ಬೆಂಗಳೂರು, ಸೆ.1- ರಾಜಧಾನಿ ಬೆಂಗಳೂರಿನ ಮಾದಕ ವಸ್ತು ಜಾಲವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಸಲುವಾಗಿ ಮಾತ್ರ ಆರಂಭದಲ್ಲಿ ಒಂದಷ್ಟು ಕಾರ್ಯಾಚರಣೆಗಳು ನಡೆದವು. ಈಗ ಬಿಜೆಪಿಯವರ ಕೃಪಾಕಟಾಕ್ಷಾದಲ್ಲೇ ಎಗ್ಗಿಲ್ಲದೆ ದಂಧೆ ನಡೆಯುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಕೆಪಿಸಿಸಿ ಕಚೇರಿಯಲ್ಲಿಂದು ಮಾತನಾಡಿ ಮಾಜಿ ಸಚಿವರಾದ ಕೃಷ್ಣ ಬೈರೇಗೌಡ, ಪೊಲೀಸ್‍ನವರು ಸರ್ಕಾರದ ನಿರ್ದೇಶನವನ್ನು ಅನುಸರಿಸುತ್ತಾರೆ. ಬೆಂಗಳೂರಿನಲ್ಲಿ ಮಾದಕ ವಸ್ತು ಹಾವಳಿ ಹೆಚ್ಚಾಗಲು ಬಿಜೆಪಿ ಕಾರಣ. ಆರಂಭದಲ್ಲಿ ಸಿನಿಮಾದ ಒಂದೆರಡು ಮಂದಿಯನ್ನು ಬಂಸಿದರು.
ಅದು ಬೆಂಗಳೂರಿನ ಮಾದಕ ವಸ್ತು ಜಾಲವನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಮಾಡಿದ ನಾಟಕ ಅದು. ಈಗ ಅದರಲ್ಲಿ ದುಡ್ಡು ಮಾಡಿಕೊಳ್ಳುತ್ತಿದ್ದಾರೆಯೇ ಹೊರತು, ಮಾದಕ ವಸ್ತುಗಳ ದಂಧೆಯನ್ನು ನಿಗ್ರಹಿಸುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದರು.
ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ರಾಷ್ಟ್ರೀಯ ಅಪರಾಧಗಳ ಮಾನಕ ಬ್ಯೂರೋದ ಪ್ರಕಾರ, 2018ರಲ್ಲಿ ಬೆಂಗಳೂರಿನಲ್ಲಿ ಮಾದಕ ವಸ್ತು ಸಂಬಂಧಪಟ್ಟಂತೆ 1030 ಪ್ರಕರಣಗಳು ದಾಖಲಾಗಿದ್ದವು. 2019ರಿಂದ 2021ರ ನಡುವೆ ಪ್ರಕರಣಗಳ ಸಂಖ್ಯೆ ಶೇ.462ರಷ್ಟು ಹೆಚ್ಚಾಗಿದೆ.
2 ವರ್ಷದಲ್ಲಿ 5 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇದು ಆತಂಕಕಾರಿಯಾಗಿದ್ದು ಮುಂದಿನ ದಿನಗಳಲ್ಲಿ ವಿಸ್ತೃತವಾಗಿ ಮಾತನಾಡುವುದಾಗಿ ಹೇಳಿದರು.