ಆಹಾರ ಸರಬರಾಜು ನೆಪದಲ್ಲಿ ಡ್ರಗ್ ಹಂಚಿಕೆ, ಪೆಡ್ಲರ್‌ಗಳ ಬಂಧನ

Spread the love

ಬೆಂಗಳೂರು,ಅ.22- ಬರ್ತ್ ಡೇ ಗಿಫ್ಟ್ ರ್ಯಾಪರ್‍ಗಳಲ್ಲಿ ಹಾಗೂ ಆಹಾರ ಸರಬರಾಜು ನೆಪದಲ್ಲಿ ಮಾದಕವಸ್ತುಗಳನ್ನು ಪ್ಯಾಕ್ ಮಾಡಿ ಚಾಲಾಕಿತನದಿಂದ ಸಾಗಾಟ ಮಾಡುತ್ತಿದ್ದ ಇಬ್ಬರು ಡ್ರಗ್ಸ್ ಪೆಡ್ಲರ್‍ಗಳನ್ನು ಸಿಸಿಬಿ ಪೊಲೀಸರು ಬಂಧಿಸಿ 60 ಲಕ್ಷ ರೂ. ಬೆಲೆ ಬಾಳುವ ಹೈಡ್ರೋ ಗಾಂಜಾ ಮತ್ತಿತರ ಮಾದಕದ್ರವ್ಯಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳಿಂದ 300 ಎಂಡಿಎಂಎ ಎಕ್ಸ್‍ಟೆಸಿ ಮಾತ್ರೆಗಳು , 100 ಎಲ್ ಎಸ್‍ಡಿ ಪೇಪರ್ ಬ್ಲಾಟ್ಸ್, 350 ಗ್ರಾಂ ಚರಸ್, 1.5 ಕೆಜಿ ಹೈಡ್ರೋ ಗಾಂಜಾ ಹಾಗೂ ಕೃತ್ಯಕ್ಕೆ ಉಪಯೋಗಿಸುತ್ತಿದ್ದ ಗಿಫ್ಟ್ ಬಾಕ್ಸ್, ಪ್ಯಾಕಿಂಗ್ ಕವರ್‍ಗಳು, ಸ್ವಿಗ್ಗಿ ಕಂಪನಿಯ ಟೀಶರ್ಟ್, ಡಂಝೋ ಬ್ಯಾಗ್ ಇತ್ಯಾದಿಗಳನ್ನು ವಶಕ್ಕೆ ಪಡೆದಿದ್ದಾರೆ.

ಈ ಇಬ್ಬರು ಆರೋಪಿಗಳು ಡಾರ್ಕ್‍ನೆಟ್‍ನಲ್ಲಿ ವಿದೇಶಿಗರು ಹಾಗೂ ಸ್ಥಳೀಯ ಡ್ರಗ್ಸ್ ಪೆಡ್ಲರ್‍ಗಳಿಂದ ಮಾದಕದ್ರವ್ಯಗಳನ್ನು ಬಿಟ್ ಕಾಯಿನ್ ಮೂಲಕ ಖರೀದಿಸಿ ನಗರದ ಗ್ರಾಹಕರಿಂದ ಮಾದಕದ್ರವ್ಯ ಪದಾರ್ಥಗಳ ಸರಬರಾಜಿಗೆ ಆರ್ಡರ್ ತೆಗೆದುಕೊಳ್ಳುತ್ತಿದ್ದರು. ನಂತರ ಸ್ವಿಗ್ಗಿ , ಜಿನೈಯ್ ಮತ್ತು ಡಂಜೋ ಮುಖಾಂತರ ಬರ್ತ್ ಡೇ ಗಿಫ್ಟ್ ಪ್ಯಾಕ್‍ಗಳಲ್ಲಿ ಮಾದಕ ವಸ್ತುಗಳನ್ನು ಗ್ರಾಹಕರ ಮನೆಗಳಿಗೆ ಸರಬರಾಜು ಮಾಡುತ್ತಿದ್ದರು.

ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯ ಪಿಜಿಯೊಂದರಲ್ಲಿ ಎಂಡಿ ಎಂಎ ಎಕ್ಸ್‍ಟೆಸಿ ಮಾತ್ರೆಗಳು, ಚರಸ್, ಹೈಡ್ರೋಗಾಂಜಾ ಶೇಖರಿಸಿಕೊಂಡು ನಗರದ ವಿದ್ಯಾರ್ಥಿಗಳು, ಐಟಿಬಿಟಿ ಉದ್ಯೋಗಿಗಳು ಮತ್ತು ಮಾದಕ ವ್ಯಸನಿಗಳಿಗೆ ಸರಬರಾಜು ಮಾಡುತ್ತಾ ಹೆಚ್ಚಿನ ಹಣ ಗಳಿಸುವ ದಂಧೆಯಲ್ಲಿ ತೊಡಗಿದ್ದರು.

ಸಿಸಿಬಿ ಅಧಿಕಾರಿಗಳು ಡ್ರಗ್ ಪೆಡ್ಲರ್‍ಗಳ ವಿರುದ್ಧ ನಿರಂತರ ಕಾರ್ಯಾಚರಣೆ ಮುಂದುವರೆಸಿದ್ದು, ಸಿಸಿಬಿ ಅಧಿಕಾರಿ ಬಿ.ಎಸ್.ಅಶೋಕ್ ಅವರು ಡ್ರಗ್ಸ್ ಪೆಡ್ಲರ್‍ಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ತಮ್ಮ ತಂಡದೊಂದಿಗೆ ಪಿಜಿಗೆ ಪಿಜಿಗೆ ಹೋಗಿ ಪರಿಶೀಲಿಸಿ ಮಾದಕವಸ್ತುಗಳನ್ನು ಶೇಖರಿಸಿಟ್ಟಿದ್ದ ಇಬ್ಬರು ಡ್ರಗ್ ಪೆಡ್ಲರ್‍ಗಳನ್ನು ಬಂಧಿಸಿ ಎನ್‍ಡಿಪಿಎಸ್ ಕಾಯ್ದೆಯಡಿ ಬೆಳ್ಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತಾರೆ.

ದೆಹಲಿ ಮೂಲದ ಪ್ರಮುಖ ಡ್ರಗ್ ಪೆಡ್ಲರ್ ವಿಐಸಿಆರ್-ಎಂಇ, ವಿಒಐಪಿ, ಎಸ್‍ಇಎಸ್‍ಎಸ್‍ಐಒಎನ್ ಎಂಬ ಅಪ್ಲಿಕೇಶನ್‍ಗಳಲ್ಲಿ ಮೆಸೇಜ್ ಮತ್ತು ಕರೆಗಳನ್ನು ಮಾಡಿ ಇನ್ನಿತರ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಮಾದಕ ವಸ್ತುಗಳ ಮಾರಾಟ ಮತ್ತು ಸಾಗಾಟ ದಂಧೆ ನಡೆಸುತ್ತಿದ್ದರೆಂಬುದನ್ನು ಈ ಇಬ್ಬರು ಡ್ರಗ್ ಪೆಡ್ಲರ್‍ಗಳು ವಿಚಾರಣೆ ವೇಳೆ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ದೆಹಲಿ ಮೂಲಕ ಆ ವ್ಯಕ್ತಿ ಡಾರ್ಕ್‍ನೆಟ್ ಮುಖಾಂತರ ದೇಶೀಯ ಮತ್ತು ವಿದೇಶಿಯ ವ್ಯಕ್ತಿಗಳಿಂದ ಮಾದಕ ವಸ್ತುಗಳನ್ನು ಅಂಚೆ ಮೂಲಕ ಈ ಇಬ್ಬರು ಡ್ರಗ್ ಪೆಡ್ಲರ್‍ಗಳ ವಿಳಾಸಕ್ಕೆ ರವಾನಿಸುತ್ತಿದ್ದನು. ಆತ ಕಳುಹಿಸಿದ ಮಾದಕವಸ್ತುಗಳನ್ನು ಈ ಇಬ್ಬರು ಡ್ರಗ್ ಪೆಡ್ಲರ್‍ಗಳು ಸಂಗ್ರಹಿಸಿಕೊಳ್ಳುತ್ತಿದ್ದರು. ನಂತರ ಮಾಲೀಕ ವಿಐಸಿಆರ್-ಎಂಇ ಎಂಬ ಆ್ಯಪ್‍ನಲ್ಲಿ ಡ್ರಗ್ಸ್‍ಗೆ ಆರ್ಡರ್ ತೆಗೆದುಕೊಂಡು ಇವರಿಗೆ ತಿಳಿಸುತ್ತಿದದ್ದು ತನಿಖೆಯಿಂದ ತಿಳಿದುಬಂದಿದೆ.

ದೆಹಲಿ ಮೂಲದ ಮಾಲೀಕನ ಅನುಸಾರ ಪ್ರತ್ಯೇಕವಾಗಿ ಸೋಪ್ ಹಾಗೂ ಫೋಟೋಗಳ ಜೊತೆ, ಗ್ರೀಟಿಂಗ್ ಕಾರ್ಡ್, ಪುಸ್ತಕಗಳ ಪುಟಗಳ ಮಧ್ಯೆ ಇಟ್ಟು ಬರ್ತ್‍ಡೇ ಗಿಫ್ಟ್ ರ್ಯಾಪರ್‍ಗಳಲ್ಲಿ ಪ್ಯಾಕ್ ಮಾಡಿ ಈ ಮಾಲನ್ನು ಮಾಲೀಕ ತಿಳಿಸಿದ ಗ್ರಾಹಕರಿಗೆ ಸ್ವಿಗ್ಗಿ , ಜಿನೈಯ್ ಮತ್ತು ಡಂಜೋ ಮುಖಾಂತರ ಗ್ರಾಹಕರ ಮನೆಗಳಿಗೆ ಸರಬರಾಜು ಮಾಡುತ್ತಿದ್ದುದ್ದು ತನಿಖೆಯಿಂದ ತಿಳಿದುಬಂದಿದೆ.

ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಡಿಸಿಪಿ( ಅಪರಾಧ-2) ಬಿ.ಎಸ್.ಅಂಗಡಿ ಅವರ ನೇತೃತ್ವದಲ್ಲಿ ಎಸಿಪಿ ಗೌತಮ್, ಇನ್‍ಸ್ಪೆಕ್ಟರ್‍ಗಳಾದ ಅಶೋಕ್, ದೀಪಕ್ ಅವರನ್ನೊಳಗೊಂಡ ತಂಡ ಈ ಕಾರ್ಯಾಚರಣೆಯನ್ನು ಕೈಗೊಂಡು ಇಬ್ಬರು ಡ್ರಗ್ ಪೆಡ್ಲರ್‍ಗಳನ್ನು ಬಂಸುವಲ್ಲಿ ಯಶಸ್ವಿಯಾಗಿದೆ.

50 ಸಾವಿರ ಬಹುಮಾನ:
ಈ ಪತ್ತೆ ಕಾರ್ಯ ನಡೆಸಿದ ತಂಡಕ್ಕೆ ನಗರ ಪೊಲೀಸ್ ಆಯುಕ್ತ ಕಮಲ್‍ಪಂಥ್ ಅವರು 50 ಸಾವಿರ ಬಹುಮಾನ ಘೋಷಿಸಿರುತ್ತಾರೆ.

Facebook Comments