ಬೆಂಗಳೂರು,ಸೆ.17- ಮಾದಕವಸ್ತು ಗಾಂಜಾ ಹಾಗೂ ಹ್ಯಾಶಿಷ್ ಆಯಿಲ್ ಕಳ್ಳಸಾಗಾಣಿಕೆ ದಂಧೆಯಿಂದ ಡ್ರಗ್ ಪೆಡ್ಲರ್ ಅಕ್ರಮವಾಗಿ ಗಳಿಸಿದ್ದ 1.60 ಕೋಟಿ ರೂ. ಮೌಲ್ಯದ ಚರಾಸ್ತಿ ಹಾಗೂ ಚಿರಾಸ್ತಿಗಳನ್ನು ಸಿಸಿಬಿ ಪೊಲೀಸರು ಮುಟುಗೋಲು ಹಾಕಿಕೊಂಡಿದ್ದಾರೆ.
ಡ್ರಗ್ ಪೆಡ್ಲರ್ ಮೃತ್ಯಂಜಯ ಅಲಿಯಾಸ್ ಜಯಣ್ಣ ಅಲಿಯಾಸ್ ಎಂಜೆ ಎಂಬಾತನನ್ನು ಸಿಸಿಬಿ ವಿಭಾಗದ ಮಾದಕ ದ್ರವ್ಯ ನಿಗ್ರಹ ದಳದ ಇನ್‍ಸ್ಪೆಕ್ಟರ್ ಅಶೋಕ್ ಅವರು ಬಂಧಿಸಿ, 80 ಲಕ್ಷ ಮೌಲ್ಯದ ಮಾದಕ ವಸ್ತುಗಳಾದ ಹ್ಯಾಶಿಷ್ ಆಯಿಲ್ ಮತ್ತು ಗಾಂಜಾ ವಶಪಡಿಸಿಕೊಂಡಿದ್ದಾರೆ.
ಆರೋಪಿ ವಿರುದ್ಧ ಕೋಲಾರ ಜಿಲ್ಲೆ ಮಾಲೂರು ಪೊಲೀಸ್ ಠಾಣೆ ಹಾಗೂ ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 2007ರಿಂದ ಇದುವರೆಗೆ 9 ಎನ್‍ಡಿಪಿಎಸ್ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣದ ಸೂಕ್ಷ್ಮತೆ ಅರಿತ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತರು ಮುಂದಿನ ತನಿಖೆ ಸಲುವಾಗಿ ಸಿಸಿಬಿ ಘಟಕದ ಇನ್‍ಸ್ಪೆಕ್ಟರ್ ದೀಪಕ್ ಅವರಿಗೆ ಕಡತವನ್ನು ವರ್ಗಾವಣೆ ಮಾಡಿ ಆದೇಶ ಮಾಡಿದ್ದರು.
ಇದನ್ನೂ ಓದಿ : ದೊಡ್ಡವರ ಮನೆ ಬಳಿ ಜೆಸಿಬಿಗಳು ಸೈಲೆಂಟ್, ನಾಲ್ಕೇ ದಿನಕ್ಕೆ ಸೀಮಿತವಾಯ್ತು ಬಿಬಿಎಂಪಿ ಪೌರುಷ ಪ್ರದರ್ಶನ
ಈ ಪ್ರಕರಣದ ತನಿಖೆ ಮುಂದುವರೆಸಿದ ಇನ್‍ಸ್ಪೆಕ್ಟರ್ ದೀಪಕ್ ಅವರು ಡ್ರಗ್ ಪೆಡ್ಲಿಂಗ್‍ನಿಂದ ಅಕ್ರಮವಾಗಿ ಆಸ್ತಿ ಮಾಡಿರುವುದರ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಆರೋಪಿ ಮೃತ್ಯುಂಜಯ ಮತ್ತು ಆತನ ಹೆಂಡತಿ ಭಾಗ್ಯಮ್ಮ ಹೆಸರಿನಲ್ಲಿ ಗಳಿಸಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಟೌನ್‍ನಲ್ಲಿನ ವಾಣಿಜ್ಯ ನಿವೇಶನ ಮತ್ತು ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು, ಕಸಬಾ ಹೋಬಳಿ, ಜೋಡಿಪುರ ಮತ್ತು ಕಂಬಿಪುರ ಗ್ರಾಮಗಳಲ್ಲಿನ ಕೃಷಿ ಜಮೀನುಗಳು ಒಟ್ಟು ನಾಲ್ಕು ಚಿರಾಸ್ತಿಗಳನ್ನು ಹಾಗೂ ಇವರಿಗೆ ಸೇರಿದ ಮಾಲೂರು ಟೌನ್‍ನ ವಿವಿಧ ಆರು ಬ್ಯಾಂಕ್ ಖಾತೆಗಳಲ್ಲಿದ್ದ 44,387 ರೂ.ಗಳನ್ನು ತನಿಖೆಯಲ್ಲಿ ಗುರುತಿಸಿ ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಆರೋಪಿ ಮೃತ್ಯುಂಜಯ ಮತ್ತು ಆತನ ಪತ್ನಿ ಭಾಗ್ಯಮ್ಮ ಹೆಸರಿನಲ್ಲಿ ತೆರೆಯಲಾಗಿದ್ದ ವಿವಿಧ ಬ್ಯಾಂಕ್ ಖಾತೆಗಳಲ್ಲಿ ಅನಧಿಕೃತವಾಗಿ ನಗದು ರೂಪದಲ್ಲಿ ಯುಪಿಐ ಮುಖಾಂತರ ಮತ್ತು ಇತರೆ ಎಲೆಕ್ಟ್ರಾನಿಕ್ ವರ್ಗಾವಣೆಯಿಂದ ಸುಮಾರು 5 ಕೋಟಿಗೂ ಹೆಚ್ಚು ಹಣ ಜಮೆಯಾಗಿರುವುದು ತಿಳಿದುಬಂದಿರುತ್ತದೆ.
ಈ ಬಗ್ಗೆ ಸಮರ್ಪಕವಾದ ಆದಾಯ ತೆರಿಗೆಯನ್ನು ಪಾವತಿ ಮಾಡದೆ ವಹಿವಾಟನ್ನು ಮರೆಮಾಚಿರುವುದು ಐಟಿ ರಿಟರ್ನ್ ದಾಖಲೆಗಳಿಂದ ತನಿಖೆಯಲ್ಲಿ ಕಂಡುಬಂದಿದೆ. ಮುಟುಗೋಲು ಹಾಕಿಕೊಂಡಿರುವ ಕೃಷಿ ಜಮೀನುಗಳು, ವಾಣಿಜ್ಯ ನಿವೇಶನದ ಸರ್ಕಾರಿ ಮಾರ್ಗಸೂಚಿ ದರ ಸುಮಾರು 41 ಲಕ್ಷ ರೂ.ಗಳಾಗಿದ್ದು, ಈ ಆಸ್ತಿಗಳ ಪ್ರಸ್ತುತ ಮಾರಕಟ್ಟೆ ದರ ಸುಮಾರು 1.60 ಕೋಟಿ ರೂ.ಗಳೆಂದು ಅಂದಾಜಿಸಲಾಗಿರುತ್ತದೆ.
ಈ ಆದೇಶವನ್ನು ಸಕ್ಷಮ ಪ್ರಾಧಿಕಾರ ಮತ್ತು ಚೆನ್ನೈನ ಸಫೀಮ(ಎಫ್‍ಒಪಿ) ಮತ್ತು ಎನ್‍ಡಿಪಿಎಸ್ ಕಾಯ್ದೆ ಅಧ್ಯಾಯದಂತೆ 30 ದಿನಗಳಲ್ಲಿ ಕೂಲಂಕುಷವಾಗಿ ಪರಿಶೀಲಿಸಿ ವಿಚಾರಣೆ ಕೈಗೊಂಡು ಮುಟುಗೋಲು ಆದೇಶವನ್ನು ಅನುಮೋದನೆ ಮಾಡಿರುತ್ತಾರೆ.
ಅಪರಾಧ ದಳದ ಹಿರಿಯ ಪೊಲೀಸ್ ಅಧಿಕಾರಿಗಳ ಸಲಹೆ ಮತ್ತು ಮಾರ್ಗದರ್ಶನದಂತೆ ಸಿಸಿಬಿ ವಿಭಾಗದ ಮಾದಕದ್ರವ್ಯ ನಿಗ್ರಹ ದಳದ ಅಕಾರಿಗಳು ಹಾಗೂ ಸಿಬ್ಬಂದಿ ತಂಡ ಈ ಕ್ರಮ ಕೈಗೊಳ್ಳುವಲ್ಲಿ ಯಶಸ್ವಿಯಾಗಿದೆ.