ಖುದ್ದು ಡ್ರಂ ಸೀಡರ್ ಚಲಾಯಿಸಿ ಭತ್ತ ನಾಟಿ ಮಾಡಿದ ಸಚಿವ ನಾರಾಯಣಗೌಡ

Spread the love

ಮಂಡ್ಯ, ಆ.17- ಧರ್ಮಸ್ಥಳದಂತೆ ಬೇರೆ ಸಂಸ್ಥೆಗಳು ಕೆಲಸ ಮಾಡಿದರೆ ರಾಜ್ಯದಲ್ಲಿ ರೈತರಿಗೆ ಇನ್ನಷ್ಟು ಅನುಕೂಲ ಆಗತ್ತೆ. ಧರ್ಮಸ್ಥಳದ ಜತೆಗೆ ಬೇರೆ ಸಂಸ್ಥೆಗಳು ಕೈ ಜೋಡಿಸಬೇಕು ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ ಹೇಳಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ವತಿಯಿಂದ ಆಯೋಜಿಸಿದ ಯಂತ್ರಶ್ರೀ ಯೋಜನೆಯಡಿ ಭತ್ತ ನಾಟಿ ಕಾರ್ಯಕ್ಕೆ ಕೆ.ಆರ್.ಪೇಟೆ ಅಕ್ಕಿ ಹೆಬ್ಬಾಳುವಿನ ಪ್ರಗತಿಪರ ರೈತ ಹೆಚï.ಟಿ. ರಾಜು ಅವರ ಹೊಲದಲ್ಲಿ ಸಚಿವರು ಚಾಲನೆ ನೀಡಿದರು.

ಸಾಮಾನ್ಯ ರೈತನಂತೆ ಪಂಚೆ ಎತ್ತಿ ಕಟ್ಟಿ ಕೃಷಿ ಕೆಲಸಕ್ಕೆ ಇಳಿದ ಸಚಿವರು, ಸ್ವತಃ ಡ್ರಂ ಸೀಡರ್‍ನ ಚಲಾಯಿಸಿ ಭತ್ತ ನಾಟಿ ಮಾಡುವ ಕಾರ್ಯಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಸಚಿವರು, ರೈತ ಬಂಧುಗಳು ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿಸಿಕೊಳ್ಳಬೇಕು. ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಬೇಸಾಯ ಮಾಡಿ ಹೆಚ್ಚಿನ ಲಾಭಗಳಿಸಿ ಅಭಿವೃದ್ಧಿಯ ಪಥದತ್ತ ಸಾಗಬೇಕು. ರೈತರ ಕಷ್ಟ ಸುಖ ಏನೆಂದು ನನಗೆ ಚೆನ್ನಾಗಿ ಗೊತ್ತಿದೆ.

ಏಕೆಂದರೆ ನಾನೊಬ್ಬ ಬಡ ರೈತನ ಮಗ. ಭೂಮಿ ತಾಯಿಯನ್ನು ನಂಬಿಕೊಂಡು ಬೇಸಾಯ ಮಾಡಿದರೆ ಎಂದಿಗೂ ರೈತರಿಗೆ ಕಷ್ಟ ಬರುವುದಿಲ್ಲ. ರೈತರ ಹಿತ ಕಾಯಲು, ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕವಾದ ಬೆಲೆ ನೀಡಲು ಸರ್ಕಾರವು ಬದ್ಧವಾಗಿದೆ ಎಂದು ಸಚಿವರು ಹೇಳಿದರು.

ಕೃಷಿಗೆ ಪ್ರವಾಸೋದ್ಯಮದ ಸ್ಪರ್ಶ ನೀಡಲು ಸರ್ಕಾರದಲ್ಲಿ ಚಿಂತನೆ ನಡೆದಿದೆ. ಸಚಿವರಾದ ಸಿ.ಟಿ.ರವಿ, ಬಿಸಿ ಪಾಟೀಲ್ ಮತ್ತು ನಾನು ಯೋಜನೆ ರೂಪಿಸುತ್ತಿದ್ದೇವೆ. ಈಗಾಗಲೇ ಮೀಟಿಂಗ್ ಕೂಡ ಮಾಡಿ ರೂಪುರೇಷೆ ರೂಪಿಸುವ ಕಾರ್ಯ ಮಾಡಿದ್ದೇವೆ.

ಧರ್ಮಸ್ಥಳದ ಪೂಜ್ಯರ ಮಾರ್ಗದರ್ಶನದಲ್ಲಿ ಈ ಯೋಜನೆ ತರುತ್ತೇವೆ. ಕೃಷಿ ಬಗ್ಗೆ ಇತ್ತೀಚಿನ ಜನರಿಗೆ ತಿಳಿಸುವ ಕೆಲಸ ಆಗಬೇಕಿದೆ. ನಗರ ಪ್ರದೇಶದ ಜನ ಬಂದು ಒಂದೆರಡು ದಿನ ಹಳ್ಳಿಯಲ್ಲೇ ವಾಸವಿದ್ದು, ಕೃಷಿ ಚಟುವಟಿಕೆಯಲ್ಲಿ ತೊಡಗಬೇಕು.

ಆ ಮೂಲಕ ಕೃಷಿ ಬಗ್ಗೆ ಅವರು ಮಾಹಿತಿ ಪಡೆದುಕೊಳ್ಳಬೇಕು. ಇದಕ್ಕೆ ಅಗ್ರಿ ಟೂರಿಸಂ ಸಹಾಯವಾಗಲಿದೆ ಎಂದು ಸಚಿವ ನಾರಾಯಣ ಗೌಡ ಹೇಳಿದರು. ಆದಿಚುಂಚನಗಿರಿಯ ಹೇಮಗಿರಿ ಶಾಖಾ ಮಠದ ಕಾರ್ಯದರ್ಶಿಗಳಾದ ಡಾ.ರಾಮಕೃಷ್ಣೇಗೌಡ ಮತ್ತು ಮಂಡ್ಯ ಜಿಲ್ಲಾ ಕಸಾಪ ಅಧ್ಯಕ್ಷ ರವಿಕುಮಾರ್, ಚಾಮಲಾಪುರ ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಚಂದ್ರಶೇಖರ್, ತಾಲ್ಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್, ಹೇಮಗಿರಿಯ ಬಿಜಿಎಸ್ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲರಾದ ಪವಿತ್ರ, ಕೃಷಿ ಅಕಾರಿ ಶ್ರೀಧರ್ ಮತ್ತಿತರರು ಭತ್ತ ನಾಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Facebook Comments

Sri Raghav

Admin