ಡ್ರಗ್ಸ್ ಜಾಲದಲ್ಲಿ ಮತ್ತಷ್ಟು ನಟ-ನಟಿಯರು, ಇನ್ನೂ ಕೆಲವರಿಗೆ ಸಿಸಿಬಿ ನೋಟೀಸ್..!

ಬೆಂಗಳೂರು, ಸೆ.19- ಡ್ರಗ್ಸ್ ಜಾಲದಲ್ಲಿ ಇನ್ನೂ ಕೆಲವು ನಟ, ನಟಿಯರು , ನಿರ್ಮಾಪಕರು ಭಾಗಿಯಾಗಿರುವ ಬಗ್ಗೆ ಸಿಸಿಬಿ ಪೊಲೀಸರಿಗೆ ಮಹತ್ವದ ಮಾಹಿತಿ ಲಭಿಸಿದ್ದು , ಕೆಲ ನಟ, ನಟಿಯರು ಮತ್ತು ಆ್ಯಂಕರ್‍ಗಳಿಗೆ ನೋಟಿಸ್ ನೀಡಲು ತೀರ್ಮಾನಿಸಲಾಗಿದೆ. ಕಿರುತೆರೆಯ ಖ್ಯಾತ ಆ್ಯಂಕರ್, ಕನ್ನಡದ ನಟಿ ಹಾಗೂ ನಟರೊಬ್ಬರಿಗೆ ವಿಚಾರಣೆಗೆ ಹಾಜರಾಗುವಂತೆ ಸದ್ಯದಲ್ಲಿಯೇ ನೋಟೀಸ್ ನೀಡಲು ತೀರ್ಮಾನಿಸಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಇಂದು ಸಿಸಿಬಿ ವಿಚಾರಣೆಗೆ ಹಾಜರಾಗಿದ್ದ ನಟ, ನಿರೂಪಕ ಅಕುಲ್ ಬಾಲಾಜಿ, ಮಾಜಿ ಶಾಸಕ ಆರ್.ವಿ.ದೇವರಾಜ್ ಅವರ ಪುತ್ರ ಮಾಜಿ ಕಾಪೆರ್ರೇಟರ್ ಆರ್.ವಿ.ಯುವರಾಜ್ ಮತ್ತು ನಟ ಸಂತೋಷ್‍ಕುಮಾರ್ ಅವರನ್ನು ಸಿಸಿಬಿ ಅಧಿಕಾರಿಗಳು ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಿದ ಸಂದರ್ಭದಲ್ಲಿ ಸ್ಫೋಟಕ ಮಾಹಿತಿ ಕಲೆ ಹಾಕಿದ್ದು , ಈ ಮಾಹಿತಿ ಮೇರೆಗೆ ಮತ್ತೆ ಕೆಲವರಿಗೆ ನೋಟೀಸ್ ನೀಡಲಾಗುತ್ತಿದೆ. ವಿಚಾರಣೆಗೊಳಗಾದ ಮೂವರ ಮೊಬೈಲ್‍ಗಳನ್ನು ವಶಕ್ಕೆ ಪಡೆದು ಹಲವು ಮಹತ್ವದ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ.

ಮಾದಕ ವಸ್ತು ಜಾಲದಲ್ಲಿ ಈಗಾಗಲೇ ಬಂಧಿತರಾಗಿರುವ ಇಬ್ಬರು ನಟಿಯರು , ಡ್ರಗ್ಸ್ ಪೆಡ್ಲರ್‍ಗಳು, ಪಾರ್ಟಿ ಆಯೋಜಕರು ನಿಮಗೆ ಪರಿಚಯಸ್ಥರೇ , ಸ್ನೇಹಿತರೇ ಆಗಿದ್ದಲ್ಲಿ ಎಷ್ಟು ವರ್ಷಗಳಿಂದ ನಿಮ್ಮ -ಅವರ ಸ್ನೇಹವಿದೆ. ಅವರುಗಳ ಮಧ್ಯೆ ನಿಮ್ಮ ಯಾವ ಯಾವ ವ್ಯವಹಾರಗಳಿವೆ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿ ತನಿಖಾಧಿಕಾರಿಗಳು ಮೂವರಿಂದಲೂ ಉತ್ತರ ಪಡೆದುಕೊಂಡಿದ್ದಾರೆ.

ಅವರು ಆಯೋಜಿಸಿದ್ದ ಪಾರ್ಟಿಗಳಿಗೆ ನೀವು ಹೋಗುತ್ತಿದ್ದರೇ? ಹಾಗಿದ್ದಲ್ಲಿ ಎಲ್ಲೆಲ್ಲಿ ಪಾರ್ಟಿಗಳು ನಡೆಯುತ್ತಿದ್ದವು ಎಂಬಿತ್ಯಾದಿ ಸಾಮಾನ್ಯ ಪ್ರಶ್ನೆಗಳನ್ನು ತನಿಖಾಧಿಕಾರಿಗಳು ಮೂವರಿಗೂ ವಿಚಾರಣೆ ಸಂದರ್ಭದಲ್ಲಿ ಕೇಳಿದ್ದಾರೆ ಎಂದು ತಿಳಿದು ಬಂದಿದೆ. ನಿರೂಪಕ ಅಕುಲ್ ಬಾಲಾಜಿ ಅವರನ್ನು ವಿಚಾರಣೆಗೊಳಪಡಿಸಿದ ತನಿಖಾಧಿಕಾರಿಗಳು ವೀರೇನ್ ಖನ್ನಾ ನಿಮಗೆ ಗೊತ್ತೇ? ನಿಮ್ಮ ಫಾರಂಹೌಸ್ ಎಲ್ಲಿದೆ? ಅದನ್ನು ಯಾರಿಗೆ ಗುತ್ತಿಗೆಗೆ ಕೊಟ್ಟಿದ್ದೀರಿ? ಅಲ್ಲಲ್ಲಿ ಏನೇನು ನಡೆಯುತ್ತಿತ್ತು ಎಂಬುದು ನಿಮಗೆ ಗೊತ್ತಾ ಎಂಬಿತ್ಯಾದಿ ವಿಷಯಗಳ ಬಗ್ಗೆ ಉತ್ತರ ಪಡೆದುಕೊಂಡಿದ್ದಾರೆ.

ನಟ ಸಂತೋಷ್ ಅವರನ್ನು ವಿಚಾರಣೆಗೊಳಪಡಿಸಿದ ತನಿಖಾಧಿಕಾರಿಗಳು ನಿಮಗೆ ವೈಭವ ಜೈನ್ ಪರಿಚಯವೇ? ಎಷ್ಟು ವರ್ಷಗಳಿಂದ ನಿಮಗೆ ಅವರು ಗೊತ್ತು. ನಿಮ್ಮ ಅವರುಗಳ ಮಧ್ಯೆ ವ್ಯವಹಾರ ಇದೆಯೇ? ನಿಮ್ಮ ವಿಲ್ಲಾವನ್ನು ಅವರಿಗೆ ಬಾಡಿಗೆಗೆ ಕೊಟ್ಟಿದ್ದೀರಾ? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದ್ದಾರೆ. ಪಾಲಿಕೆ ಮಾಜಿ ಸದಸ್ಯ ಆರ್.ವಿ.ಯುವರಾಜ್ ಅವರನ್ನು ಸಹ ವಿಚಾರಣೆಗೊಳಪಡಿಸಿ ನೀವು ಪಾರ್ಟಿಗೆ ಹೋಗುತ್ತಿದ್ರಾ? ಒಂದು ವೇಳೆ ಹೋಗಿದ್ದರೆ ಎಲ್ಲೆಲ್ಲಿ ಪಾರ್ಟಿಗಳು ನಡೆಯುತ್ತಿತ್ತು. ಆ ಪಾರ್ಟಿಗಳಲ್ಲಿ ಡ್ರಗ್ಸ್ ಸರಬರಾಜು ಆಗುತ್ತಿತ್ತಾ? ಆ ಪಾರ್ಟಿಗೆ ಯಾರ್ಯಾರು ಬರುತ್ತಿದ್ದರು ಎಂಬಿತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

ಈ ನಡುವೆ ಮಂಗಳೂರಿನಲ್ಲಿ ಸಿಸಿಬಿ ಪೊಲೀಸರ ಬಲೆಗೆ ಡ್ರಗ್ಸ್ ಸಮೇತ ಸಿಕ್ಕಿ ಬಿದ್ದಿರುವ ಬಾಲಿವುಡ್‍ನ ನಟ ಹಾಗೂ ಖ್ಯಾತ ಡ್ಯಾನ್ಸರ್ ಕಿಶೋರ್ ಶೆಟ್ಟಿ ಮತ್ತೆ ಕೆಲವರ ಹೆಸರುಗಳನ್ನು ಹೇಳಿದ್ದಾನೆ ಎನ್ನಲಾಗಿದೆ. ಕಿಶೋರ್ ಶೆಟ್ಟಿ ಆಯೋಜಿಸುತ್ತಿದ್ದ ಪಾರ್ಟಿಗಳಲ್ಲಿ ಡ್ರಗ್ಸ್ ಸರಬರಾಜಾಗುತ್ತದೆ ಎಂಬ ಮಾಹಿತಿ ಇದ್ದರೂ ಕನ್ನಡದ ಕೆಲ ನಟ, ನಟಿಯರು, ಆ್ಯಂಕರ್‍ಗಳು ಭಾಗಿಯಾಗುತ್ತಿದ್ದರು ಎನ್ನಲಾಗಿದೆ.

ಕಿಶೋರ್ ಶೆಟ್ಟಿ ಹಾಗೂ ಇಂದು ವಿಚಾರಣೆಗೆ ಹಾಜರಾದ ಅಕುಲ್, ಯುವರಾಜ್, ಸಂತೋಷ್ ಬಾಯ್ಬಿಟ್ಟಿರುವ ಕೆಲ ಸ್ಫೋಟಕ ಮಾಹಿತಿಗಳನ್ನು ಆಧರಿಸಿ ಇನ್ನು ಕೆಲ ನಟ , ನಟಿಯರಿಗೂ ಮತ್ತು ಆ್ಯಂಕರ್‍ಗೆ ನೋಟಿಸ್ ನೀಡಲು ಪೊಲೀಸರು ತೀರ್ಮಾನಿಸಿದ್ದಾರೆ.