕಡೆ ಕನ್ನಡಕಕ್ಕೆ ಸಾವಿರಾರು ರೂ. ತೆರಬೇಕು ಏನು ಮಾಡೋದು ಸ್ವಾಮಿ ಎಂದು ಕನ್ನಡಕ ಪಡೆಯಲು ಬಂದ ಅಜ್ಜಿಯೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ನಾನೇ ಆಸ್ಪತ್ರೆಯ ಮಾಲೀಕ ಎಂದು ಹೇಳಿಕೊಂಡು ಮೋದಿ ಕಣ್ಣಾಸ್ಪತ್ರೆ ಮೇಲೆ ಮಾಲಿಕತ್ವ ಸಾಧಿಸಲು ಮುಂದಾಗಿರುವ ಸುಭಾಷ್ ಮೋದಿ ಎಂಬಾತ ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ನುಗ್ಗಿ ಸಿಸಿ ಕ್ಯಾಮರಾ ಬಂದ್ ಮಾಡಿ ತಮ್ಮ ಚೇಲಾಗಳೊಂದಿಗೆ ದಾಖಲೆ ಮತ್ತು ಲಕ್ಷಾಂತರ ರೂ.ಗಳೊಂದಿಗೆ ಪರಾರಿಯಾಗಿರುವ ದೃಶ್ಯ ಆಸ್ಪತ್ರೆಯ ಹೊರಭಾಗದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ರಾಷ್ಟ್ರೀಯ ಪಕ್ಷವಾದ ಅಮ್ ಆದ್ಮಿ ಪಾರ್ಟಿ

ಈ ಕುರಿತಂತೆ ಮಹಾಲಕ್ಷ್ಮೀ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಬಾಗಿಲು ಹಾಕಿರುವ ಆಸ್ಪತ್ರೆ ಬೀಗ ತೆರೆಸುವಂತೆ ಆಸ್ಪತ್ರೆ ಸಿಬ್ಬಂದಿಗಳು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಮೋದಿ ಸಾಹೇಬ್ರು ಇದ್ದಾಗ ನಾವೆಲ್ಲಾ ನೆಮ್ಮದಿಯಾಗಿದ್ದೆವು. ಅವರ ನಿಧನದ ನಂತರ ಅವರ ಸಹೋದರ ಸುಭಾಷ್ ಎಂಬಾತಎರಡೂವರೆ ಎಕರೆ ವಿಸ್ತಿರ್ಣದಲ್ಲಿರುವ ನೂರಾರು ಕೋಟಿ ಬೆಲೆಬಾಳುವ ಆಸ್ತಿ ಲಪಟಾಯಿಸುವ ಉದ್ದೇಶದಿಂದ ಇಂತಹ ಸಂಚು ರೂಪಿಸಿದ್ದಾನೆ. ಹೀಗಾಗಿ ಆಸ್ಪತ್ರೆ ಬಾಗಿಲು ಮುಚ್ಚುವ ಹಂತಕ್ಕೆ ಬಂದು ನಿಂತಿದೆ ಎಂದು ಮೋದಿ ಆಸ್ಪತ್ರೆಯ ವೈದ್ಯರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಕಳೆದ 8 ವರ್ಷಗಳಿಂದಲೂ ಭೂಗಳ್ಳರ ದೃಷ್ಟಿ ಮೋದಿ ಆಸ್ಪತ್ರೆ ಮೇಲೆ ಬಿದ್ದಿದೆ. ಈ ಹಿಂದೆ ಹಲವಾರು ಬಾರಿಯೂ ಆಸ್ತಿ ಕಬಳಿಸುವ ಹುನ್ನಾರ ನಡೆಸಲಾಗಿತ್ತು. ಇದೀಗ ಪ್ರಕರಣ ನ್ಯಾಯಲಯದ ಅಂಗಳದಲ್ಲಿದ್ದರೂ ಮೋದಿ ಸಹೋದರ ಅಂತ ಹೇಳಿಕೊಂಡು ಏಕಾಏಕಿ ಅಸ್ಪತ್ರೆಗೆ ಬೀಗ ಹಾಕಿರೋದು ಎಷ್ಟು ಸರಿ ಅಂತ ಅಲ್ಲಿನ ಸಿಬ್ಬಂದಿಗಳು ಪ್ರಶ್ನಿಸಿದ್ದಾರೆ.

ಪ್ರತಿನಿತ್ಯ ಆಸ್ಪತ್ರೆಗೆ ನೂರಾರು ಸಂಖ್ಯೆಯಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಬರ್ತಿದ್ದಾರೆ, ಇನ್ನೂ ಕೆಲವರಿಗೆ ಅಪರೇಷನ್ ಮಾಡಿ ಟೆಸ್ಟ್ ಗೆ ಬರೋದಕ್ಕೆ ಹೇಳಿದ್ವಿ, ಈಗ ಅವರು ಕೂಡ ಬರ್ತಿದ್ದಾರೆ, ಇತ್ತ ಚಿಕಿತ್ಸೆ ಕೋಡೋದಕ್ಕೆ ಆಸ್ಪತ್ರೆ ಬೀಗ ಹಾಕಲಾಗಿದೆ.

ಇನ್ಮುಂದೆ ಗ್ರಾಮ ಲೆಕ್ಕಿಗರ ಹುದ್ದೆ ಹೆಸರು ಗ್ರಾಮ ಆಡಳಿತಾಧಿಕಾರಿ

ಹೀಗಾಗಿ ರೋಗಿ ಕಡೆಯವರಿಂದ ನಮಗೇನಾದರೂ ತೊಂದರೆಯಾಗುವ ಮುನ್ನ ಆಸ್ಪತ್ರೆ ಬಾಗಿಲು ತೆರೆಸಿ ಎಂದು ಆಸ್ಪತ್ರೆ ಸಿಬ್ಬಂದಿಗಳು ಅಳಲು ತೋಡಿಕೊಂಡಿದ್ದಾರೆ. ಒಟ್ಟಾರೆ, ಒಂದು ಕಾಲದಲ್ಲಿ ಅಂಧರ ಬಾಳಿಗೆ ಬೆಳಕಾಗಿದ್ದ ಮೋದಿ ಕಣ್ಣಾಸ್ಪತ್ರೆ ಕಣ್ಣಿಗೆ ಕತ್ತಲೆ ಕವಿದಿರುವುದು ಮಾತ್ರ ದುರಂತವೇ ಸರಿ.

DrMC Modi, Eye Hospital, Rajajinagar, management, dispute,

Articles You Might Like

Share This Article