ಮಾದಕ ವಸ್ತು ಮಾರಾಟ ಮಾಡುತ್ತಿದ್ದವರ ಬಂಧನ : 20 ಕೆಜಿ ಗಾಂಜಾ ವಶ

Social Share

ಬೆಂಗಳೂರು,ಜ.19-ಪೊಲೀಸರ ವಶದಲ್ಲಿರುವ ರೌಡಿ ಸ್ಟಾರ್ ರಾಹುಲ್‍ನನ್ನು ಬಿಡಿಸಿಕೊಳ್ಳಲು ಹಣಕ್ಕಾಗಿ ಕಾರಿನಲ್ಲಿ ಗಾಂಜಾ ಮಾರಾಟ ಮಾಡಲು ಬಂದಿದ್ದ ನಾಲ್ವರು ಸಹಚರರನ್ನು ವಿವಿಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ನ್ಯೂ ಟಿಂಬರ್‍ಯಾರ್ಡ್ ಲೇಔಟ್‍ನ ಪುರುಷೋತ್ತಮ್(26), ಶ್ರೀನಗರದ ಕಿರಣ್(21), ಕಾಟನ್‍ಪೇಟೆ ಮುಖ್ಯರಸ್ತೆಯ ಕಾರ್ತಿಕ್(21) ಮತ್ತು ರಾಹುಲ್(28) ಬಂಧಿತರು.
ಆರೋಪಿಗಳಿಂದ 6 ಲಕ್ಷ ರೂ. ಬೆಲೆಯ 20 ಕೆಜಿ 600 ಗ್ರಾಂ ಗಾಂಜಾ, ಕೃತ್ಯಕ್ಕೆ ಬಳಸಿದ್ದ ಹೊಂಡಾ ಸಿಟಿ ಕಾರು, ಮಚ್ಚು, ಹಣ, ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ತಲೆಮರೆಸಿ ಕೊಂಡಿರುವ ಕುಳ್ಳ ರಿಜ್ವಾನ್, ಭರತ್ ಮತ್ತು ಆಟೋ ವಿಜಿ ಬಂಧನಕ್ಕೆ ಪೊಲೀಸರು ಪತ್ತೆ ಕಾರ್ಯ ಕೈಗೊಂಡಿದ್ದಾರೆ.
ಬಂಧಿತ ಆರೋಪಿಗಳು ಈ ಹಿಂದೆ ಕೊಲೆಯತ್ನ, ಹಲ್ಲೆ, ಇತ್ಯಾದಿ ಅಪರಾಧಗಳಲ್ಲಿ ಭಾಗಿಯಾಗಿರುವ ಕುಳ್ಳ ರಿಜ್ವಾನ್, ಸ್ಟಾರ್ ರಾಹುಲ್, ಭರತ ಸಹಚರರು. ಇವರೆಲ್ಲ ಮಾದಕವಸ್ತು ಗಾಂಜಾವನ್ನು ಖರೀದಿ ಮಾಡಿಕೊಂಡು ಬಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು.  ಹನುಮಂತನಗರ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಕಾರುಗಳ ಗಾಜು ಒಡೆದು ದಾಂದಲೆ ಮಾಡಿದ್ದ ಪ್ರಕರಣದಲ್ಲಿ ರೌಡಿ ಸ್ಟಾರ್ ರಾಹುಲ್ ವಿರುದ್ಧ ಪ್ರಕರಣ ದಾಖಲಾಗಿತ್ತು.
ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಈತನ ವಿರುದ್ಧ ವಾರೆಂಟ್‍ಗಳು ಇದ್ದುದ್ದರಿಂದ ಪೊಲೀಸರು ಹುಡುಕಾಡುತ್ತಿದ್ದರು. ಜ.17ರಂದು ಸ್ಟಾರ್ ರಾಹುಲ್ ಬಗ್ಗೆ ಖಚಿತ ಮಾಹಿತಿ ಆಧರಿಸಿ ಬಂಧಿಸಲು ಹೋದಾಗ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದು, ಶರಣಾಗಲು ಎಚ್ಚರಿಸಿದರಾದರೂ ಅಲ್ಲಿಂದ ತಪ್ಪಿಸಿಕೊಳ್ಳಲು ಪೊಲೀಸರ ಮೇಲೆ ಹಲ್ಲೆ ಮಾಡಿದ್ದರಿಂದ ಸಬ್‍ಇನ್‍ಸ್ಪೆಕ್ಟರ್ ಹಾರಿಸಿದ ಗುಂಡು ಕಾಲಿಗೆ ತಗುಲಿ ಗಾಯ ಗೊಂಡು ಪೊಲೀಸರ ವಶದಲ್ಲಿದ್ದಾನೆ.
ಸ್ಟಾರ್ ರಾಹುಲ್ ಪೊಲೀಸರಿಗೆ ಸಿಕ್ಕಿಬಿದ್ದಿರುವ ವಿಷಯ ತಿಳಿದು ನಾಲ್ವರು ಸಹಚರರು ಹಾಗೂ ತಲೆಮರೆಸಿಕೊಂಡಿರುವ ಮೂವರು ಒಟ್ಟಾಗಿ ಸೇರಿ ರಾಹುಲ್‍ನನ್ನು ಬಿಡಿಸಿಕೊಳ್ಳುವ ಸಂಬಂಧ ಹಣದ ಅವಶ್ಯಕತೆ ಇದ್ದುದರಿಂದ ಗಾಂಜಾ ಮಾರಾಟ ಮಾಡಿ ಹಣ ಹೊಂದಿಸುವ ಯೋಜನೆ ರೂಪಿಸಿದ್ದರು.
ಅದರಂತೆ ನಿನ್ನೆ ಮಧ್ಯಾಹ್ನ 1 ಗಂಟೆ ಸುಮಾರಿನಲ್ಲಿ ಭರತನ ಹೋಂಡಾ ಸಿಟಿ ಕಾರಿನ ಡಿಕ್ಕಿಯಲ್ಲಿ ಗಾಂಜಾ ಮತ್ತು ಮಾರಕಾಸ್ತ್ರಗಳನ್ನು ಇಟ್ಟುಕೊಂಡು ವಿವಿಪುರಂ ಠಾಣೆ ವ್ಯಾಪ್ತಿಯ ಹಳೇಕೋಟೆ ಮೈದಾನದ ಎದುರಿನ ಕೆ.ಆರ್.ರಸ್ತೆಯಲ್ಲಿ ಕುಳ್ಳ ರಿಜ್ವಾನ್, ಭರತ್ ಮತ್ತು ಆಟೋ ವಿಜಿ ಬರುವಿಕೆಗಾಗಿ ಕಾಯುತ್ತಿದ್ದರು.
ಈ ವಿಷಯ ತಿಳಿಯುತ್ತಿದ್ದಂತೆ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಜಯನಗರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀನಿವಾಸ್ ಉಸ್ತುವಾರಿಯಲ್ಲಿ ವಿವಿಪುರಂ ಠಾಣೆ ಇನ್‍ಸ್ಪೆಕ್ಟರ್ ಕಿರಣ್‍ಕುಮಾರ್ ಎಸ್.ನೀಲಗಾರ್, ಪಿಎಸ್‍ಐ ಮಂಜುನಾಥ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರಿನ ಸಮೇತ ನಾಲ್ವರನ್ನು ಬಂಸಿ, ಗಾಂಜಾ ಹಾಗೂ ಮಚ್ಚು, ಎರಡು ಮೊಬೈಲ್ ಹಾಗೂ ಹಣ ವಶಪಡಿಸಿಕೊಂಡಿದ್ದಾರೆ.
ಬಂತ ಆರೋಪಿಗಳ ಪೈಕಿ ರಾಹುಲ್ ಅಲಿಯಾಸ್ ಅರ್ಜುನ್ ಅಲಿಯಾಸ್ ತೊಡೆ ಈ ಹಿಂದೆ ಕೊಲೆ ಯತ್ನ, ಇತರೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಅಲ್ಲದೆ ಬನಶಂಕರಿ, ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ರೌಡಿಶೀಟ್ ತೆರೆಯಲಾಗಿದೆ.
ಆರೋಪಿಗಳ ಹಿನ್ನೆಲೆ: ಹತ್ತನೇ ತರಗತಿ ವ್ಯಾಸಂಗ ಮಾಡಿ, ಶಾಲೆ ಬಿಟ್ಟು ಚಾಲಕ ವೃತ್ತಿ ಮಾಡಿಕೊಂಡಿದ್ದ ಪುರುಷೋತ್ತಮ್ ಕಾರ್ಗೋ ಮೂವರ್ಸ್ ಎಂಬಲ್ಲಿ ಕೊರಿಯರ್ ವಾಹನದ ಚಾಲಕ. ಈತ ಅಪರಾಧ ಹಿನ್ನೆಲೆಯುಳ್ಳ ಭರತ, ರಾಹುಲ್ ಮತ್ತು ಕುಳ್ಳ ರಿಜ್ವಾನ್ ಸ್ನೇಹ ಬೆಳೆಸಿಕೊಂಡು ಗಾಂಜಾ ಮಾರಾಟ ದಂಧೆಯಲ್ಲಿ ತೊಡಗಿದ್ದನು.
ಆರೋಪಿ ಕಿರಣ್ ಬೇಕರಿಗಳಲ್ಲಿ ಕೆಲಸ ಮಾಡಿಕೊಂಡಿದ್ದು, ಈತನೂ ಸಹ ಭರತ, ಕುಳ್ಳ ರಿಜ್ವಾನ್, ಆಟೋ ವಿಜಿ ಸ್ನೇಹ ಬೆಳೆಸಿಕೊಂಡು ಹಣಕ್ಕಾಗಿ ಮತ್ತು ದಿನನಿತ್ಯದ ದುಶ್ಚಟಗಳಿಗೆ ಗಾಂಜಾ ಮಾರಾಟದಲ್ಲಿ ತೊಡಗಿರುವುದು ವಿಚಾರಣೆಯಿಂದ ತಿಳಿದುಬಂದಿದೆ. ಮತ್ತೊಬ್ಬ ಆರೋಪಿ ಕಾರ್ತಿಕ್ ವಿವಿಧ ಬೇಕರಿಗಳಲ್ಲಿ ಕೆಲಸ ಮಾಡಿ ಕೊಂಡಿದ್ದು, ಈತನೂ ಸಹ ಅಪರಾಧ ಹಿನ್ನೆಲೆಯುಳ್ಳವರ ಸ್ನೇಹ ಬೆಳೆಸಿ ಕೊಂಡು ದುಶ್ಚಟಗಳಿಗಾಗಿ ಗಾಂಜಾ ಮಾರಾಟದಲ್ಲಿ ತೊಡಗಿ ದ್ದನು.
ಆರೋಪಿ ರಾಹುಲ್ ಈ ಹಿಂದೆ ಕೆ.ಆರ್.ರಸ್ತೆಯ ಹರೀಶನ ಕೊಲೆ ಮಾಡಿದ್ದ ಘಠಾಣಿ ಮತ್ತು ಚಿಲ್ವೇರಿಯ ಕೊಲೆ ಯತ್ನ ಪ್ರಕರಣದಲ್ಲಿ ಹಾಗೂ ಗಾಂಜಾ ಮಾರಾಟದಲ್ಲಿ ತೊಡಗಿದ್ದನು. ಪೊಲೀಸರ ಉತ್ತಮ ಕಾರ್ಯವನ್ನು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್, ಪಶ್ಚಿಮ ವಿಭಾಗದ ಅಪರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಶ್ಲಾಘಿಸಿರುತ್ತಾರೆ.

Articles You Might Like

Share This Article