‘ಮಾದಕ’ ನಟಿಮಣಿಯರಿಗೆ ಪರಪ್ಪನ ಅಗ್ರಹಾರ ಜೈಲೇ ಗತಿ

ಬೆಂಗಳೂರು, ಸೆ.19- ಡ್ರಗ್ಸ್ ದಂಧೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟಿಯರಾದ ರಾಗಿಣಿ ಮತ್ತು ಸಂಜನಾ ಜಾಮೀನು ಅರ್ಜಿಯನ್ನು ಎನ್‍ಡಿಪಿಎಸ್ ವಿಶೇಷ ನ್ಯಾಯಾಲಯ ಸೋಮವಾರಕ್ಕೆ ಮುಂದೂಡಿದೆ.

ಆಕ್ಷೇಪಣೆ ಸಲ್ಲಿಸಲು ಸರ್ಕಾರಿ ಅಭಿಯೋಜಕರಾದ ರವೀಂದ್ರ ಅವರು ಒಂದು ವಾರಗಳ ಕಾಲಾವಕಾಶ ಕೇಳಿದ ಹಿನ್ನೆಲೆಯಲ್ಲಿ, ಸಿಟಿ ಸಿವಿಲ್ ಕೋರ್ಟ್‍ನಲ್ಲಿರುವ ಎನ್‍ಡಿಪಿಎಸ್ ನ್ಯಾಯಾಲಯದ ನ್ಯಾಯಾಧೀಶರಾದ ಸೀನಪ್ಪ ಅವರು ಎರಡು ದಿನಗಳ ಕಾಲಾವಕಾಶ ನೀಡಿ ವಿಚಾರಣೆಯನ್ನು ಸೆ.21ಕ್ಕೆ ಮುಂದೂಡಿದರು.

ರಾಗಿಣಿ, ಸಂಜನಾ ಮತ್ತಿತರ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆಯಾಗಿರುವುದರಿಂದ ಈ ನಟಿಯರಿಗೆ ಪರಪ್ಪನ ಅಗ್ರಹಾರ ಜೈಲೇ ಗತಿಯಾಗಿದೆ. ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿದ್ದ ಸಂಜನಾ ಅವರ ಪೊಲೀಸ್ ಕಸ್ಟಡಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.

ನಟಿ ರಾಗಿಣಿ ಅವರು ಸಂಜನಾಗಿಂತ ಎರಡು ದಿನಗಳ ಮೊದಲೇ ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿದ್ದರು. ಈ ಇಬ್ಬರು ನಟಿಯರ ಜೊತೆ ಇತರೆ ಪ್ರಮುಖ ಆರೋಪಿಗಳಾದ ರವಿಶಂಕರ್, ರಾಹುಲ್ ಸೇರಿದಂತೆ ಎಲ್ಲರೂ ನ್ಯಾಯಾಂಗ ಬಂಧನದಲ್ಲಿದ್ದು, ಜಾಮೀನಿಗಾಗಿ ಸತತ ಪ್ರಯತ್ನ ಪಡುತ್ತಲೆ ಇದ್ದಾರೆ.