ಡ್ರಗ್ಸ್ ಪ್ರಕರಣ : ತಲೆಮರೆಸಿಕೊಂಡಿರುವ ಮೂವರಿಗಾಗಿ ಶೋಧ

ಬೆಂಗಳೂರು, ಸೆ.24- ಡ್ರಗ್ಸ್ ಜಾಲಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಮೂವರು ಆರೋಪಿಗಳಿಗಾಗಿ ಸಿಸಿಬಿ ಪೊಲೀಸರು ಹೊರ ರಾಜ್ಯಗಳಲ್ಲಿ ಶೋಧ ನಡೆಸುತ್ತಿದ್ದಾರೆ. ಶಿವ ಪ್ರಕಾಶ್ , ಆದಿತ್ಯ ಆಳ್ವ, ಶೇಕ್ ಫಾಝಲ್‍ಗಾಗಿ ಸಿಸಿಬಿ ಪೊಲೀಸರು ರಾಜ್ಯ ಹಾಗೂ ಬೇರೆ ರಾಜ್ಯಗಳಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಈ ಮೂವರ ಬಂಧನಕ್ಕಾಗಿ ಇಬ್ಬರು ಎಸಿಪಿಗಳ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್ ಗಳು ಸೇರಿದಂತೆ 15 ಮಂದಿ ಸಿಬ್ಬಂದಿಗಳನ್ನೊಳಗೊಂಡ ಎರಡು ತಂಡಗಳನ್ನು ರಚಿಸಲಾಗಿದೆ.

ಈ ತಂಡಗಳು ಅವರ ಬಂಧನಕ್ಕಾಗಿ ಈಗಾಗಲೇ ಬಲೆ ಬೀಸಿವೆ. ಮಾದಕ ವಸ್ತು ಜಾಲಕ್ಕೆ ಸಂಬಂಧಿಸಿದಂತೆ ಕಾಟನ್‍ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಶಿವಪ್ರಕಾಶ್ ಮೊದಲ ಆರೋಪಿ. ಆದಿತ್ಯ ಆಳ್ವ ಆರನೆ ಆರೋಪಿ.  ಈ ಇಬ್ಬರು ಆರೋಪಿಗಳು ದೇಶ ಬಿಟ್ಟು ಹೋಗಿಲ್ಲ ಎಂದು ಸಿಸಿಬಿ ಪೊಲೀಸರು ಖಚಿತಪಡಿಸಿಕೊಂಡಿದ್ದು , ಲುಕ್ ಔಟ್ ನೋಟಿಸ್ ಹೊರಡಿಸಿದ್ದಾರೆ.

ಇತ್ತೀಚೆಗೆ ಹೆಬ್ಬಾಳದಲ್ಲಿರುವ ಆದಿತ್ಯ ಆಳ್ವ ಅವರ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದರು. ಶಾಸಕರೊಬ್ಬರ ಆಪ್ತ ಎಂದು ಹೇಳಲಾಗಿರುವ ಶೇಕ್ ಫಾಝಲ್ ತಲೆ ಮರೆಸಿಕೊಂಡಿದ್ದಾನೆ.  ಈತ ಶ್ರೀಲಂಕಾಕ್ಕೆ ನಟ, ನಟಿಯರು ಅಲ್ಲದೆ ರಾಜಕಾರಣಿಗಳು , ಉದ್ಯಮಿಗಳು, ಗಣ್ಯ ವ್ಯಕ್ತಿಗಳ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಎಂಬುದು ತನಿಖೆಯಿಂದ ತಿಳಿದು ಬಂದಿದೆ.

ಶೇಕ್ ಫಾಝಲ್ , ಈಗಾಗಲೇ ನ್ಯಾಯಾಂಗ ಬಂಧನದಲ್ಲಿರುವ ಸಂಜನಾ ಆಪ್ತ ಎಂದು ಹೇಳಲಾಗಿದೆ. ಈ ಮೂವರು ಡ್ರಗ್ಸ್ ಜಾಲ ಪ್ರಕರಣದಲ್ಲಿ ಪ್ರಮುಖ ಆರೋಪಿಗಳು ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ. ಇವರು ಸಿಕ್ಕಿದ್ದರೆ ಡ್ರಗ್ಸ್ ಜಾಲದ ಬಗ್ಗೆ ಬಹಳಷ್ಟು ಮಾಹಿತಿಗಳು ಹೊರ ಬರಲಿವೆ ಎಂದು ಸಿಸಿಬಿಪೊಲೀಸರು ತಿಳಿಸಿದ್ದಾರೆ.