ಬೆಂಗಳೂರು.ಆ.25- ದುಬೈ ಜೈಲಿನಿಂದ ಬಿಡುಗಡೆಯಾಗಿ ಬೆಂಗಳೂರಿಗೆ ಬಂದು ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದ ಕೇರಳ ಮೂಲದ ವ್ಯಕ್ತಿಯನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿ 35 ಲಕ್ಷ ರೂ. ಬೆಲೆಬಾಳುವ ಮಾದಕ ವಸ್ತು ಎಂಡಿ ಕ್ರಿಸ್ಟಲ್ ವಶಪಡಿಸಿಕೊಂಡಿದ್ದಾರೆ.
ಕೇರಳದ ಮುನಾಫೀಸ್ ಅಲಿಯಾಸ್ ಟೋನಿ (26) ಬಂಧಿತ ಆರೋಪಿ. ಈತ ನಗರದ ಎಬಿಆರ್ ಲೇಔಟ್‍ನ ಅಶ್ವತ್ಥ್ ನಗರದ ರಾಯಲ್ ಸ್ಪ್ಲೆಂಡಿಡ್ ಅಪಾರ್ಟ್‍ಮೆಂಟ್‍ನಲ್ಲಿ ವಾಸವಾಗಿದ್ದನು. 2018ನೇ ಸಾಲಿನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ದುಬೈಗೆ ಹೋಗಿ ಅಲ್ಲಿಯೇ ಕೆಲವು ತಿಂಗಳುಗಳು ನೆಲೆಸಿದ್ದನು. ನಂತರ ಅಲ್ಲಿಯೂ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಪ್ರಕರಣದಲ್ಲಿ ಮೂರು ವರ್ಷ ಎಂಟು ತಿಂಗಳು ಜೈಲಿನಲ್ಲಿದ್ದನು.
ನಂತರ ದುಬೈ ದೇಶದಲ್ಲಿ ಈತನನ್ನು ಡಿಪೋಟ್ ಮಾಡಿದ್ದರಿಂದ ಬೆಂಗಳೂರಿಗೆ ವಾಪಾಸ್ ಆಗಿದ್ದನು. ಬಾಣಸವಾಡಿ ಪೋಲೀಸ್ ಠಾಣಾ ವ್ಯಾಪ್ತಿಯ ಎಚ್‍ಆರ್‍ಬಿಆರ್ ಲೇಔಟ್ 3ನೇ ಬ್ಲಾಕ್ ಸರ್ವೀಸ್ ರಸ್ತೆಯ ಬಿಬಿಎಂಪಿ ಪಾರ್ಕ್ ಬಳಿ ರಸ್ತೆಬಳಿ ನಿಂತುಕೊಂಡು ಮಾದಕ ವಸ್ತುಗಳನ್ನು ಮಾರಾಟ ಮಾಡಲು ವ್ಯಕ್ತಿಯೊಬ್ಬ ಯತ್ನಿಸುತ್ತಿದ್ದಾನೆ ಎಂಬ ಮಾಹಿತಿ ಪೋಲೀಸರಿಗೆ ಲಭಿಸಿದೆ.
ತಕ್ಷಣ ಬಾಣಸವಾಡಿ ಠಾಣಾ ಸಬ್ ಇನ್ಸ್‍ಪೆಕ್ಟರ್ ನಾಗರಾಜ್ ನೇದಲಗಿ ಮತ್ತು ಸಿಬ್ಬಂದಿ ದಾಳಿ ಮಾಡಿ ಕೇರಳ ಮೂಲದ ಮುನಾಫೀಸ್‍ನನ್ನು ಬಂಧಿಸಿ ಆತನ ವಶದಲ್ಲಿದ್ದ 35 ಲಕ್ಷ ರೂ ಬೆಲೆಬಾಳುವ 700 ಗ್ರಾಂ ತೂಕದ ಎಂಡಿ ಕ್ರಿಸ್ಟಲ್ ಎಂಬ ಮಾದಕ ವಸ್ತುವನ್ನು ವಶಪಡೆಸಿಕೊಂಡಿದ್ದಾರೆ.
ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತ ಡಾ. ಭೀಮಾಶಂಕರ್ ಗುಳೇದ್ ಮಾರ್ಗದರ್ಶನದಲ್ಲಿ ಬಾಣಸವಾಡಿ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಬಿ.ಎನ್. ಸಕ್ರಿ ಅವರ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್ ಸಂತೋಷ್ ಕುಮಾರ್ ಅವರನ್ನೊಳಗೊಂಡ ಸಿಬ್ಬಂದಿ ತಂಡ ಈ ಪ್ರಕರಣವನ್ನು ಬೇಸಿ ಆರೋಪಿಯನ್ನು ಬಂಧಿಸಿ ಮಾದಕ ವಸ್ತುವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.