ಮದ್ಯ ಸಿಗದೆ ಸ್ಯಾನಿಟೈಸರ್ ಕುಡಿದು ಇಬ್ಬರು ಸಾವು..!

ಭೂಪಾಲ್,ಮಾ.31- ಮದ್ಯ ಸಿಗದೆ ಕಂಗಾಲಾಗಿದ್ದ ಮೂವರು ಯುವಕರು ಸಾನಿಟೈಸರ್ ಕುಡಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಒಬ್ಬನ ಸ್ಥಿತಿ ಗಂಭೀರವಾಗಿರುವ ಘಟನೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ನಡೆದಿದೆ. ಭಿಂಡ್ ಜಿಲ್ಲೆಯ ಚತುರ್ವೇದಿನಗರ ರಿಂಕುಲೋದಿ, ಅಮಿತ್ ರಜಪುತ್ ಸಾವನ್ನಪ್ಪಿದ್ದು, ಸಂಜು ಎಂಬಾತನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಹೋಳಿ ಸಂದರ್ಭದಲ್ಲಿ ಎಲ್ಲ ಮದ್ಯದಂಗಡಿಗಳು ಮುಚ್ಚಿದ್ದರಿಂದ ಈ ಮೂವರು ಕುಡಿಯಲು ಮದ್ಯ ಸಿಗದೆ ಸ್ಯಾನಿಟೈಸರ್‍ನ್ನು ಕುಡಿದಿದ್ದಾರೆ. ಇದರಿಂದ ತೀರ ಅಸ್ವಸ್ಥಗೊಂಡ ಇವರನ್ನು ಸಂಬಂಧಿಕರು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.

ವಿಷಯ ತಿಳಿದ ಪೊಲೀಸರು ಕ್ರಮ ಕೈಗೊಂಡಿದ್ದು, ಮೃತರ ಮನೆಗಳಿಂದ 500 ಮಿ.ಲೀ ಸ್ಯಾನಿಟೈಸರ್ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಭಿಂದ್ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಮನೋಜ್ ಸಿಂಗ್ ತಿಳಿಸಿದ್ದಾರೆ. ಸ್ಯಾನಿಟೈಸರ್ ಬಾಟಲಿಗಳನ್ನು ಇಟವಾ ಜಿಲ್ಲೆಯಿಂದ ಖರೀದಿಸಲಾಗಿದೆ. ಈ ಬ್ರಾಂಡ್‍ನ ಸ್ಯಾನಿಟೈಸರ್‍ನಲ್ಲಿ ಎಥೆನಾಲ್ ಅಂಶವು ಅಧಿಕವಾಗಿರುವುದರಿಂದ ಗಂಭೀರ ಪರಿಣಾಮಗಳಿಗೆ ಕಾರಣವಾಯಿತು ಎಂದು ಅವರು ಹೇಳಿದರು.