ಶಿವಕುಮಾರ ಶ್ರೀಗಳ ಪುಣ್ಯಸ್ಮರಣೆಗೆ ಹರಿದು ಬಂದ ಭಕ್ತ ಸಾಗರ

Social Share

ತುಮಕೂರು, ಜ.21- ಲೋಕಕಲ್ಯಾಣಕ್ಕಾಗಿ ದಣಿವರಿಯದೆ ತಮ್ಮ ಬದುಕನ್ನೇ ಮುಡುಪಾಗಿಟ್ಟು ಸಿದ್ಧಗಂಗೆಯನ್ನು ಅಕ್ಷರಶಃ ಶಿಕ್ಷಣ ಕಾಶಿಯನ್ನಾಗಿಸಿ ವಿಶ್ವವಿಖ್ಯಾತಗೊಳಿಸಿದ ತ್ರಿವಿಧ ದಾಸೋಹಿ, ಕಾಯಕ ಯೋಗಿ, ನಡೆದಾಡುವ ದೇವರು ಎಂದೇ ನಾಡಿನ ಉದ್ದಗಲಕ್ಕೂ ಪ್ರಸಿದ್ಧರಾಗಿದ್ದ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ 4ನೆ ಪುಣ್ಯ ಸ್ಮರಣೆಯನ್ನು ಸಿದ್ಧಗಂಗೆಯಲ್ಲಿಂದು ವಿವಿಧ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಆಚರಿಸಲಾಯಿತು.

ಗದ್ದುಗೆಯು ವಿವಿಧ ಬಗೆಯ ಹೂವು-ಹಣ್ಣು ಹಾಗೂ ಕಬ್ಬಿನಿಂದ ಅಲಂಕೃತಗೊಂಡು ಕಂಗೊಳಿಸುತ್ತಿತ್ತು. ಮುಂಜಾನೆಯೇ ಇಷ್ಟಲಿಂಗ ಪೂಜೆ ನೆರವೇರಿಸಿದ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರ ನೇತೃತ್ವದಲ್ಲಿ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆಯ ಪೂಜಾ ವಿಧಾನಗಳು, ಮಹಾರುದ್ರಾಭಿಷೇಕ, ರಾಜೋಪಚಾರ, ಬಿಲ್ವಾರ್ಚನೆಯೊಂದಿಗೆ ನೆರವೇರಿದವು.

ಹಲವು ಮಠಾೀಧಿಶರು, ಹರಗುರುಚರಮೂರ್ತಿಗಳು ನಸುಕಿನಲ್ಲೇ ಆರಂಭವಾದ ಶ್ರೀಗಳ ಗದ್ದುಗೆ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು. ಮೆರವಣಿಗೆ: ಶ್ರೀಮಠದ ಆವರಣದಲ್ಲಿ ವಿವಿಧ ಜಾನಪದ ಕಲಾ ತಂಡಗಳ ಆಕರ್ಷಕ ಪ್ರದರ್ಶನದೊಂದಿಗೆ ರುದ್ರಾಕ್ಷಿ ಮಂಟಪದಲ್ಲಿ ಲಿಂಗೈಕ್ಯ ಶ್ರೀಗಳ ಭಾವಚಿತ್ರ ಮೆರವಣಿಗೆ ವೈಭವಯುತವಾಗಿ ನಡೆಯಿತು.

ರುದ್ರಾಕ್ಷಿ ಮಂಟಪದಲ್ಲಿ ಶ್ರೀಗಳ ಭಾವಚಿತ್ರ ಮೆರವಣಿಗೆಯು ಶ್ರೀಗಳ ಗದ್ದುಗೆ ಮಂದಿರದಿಂದ ಆರಂಭವಾಗಿ ವಸ್ತುಪ್ರದರ್ಶನದ ಆವರಣದವರೆಗೆ ಸಾಗಿತು. ಮತ್ತೆ ವಸ್ತು ಪ್ರದರ್ಶನದ ಆವರಣದಿಂದ ಗದ್ದುಗೆ ಮಂದಿರದವರೆಗೆ ಮೆರವಣಿಗೆಯು ಸಾಗಿ ಅಂತ್ಯಗೊಂಡಿತು. ಈ ಮೆರವಣಿಗೆಯುದ್ದಕ್ಕೂ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಸೇರಿದಂತೆ ಹರಗುರುಚರಮೂರ್ತಿಗಳು, ಭಕ್ತಾದಿಗಳು, ಶಾಲಾ ಮಕ್ಕಳು ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.

ಕುಸ್ತಿ ಫೆಡರೇಷನ್‍ಗೆ ಉಸ್ತುವಾರಿ ಸಮಿತಿ ರಚನೆ : 3 ದಿನಗಳ ಧರಣಿ ಅಂತ್ಯ

ಗದ್ದುಗೆ ದರ್ಶನ ಪಡೆದ ಸಿಎಂ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ವಿ.ಸೋಮಣ್ಣ, ಆರಗ ಜ್ಞಾನೇಂದ್ರ, ಜೆ.ಸಿ.ಮಾಧುಸ್ವಾಮಿ, ಎಸ್.ಟಿ.ಸೋಮಶೇಖರ್, ಶಾಸಕ ಜ್ಯೋತಿ ಗಣೇಶ್, ಮಾಜಿ ಶಾಸಕ ಸೊಗಡು ಶಿವಣ್ಣ, ಸೇರಿದಂತೆ ಅನೇಕ ಗಣ್ಯರು ಶ್ರೀಗಳ ಗದ್ದುಗೆ ದರ್ಶನ ಪಡೆದರು.

ಶ್ರೀಗಳ ಗದ್ದುಗೆ ದರ್ಶನ ಪಡೆದ ನಂತರ ಸಿಎಂ ಬೊಮ್ಮಾಯಿ ಸೇರಿದಂತೆ ಗಣ್ಯರನ್ನು ಕುಂಭಕಳಶ ಮತ್ತು ಮಂಗಳವಾದ್ಯದೊಂದಿಗೆ ಗೋಸಲ ಸಿದ್ದೇಶ್ವರ ವೇದಿಕೆಗೆ ಕರೆದೊಯ್ಯಲಾಯಿತು.

ದಾಸೋಹ ದಿನ ಆಚರಣೆ: ರಾಜ್ಯ ಸರ್ಕಾರ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆ ದಿನವನ್ನು ದಾಸೋಹ ದಿನವನ್ನಾಗಿ ಕಳೆದ ವರ್ಷ ಘೋಷಿಸಿತ್ತು. ಅದರಂತೆ ಪುಣ್ಯಾರಾಧನೆಯನ್ನು ಅಕ್ಷರಶಃ ಮಹಾದಾಸೋಹ ದಿನವನ್ನಾಗಿ ಆಚರಿಸುತ್ತಿದ್ದು, ಶ್ರೀಮಠದ 5 ಕಡೆಗಳಲ್ಲಿ ಲಕ್ಷಾಂತರ ಭಕ್ತಾದಿಗಳಿಗೆ ಬಗೆಬಗೆಯ ಖಾದ್ಯಗಳೊಂದಿಗೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.

ಮಾಸ್ಕೋದಿಂದ ಗೋವಾಕ್ಕೆ ಹೊರಟಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ

ಶ್ರೀಮಠದ ಕೈಗಾರಿಕಾ ವಸ್ತುಪ್ರದರ್ಶನದ ಆವರಣ, ಸಾದರ ಕೊಪ್ಪಲು, ಕೆಂಪಹೊನ್ನಯ್ಯ, ಅತಿಥಿಗೃಹ, ಹೊಸ ಪ್ರಸಾದ ನಿಲಯ, ಹಳೆ ಪ್ರಸಾದ ನಿಲಯ ಸೇರಿದಂತೆ ಐದು ಕಡೆ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ.

ಕೊರೊನಾದಿಂದ ಕಳೆದ ಎರಡು ವರ್ಷಗಳಿಂದ ಶ್ರೀಗಳ ಪುಣ್ಯಸ್ಮರಣೆಯನ್ನು ಸರಳವಾಗಿ ಆಚರಿಸಲಾಗಿತ್ತು. ಈ ಬಾರಿ ಅದ್ಧೂರಿಯಾಗಿ ಪುಣ್ಯಸ್ಮರಣೆ ಆಚರಿಸಲಾಗಿದ್ದು, ರಾಜ್ಯದ ವಿವಿಧ ಮೂಲೆಗಳಿಂದ ಭಕ್ತ ಸಮೂಹವೇ ಹರಿದುಬಂದು ಶ್ರೀಗಳ ಗದ್ದುಗೆ ದರ್ಶನ ಪಡೆದು ಪುನೀತರಾದರು.

Articles You Might Like

Share This Article