ಗಾಂಜಾ ಸರಬರಾಜು ಮಾಡುತ್ತಿದ್ದ ನಾಲ್ವರು ಮಹಿಳೆಯರು, ವಿದೇಶಿ ಪ್ರಜೆ ಬಂಧನ

Social Share

ಬೆಂಗಳೂರು, ಸೆ.27- ಆಂಧ್ರಪ್ರದೇಶದ ಚಿಂತಪಲ್ಲಿಯಿಂದ ರೈಲಿನಲ್ಲಿ ನಗರಕ್ಕೆ ಡ್ರಗ್ಸ್ ಪೂರೈಕೆ ಮಾಡಿಕೊಂಡು ಬಂದು ಪೆಡ್ಲರ್‍ಗಳಿಗೆ ಗಾಂಜಾ ಸರಬರಾಜು ಮಾಡುತ್ತಿದ್ದ ನಾಲ್ವರು ಮಹಿಳೆಯರು ಹಾಗೂ ಒಬ್ಬ ವಿದೇಶಿ ಪ್ರಜೆಯನ್ನು ಬಂಧಿಸಿರುವ ಸಿಸಿಬಿ ಪೊಲೀಸರು 7.80 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರಿಂದ 8 ಕೆಜಿ ಹ್ಯಾಶೀಶ್ ಆಯಿಲ್, 10 ಕೆಜಿ ಗಾಂಜಾ, ಒಂದು ಕೆಜಿ 4ಗ್ರಾಂ ಎಂಡಿಎಂಎ ಕ್ರಿಸ್ಟಲನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗುಂಡೇರಿ ಪುಷ್ಪಾ, ಬೂದಿ ವಿಜಯಾ, ದೇವಿ, ಪೂರ್ಣಿಮಾ ಹಾಗೂ ವಿದೇಶಿ ಪ್ರಜೆ ಡೇವಿಡ್ ಜಾನ್ ಬಂಧಿತ ಆರೋಪಿಗಳು.

ಜೂನ್ 24ರಂದು ವಿವೇಕನಗರ ಠಾಣೆ ಪೊಲೀಸರು ಡ್ರಗ್ ಪ್ರಕರಣದಲ್ಲಿ ಡಿಜೆ ಒಬ್ಬನನ್ನು ಬಂಧಿಸಿದ್ದರು. ನಂತರ ಈ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವರ್ಗಾಯಿಸಲಾಗಿತ್ತು. ಸಿಸಿಬಿ ಪೊಲೀಸರು ತನಿಖೆ ಮುಂದುವರೆಸಿ ಸುಮಾರು ಒಂದು ತಿಂಗಳಿನಿಂದ ಹೊಂಚು ಹಾಕಿ ಕಾರ್ಯಾಚರಣೆ ನಡೆಸುತ್ತಿದ್ದರು.

ಆಂಧ್ರಪ್ರದೇಶದ ಸಿಂತಪಲ್ಲಿ ಮತ್ತು ಅರಕ್ಕು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಗುಡ್ಡಗಾಡು ಪ್ರದೇಶದಿಂದ ನಿಷೇಧಿತ ಮಾದಕ ವಸ್ತುಗಳಾದ ಹ್ಯಾಶೀಶ್ ಆಯಿಲ್ ಮತ್ತು ಗಾಂಜಾವನ್ನು ಸರಬರಾಜು ಮಾಡುತ್ತಿದ್ದ ತಂಡವೊಂದರ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿ ಕೂಲಂಕಷವಾಗಿ ವಿಚಾರಣೆ ನಡೆಸಿದ್ದರು.

ವಿಚಾರಣೆ ವೇಳೆ ಆರೋಪಿಗಳು ತಿಳಿಸಿದ್ದ ಮಾಹಿತಿಯಂತೆ ಮತ್ತೊಂದು ತಂಡದ ಚಲನ-ವಲನಗಳ ಬಗ್ಗೆ ಕಳೆದೊಂದು ತಿಂಗಳಿನಿಂದ ಮಾಹಿತಿ ಸಂಗ್ರಹಿಸಲಾಗಿತ್ತು. ಸೆ.24ರಂದು ಬೆಳಗ್ಗೆ ಪ್ರಶಾಂತಿ ಎಕ್ಸ್‍ಪ್ರೆಸ್ ರೈಲಿನಲ್ಲಿ ಬಂದು ಪುಟ್ಟಪರ್ತಿ ರೈಲು ನಿಲ್ದಾಣದ ಹೊರಗಡೆ ಆಟೋ ನಿಲ್ದಾಣದಲ್ಲಿ ಬೆಂಗಳೂರಿನ ಪೆಡ್ಲರ್‍ಗಳಿಗೆ ಸರಬರಾಜು ಮಾಡಲು ಬಂದಿದ್ದ ನಾಲ್ವರು ಮಹಿಳೆಯರನ್ನು ಬಂಧಿಸಿ ಸುಮಾರು 8 ಕೆಜಿ ಹ್ಯಾಶೀಶ್ ಆಯಿಲ್, 10 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದು, ಇದರ ಬೆಲೆ 7 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

ಈ ಮಹಿಳೆಯರನ್ನು ವಿಚಾರಣೆಗೊಳಪಡಿಸಿದಾಗ ಇವರಿಂದ ಹ್ಯಾಶೀಶ್ ಆಯಿಲ್ ಪಡೆದುಕೊಳ್ಳುತ್ತಿದ್ದ ನಗರದಲ್ಲಿ ವಾಸವಿರುವ ವಿದೇಶಿ ಡ್ರಗ್ ಪೆಡ್ಲರ್‍ನನ್ನು ಸಿಸಿಬಿ ಪೊಲೀಸರು ಬಂಧಿಸಿ ಆತನ ಬಾಡಿಗೆ ಮನೆಯಲ್ಲಿಟ್ಟಿದ್ದ 1ಕೆಜಿ 4 ಗ್ರಾಂ ಎಂಡಿಎಂಎ ಕ್ರಿಸ್ಟಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕೃತ್ಯದ ಪ್ರಮುಖ ರೂವಾರಿ ಆಂಧ್ರಮೂಲದವನಾಗಿದ್ದು, ಆತ ಅರಕ್ಕು ಹಾಗೂ ಸಿಂತಪಲ್ಲಿ ಅರಣ್ಯ ಪ್ರದೇಶದಲ್ಲಿ ಅಡಗಿಕೊಂಡು ತಾನೇ ಹ್ಯಾಶೀಶ್ ಆಯಿಲ್ ತಯಾರು ಮಾಡಿ ಬೆಂಗಳೂರು, ಹೈದರಾಬಾದ್, ಕೊಚ್ಚಿನ್, ಚನ್ನೈ ಹಾಗೂ ಮುಂಬೈಗಳಿಗೆ ಸರಬರಾಜು ಮಾಡುತ್ತಾನೆಂದು ತಿಳಿದು ಬಂದಿದ್ದು, ಆತನ ಪತ್ತೆಕಾರ್ಯ ಮುಂದುವರೆದಿದೆ.

ಕಾರ್ಯಾಚರಣೆಯನ್ನು ಬೆಂಗಳೂರು ನಗರ ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿ ತಂಡವು ಯಶಸ್ವಿಯಾಗಿ ಕೈಗೊಂಡಿರುತ್ತಾರೆ.

Articles You Might Like

Share This Article