ಡ್ರಗ್ಸ್ ಪ್ರಕರಣ : ಪ್ರಭಾವಿಗಳ ಮಕ್ಕಳಿಗೆ ಸದ್ಯದಲ್ಲೇ ಸಿಸಿಬಿ ನೋಟಿಸ್..!

Spread the love

ಬೆಂಗಳೂರು, ಸೆ.14- ಡ್ರಗ್ಸ್ ಜಾಲಕ್ಕೆ ಸಂಬಂಧಿಸಿದಂತೆ ನಟ-ನಟಿಯರು, ಉದ್ಯಮಿ, ರಾಜಕಾರಣಿ ಹಾಗೂ ಗಣ್ಯರ ಮಕ್ಕಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲು ಸಿಸಿಬಿ ಸಿದ್ಧತೆ ನಡೆಸುತ್ತಿದೆ.  ಬಂಧನಕ್ಕೊಳಗಾಗಿರುವ ನಟಿಯರಾದ ರಾಗಿಣಿ ಮತ್ತು ಸಂಜನಾ ವಿಚಾರಣೆ ಸಂದರ್ಭದಲ್ಲಿ ಕೆಲವು ಮಾಹಿತಿಗಳನ್ನು ನೀಡಿದ್ದಾರೆ. ಹಾಗೆಯೇ ಕೆಲ ನಟ-ನಟಿಯರು, ಉದ್ಯಮಿಗಳು ಹಾಗೂ ಗಣ್ಯರ ಮಕ್ಕಳ ಹೆಸರು ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಇದೀಗ ನಟಿಯರ ಹೇಳಿಕೆ ಆಧಾರದ ಮೇಲೆ ಪಟ್ಟಿಯೊಂದನ್ನು ಸಿದ್ಧಪಡಿಸಿರುವ ಸಿಸಿಬಿ ಅದನ್ನು ಪರಿಶೀಲಿಸಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲು ಎಲ್ಲ ರೀತಿಯ ಸಿದ್ಧತೆ ನಡೆಸುತ್ತಿದೆ ಎಂದು ಗೊತ್ತಾಗಿದೆ.

ಡ್ರಗ್ಸ್ ಜಾಲದಲ್ಲಿ ಸಂಸದರ ಪುತ್ರರು, ಶಾಸಕರ ಆಪ್ತರು, ಉದ್ಯಮಿಗಳ ಮಕ್ಕಳು ಮತ್ತು ರಾಜಕಾರಣಿಗಳ ಮಕ್ಕಳು ಇದ್ದಾರೆಂಬ ಮಾಹಿತಿ ಲಭ್ಯವಾಗಿದೆ. ಪಾರ್ಟಿ ಆಯೋಜಕರು ತಾವು ಆಯೋಜಿಸುವ ಡ್ರಗ್ಸ್ ಪಾರ್ಟಿಗಳಿಗೆ ಗಣ್ಯ ವ್ಯಕ್ತಿಗಳ ಮಕ್ಕಳನ್ನು ಕರೆತಂದು ಈ ಇಬ್ಬರು ನಟಿಯರನ್ನು ಪರಿಚಯಿಸಿದ್ದಾರೆಂದು ಗೊತ್ತಾಗಿದೆ.

ಈ ಇಬ್ಬರು ನಟಿಯರ ಜತೆ ಈ ವ್ಯಕ್ತಿಗಳು ಸಂಪರ್ಕ ಇಟ್ಟುಕೊಂಡು ಎಲ್ಲೆಲ್ಲಿ ಪಾರ್ಟಿಗಳನ್ನು ಆಯೋಜಿಸುತ್ತಿದ್ದರೋ ಅಲ್ಲಲ್ಲಿ ಹೋಗುತ್ತಿದ್ದರು ಎಂಬುದನ್ನು ಸಿಸಿಬಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ.

ಪಾರ್ಟಿಗಳಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಕೆಲವು ಡ್ರಗ್ಸ್ ಪೆಡ್ಲರ್‍ಗಳನ್ನು ಸಿಸಿಬಿ ಪೊಲೀಸರು ಈಗಾಗಲೇ ಬಂಧಿಸಿ ವಿಚಾರಣೆಗೊಳಪಡಿಸಿ ಅವರುಗಳಿಂದಲೂ ಯಾರ್ಯಾರು ಪಾರ್ಟಿಗಳಿಗೆ ಬರುತ್ತಿದ್ದರು ಎಂಬ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.  ಒಟ್ಟಾರೆ ಬಂಧಿತ ವ್ಯಕ್ತಿಗಳ ಹೇಳಿಕೆ ಹಾಗೂ ಮಾಹಿತಿಗಳನ್ನು ಆಧರಿಸಿ ಇವರುಗಳಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ಕೊಡಲು ಸಿಸಿಬಿ ಸಿದ್ಧತೆ ನಡೆಸುತ್ತಿದೆ.

Facebook Comments