ಇಂದು ಬಯಲಾಗಲಿದೆ ಮಾದಕ ನಟಿ ಮಣಿಯರ ನಿಜ ಬಣ್ಣ..!

ಬೆಂಗಳೂರು,ಸೆ.14- ಡ್ರಗ್ಸ್ ಜಾಲ ನಂಟು ಆರೋಪ ಪ್ರಕರಣದಲ್ಲಿ ನಮ್ಮ ಪಾತ್ರವೇನಿಲ್ಲ ಎಂದೇ ಹೇಳುತ್ತಾ ಬಂದಿರುವ ನಟಿಯರಾದ ರಾಗಿಣಿ ಮತ್ತು ಸಂಜನಾಗೆ ಡೋಪಿಂಗ್ ಟೆಸ್ಟ್‍ನ ವರದಿ ಆತಂಕ ಸೃಷ್ಟಿಸಿದೆ. ಡೋಪಿಂಗ್ ಟೆಸ್ಟ್ ವರದಿಯಲ್ಲಿ ಆರೋಪಿಗಳ ನಿಜ ಬಣ್ಣ ಬಯಲಾಗಲಿದೆ. ಹೀಗಾಗಿ ಡೋಪಿಂಗ್ ಟೆಸ್ಟ್ ವರದಿಯ ಮೇಲೆ ನಟಿ ಮಣಿಯರ ಭವಿಷ್ಯ ನಿಂತಿದೆ.

ವೀಕೆಂಡ್ ಬಂತೆಂದರೆ ನಟಿಯರು ತಮ್ಮ ಗ್ಯಾಂಗ್‍ನೊಂದಿಗೆ ಸೇರಿಕೊಂಡು ಪಾರ್ಟಿ ಆಯೋಜಿಸಿ, ಮೋಜು ಮಸ್ತಿಯಲ್ಲಿ ತೊಡಗುತ್ತಿದ್ದರು. ಈ ಪಾರ್ಟಿಗಳಲ್ಲಿ ಮಾದಕ ವಸ್ತುಗಳನ್ನು ಸೇವಿಸಿ ನಶೆಯಲ್ಲಿ ತೇಲಾಡುತ್ತಿದ್ದರು ಎಂದು ಹೇಳಲಾಗುತ್ತಿದೆ.

ಸಿಸಿಬಿ ವಿಚಾರಣೆ ವೇಳೆ ಮಾದಕ ಲೋಕದ ನಂಟಿನ ಕುರಿತು ಆರೋಪಿಗಳು ಸರಿಯಾದ ಮಾಹಿತಿ ನೀಡಿರಲಿಲ್ಲ. ಹೀಗಾಗಿ ಅಧಿಕಾರಿಗಳು ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಡೋಪಿಂಗ್ ಟೆಸ್ಟ್, ಹೇರ್ ಪೋಲಿಕ್ ಟೆಸ್ಟ್, ಉಗುರು ಟೆಸ್ಟ್, ಮೂತ್ರದ ಪರೀಕ್ಷೆ ಮಾಡಿಸಿದ್ದರು.

ಈ ಪರೀಕ್ಷೆಗಳಿಂದ ಆರೋಪಿಗಳು ಮಾದಕದ್ರವ್ಯ ಸೇವಿಸಿದ್ದರೆ ಗೊತ್ತಾಗುತ್ತದೆ. ಸದ್ಯ ಸಿಸಿಬಿ ಕೂಡ ಪರೀಕ್ಷಾ ವರದಿಗಾಗಿ ಕಾಯುತ್ತಿದೆ. ಆರಂಭದಲ್ಲಿ ಕಿರಿಕ್ ಮಾಡುತ್ತಿದ್ದ ನಟಿಯರು, ಪರೀಕ್ಷೆ ಮಾಡಿಸಿದ ದಿನದಿಂದ ಮೌನಕ್ಕೆ ಜಾರಿದ್ದಾರೆ.

ಎಲ್ಲಿ ಸಿಕ್ಕಿ ಬೀಳ್ತಿವೋ ಎಂಬ ಭಯ ಅವರನ್ನು ಶುರುವಾಗಿದೆ ಎನ್ನಲಾಗುತ್ತಿದೆ.ಸದ್ಯ, ಆರೋಪಿಗಳ ಮೊಬೈಲ್ ರಿಟ್ರೈವ್ ಮಾಡಲಾಗಿದ್ದು, ಮಾದಕ ಲೋಕದ ನಂಟಿನ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಿದೆ.

ಸಂಜನಾ, ರಾಗಿಣಿ, ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಂಡಿದ್ದ ಸಿಸಿಬಿ ಅಧಿಕಾರಿಗಳು ರಿಟ್ರೈವ್ ಮಾಡಲು ಎಫ್‍ಎಸ್‍ಎಲ್‍ಗೆ ರವಾನೆ ಮಾಡಿದ್ದರು. ಮೊಬೈಲ್ ರಿಟ್ರೈವ್ ಆಗಿರುವ ಕಾರಣ ಆರೋಪಿಗಳು ಯಾವೆಲ್ಲಾ ಪಾರ್ಟಿಗಳಲ್ಲಿ ಪಾಲ್ಗೊಂಡಿದ್ದರು ಎಂಬ ಮಾಹಿತಿ ಬಯಲಾಗಿದೆ.

ಚಂದನವನದ ನಟಿ ಮಣಿಯರು ತಾವು ಗುರುತಿಸಿದ ಅಪಾಟ್ರ್ಮೆಂಟ್‍ಗಳಿಗೆ ಮಾದಕ ವಸ್ತುಗಳನ್ನು ಪೂರೈಸಿಕೊಂಡು ತಾವೂ ಸೇವಿಸಿ, ರಾಜಕಾರಣಿಗಳ ಮಕ್ಕಳ ಜೊತೆ ಕುಣಿದು ಕುಪ್ಪಳಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ನಗರದ 4 ಐಷಾರಾಮಿ ಅಪಾರ್ಟ್‍ಮೆಂಟ್‍ಗಳನ್ನು ಡ್ರಗ್ಸ್ ಪಾರ್ಟಿಯ ಅಡ್ಡಗಳನ್ನಾಗಿ ಮಾಡಿದ್ದರು. ಈ ಅರ್ಪಾಟ್‍ಮೆಂಟ್‍ಗಳಲ್ಲಿ ಪೇಜ್ ತ್ರಿ ಪಾರ್ಟಿಗಳನ್ನು ಆಯೋಜಿಸುತ್ತಿದ್ದು, ಪಾರ್ಟಿಗಳು ರಾತ್ರಿ 12 ಗಂಟೆಯ ಬಳಿಕ ಆರಂಭವಾಗುತ್ತಿತ್ತು.  ಪಾರ್ಟಿಗೆ ನಿಗದಿತ ವ್ಯಕ್ತಿಗಳಿಗೆ ಮಾತ್ರ ಎಂಟ್ರಿ ಇತ್ತು. ಇದಕ್ಕಾಗಿ ಪ್ರತ್ಯೇಕ ವಾಟ್ಸಪ್ ಗ್ರೂಪ್ ಕೂಡ ಕ್ರಿಯೇಟ್ ಮಾಡಲಾಗಿತ್ತು. ಈ ಗ್ರೂಪ್‍ಗೆ ಆಫ್ಟರ್ ಹವರ್ಸ್ ಎಲೈಟ್ ಪಾರ್ಟಿ ಎಂದು ಹೆಸರಿಡಲಾಗಿತ್ತು.

ಇದರ ಮೂಲಕ ಪಾರ್ಟಿ ಆಯೋಜನೆ ಬಗ್ಗೆ ಚರ್ಚೆ ನಡೆಯುತ್ತಿತ್ತು ಎಂಬ ವಿಷಯ ಗೊತ್ತಾಗಿದೆ. ಸಿಸಿಬಿ ಅಧಿಕಾರಿಗಳು ದಾಳಿ ಮಾಡುತ್ತಿರುವ ವಿಚಾರ ತಿಳಿದು ನಟಿ ಮಣಿಯರು ತಮ್ಮ ಮೊಬೈಲ್‍ನಲ್ಲಿದ್ದ ಈ ಗ್ರೂಪ್ ಡಿಲಿಟ್ ಮಾಡಿದ್ದರು.  ತಾನು ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾಗಿಲ್ಲ, ನನ್ನ ಭವಿಷ್ಯ ಹಾಳಾಯ್ತು, ಸಿನಿಮಾ ಇಂಡಸ್ಟ್ರಿನಲ್ಲಿ ಮತ್ತೆ ಅವಕಾಶ ಸಿಗಲ್ಲವೆಂದು ಸಿಸಿಬಿ ಅಧಿಕಾರಿಗಳ ಎದುರು ರಂಪಾಟ ನಡೆಸಿರುವ ನಟಿ ಸಂಜನಾರ ಅಸಲಿತನವನ್ನು ತನಿಖಾಧಿಕಾರಿಗಳು ಸಾಕ್ಷಿ ಸಮೇತ ಕಲೆ ಹಾಕ್ತಿದ್ದಾರೆ.

ಚಂದನವನದಲ್ಲಿ ಡ್ರಗ್ಸ್ ಮಾಫಿಯಾ ವಿಚಾರ ಕೇಳಿ ಬರುತ್ತಿದ್ದಂತೆ ಡ್ರಗ್ಸ್ ಜಾಲದಲ್ಲಿ ಭಾಗಿಯಾಗಿರುವ ನಟಿ ಸಂಜನಾ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲು ಬಹಳ ಕಸರತ್ತು ನಡೆಸಿದ್ದರು. ತಮಗೆ ಗೊತ್ತಿರುವ ಹೈ-ಫೈ ವ್ಯಕ್ತಿಗಳ ಕೈಯಲ್ಲಿ ತನಿಖಾಕಾರಿಗಳಿಗೆ ಒತ್ತಡ ಹಾಕಲು ಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಎಲ್ಲಾ ಮಾಹಿತಿ ಸಂಜನಾರ ಕಾಲ್ ರೆಕಾರ್ಡ್ ಮೂಲಕ ತಿಳಿದುಬಂದಿದೆ. ಆದರೆ ತನಿಖಾಧಿಕಾರಿಗಳು ಯಾವುದಕ್ಕೂ ಬಗ್ಗದೆ ನಟಿ ಸಂಜನಾ ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿರುವುದಕ್ಕೆ ಪಕ್ಕಾ ಸಾಕ್ಷಿಗಳನ್ನು ಕಲೆ ಹಾಕಿದ್ದಾರೆ. ಮಾತ್ರವಲ್ಲದೇ ಸಂಜನಾ ಮನೆಯ ಮೇಲೆ ದಾಳಿ ಮಾಡಿದಾಗ ಸಿಕ್ಕಂತಹ ಚೆಕ್‍ಗಳು ಸಿಕ್ಕಿವೆ.

ಇವುಗಳನ್ನು ನಟಿಗೆ ನೀಡಿದ ವ್ಯಕ್ತಿಗಳಿಗೆ ಇದು ಮುಳುವಾಗಲಿದೆ. ಹೌದು, ಪ್ರತಿಷ್ಠಿತ ರಾಜಕಾರಣಿಗಳು, ಕೆಲ ಹಿರಿಯಾಕಾರಿಗಳು, ಪ್ರತಿಷ್ಠಿತ ಬಿಲ್ಡರ್ಸ್‍ಗಳ ಹೆಸರಿನಲ್ಲಿ ಸಂಜನಾ ಹೆಸರಿಗೆ ಚೆಕ್ ಬಂದಿವೆ ಎಂದು ಹೇಳಲಾಗ್ತಿದೆ.

ವಿನಾಕಾರಣ ಚೆಕ್ ಕೊಡಲು ಸಾಧ್ಯವಿಲ್ಲ, ಹೀಗಾಗಿ ಆರೋಪಿಯ ಮತ್ತಷ್ಟು ಜಾಲವನ್ನು ಸಿಸಿಬಿ ಕಲೆ ಹಾಕುತ್ತಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂಜನಾ ಮದುವೆ ವಿಚಾರ ಸಂಬಂಧ, ವೈದ್ಯ ಪಾಷಾನನ್ನು ಕೂಡಾ ಸಿಸಿಬಿ ಪೊಲೀಸರು ವಿಚಾರಣೆಗೆ ಒಳಪಡಿಸಲಿದ್ದಾರೆ.

ಪಾಷಾ ಕೂಡಾ ಕೋಟಿ ಒಡೆಯ, ಕೋಟಿ ಆದಾಯದ ಮೂಲವೇನು ಅನ್ನೋದರ ತನಿಖೆ ಕೂಡ ಮುಂದುವರೆಯಲಿದೆ.ಸದ್ಯ ಸಿಸಿಬಿ ಪೊಲೀಸರ ವಶದಲ್ಲಿರುವ ಸಂಜನಾ ಕಸ್ಟಡಿ ನಾಳೆಗೆ ಅಂತ್ಯವಾಗಲಿದೆ. ಆದರೆ, ಸದ್ಯ ಸಂಜನಾ ಆಪ್ತ ಫಾಜಿಲ್ ಹಾಗೂ ಇನ್ನಿತರೆ ವ್ಯಕ್ತಿಗಳು ತಲೆಮರೆಸಿಕೊಂಡಿರುವ ಕಾರಣ ಮತ್ತಷ್ಟು ದಿನ ಸಂಜನಾರನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ.

ಮೊಬೈಲ್ ರಿಟ್ರೈವ್ ವೇಳೆ ಡಿಲಿಟ್ ಆಗಿರುವ ಎಲ್ಲಾ ಮಾಹಿತಿ ಬಯಲಾಗಿದೆ. ಪಾರ್ಟಿ ನಡೆಯುತ್ತಿದ್ದ ಅಪಾರ್ಟ್‍ಮೆಂಟ್‍ಗಳನ್ನು ಫೋಲೀಸರು ಪತ್ತೆ ಹಚ್ಚಿದ್ದು, ನ್ಯಾಯಾಲಯದ ಅನುಮತಿ ಪಡೆದು ಅರ್ಪಾಟ್‍ಮೆಂಟ್‍ಗಳ ಮೇಲೆ ದಾಳಿಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ನಶೆ ಪಾರ್ಟಿಗಳು ನಡೆಯುತ್ತಿದ್ದ ಅಪಾರ್ಟ್‍ಮೆಂಟ್‍ಗಳು ಯಾರದ್ದು ಎಂಬುದರ ಬಗ್ಗೆಯೂ ತನಿಖಾ ತಂಡ ಮಾಹಿತಿ ಕಲೆ ಹಾಕುತ್ತಿದೆ.