ಗರ್ಭಿಣಿಯನ್ನು ಕೊಂದು ಸೂಟ್‍ಕೇಸ್‍ನಲ್ಲಿ ತುರುಕಿದ ದಂಪತಿ

Spread the love

noida-Pragnent-Murder

ನೋಯ್ದಾ, ಸೆ.11 (ಪಿಟಿಐ)- ಉತ್ತರ ಪ್ರದೇಶದ ಘಾಜಿಯಾಬಾದ್‍ನಲ್ಲಿ ನಡೆದ ಗರ್ಭಿಣಿಯೊಬ್ಬಳ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಈ ಸಂಬಂಧ ದಂಪತಿಯನ್ನು ಬಂಧಿಸಿದ್ದಾರೆ.  ಮಾಲಾ ಎಂಬ ಗರ್ಭಿಣಿ ಕೊಲೆ ಪ್ರಕರಣದ ಸಂಬಂಧ ಆಕೆಯ ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದ ಸೌರಭ್ ದಿವಾಕರ್ ಮತ್ತು ರೀತು ಎಂಬ ಕೊಲೆಗಡುಕ ಪತಿ-ಪತ್ನಿಯನ್ನು ಬಂಧಿಸಲಾಗಿದೆ.

ಘಾಜಿಯಾಬಾದ್‍ನ ಬಿಸ್‍ರಖ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಕೊಲೆ ನಡೆದಿತ್ತು. ಕಳೆದ ಗುರುವಾರ ಮಾಲಾ ಮತ್ತು ಪತಿ ಶಿವಮ್ ವಾಸವಾಗಿದ್ದ ಗೌತಮ್ ಬುಧ್ ನಗರದ ಬಾಡಿಗೆ ಮನೆಗೆ ಕೆಲವು ಸಂಬಂಧಿಕರು ಬಂದಿದ್ದರು. ಇದೇ ಸಂದರ್ಭದಲ್ಲಿ ನೆರೆಮನೆಯ ನಿವಾಸಿ ರೀತು ಕೂಡ ಅಲ್ಲಿದ್ದಳು. ಕೆಲವು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಮಾಲಾ ಗರ್ಭಿಣಿಯಾಗಿದ್ದಳು. ಮನೆಗೆ ಬಂದ ಅತಿಥಿಗಳಿಗೆ ತನ್ನ ಬಳಿ ಇರುವ ಚಿನ್ನಾಭರಣ, ದುಬಾರಿ ಉಡುಗೊರೆ ವಸ್ತುಗಳು ಹಾಗೂ ಬೆಲೆಬಾಳುವ ಹೊಸ ಬಟ್ಟೆಗಳನ್ನು ತೋರಿದ್ದಳು. ಇದು ದುರಾಸೆಯ ರೀತು ಕಣ್ಣು ಕುಕ್ಕಿತು.

ನಂತರ ಮನೆಗೆ ಹಿಂದಿರುಗಿದ ರೀತು, ಮಾಲಾಳ ಬಳಿ ಇರುವ ಚಿನ್ನಾಭರಣ ಮತ್ತು ಬೆಲೆಬಾಳುವ ಇತರ ವಸ್ತುಗಳ ಬಗ್ಗೆ ಗಂಡ ಸೌರಭ್‍ಗೆ ತಿಳಿಸಿ ಹೇಗಾದರೂ ಮಾಡಿ ಅವುಗಳನ್ನು ಲಪಟಾಯಿಸುವ ಬಯಕೆ ವ್ಯಕ್ತಪಡಿಸಿದಳು. ಇದಕ್ಕೆ ಗಂಡ ಸಹ ಸಾಥ್ ನೀಡಿದ. ಗರ್ಭಿಣಿ ಮಾಲಾಳನ್ನು ಕೊಂದು ಚಿನ್ನಾಭರಣಗಳನ್ನು ದೋಚಲು ಈ ದುಷ್ಟ ದಂಪತಿಗಳು ಯೋಜನೆ ರೂಪಿಸಿದರು.  ಬಂಧು-ಮಿತ್ರರು ಮತ್ತು ನೆಂಟರಿಷ್ಟರೆಲ್ಲರೂ ಮಾಲಾ ಮನೆಯಿಂದ ಹೋದ ನಂತರ ಸೌರಭ್ ಮತ್ತು ರೀತು, ಆಕೆಯ ನಿವಾಸಕ್ಕೆ ಹೋದರು. ಗರ್ಭಿಣಿಗೆ ತಮ್ಮ ಮನೆಯಲ್ಲಿ ಅತಿಥ್ಯಕ್ಕೆ ಆಹ್ವಾನ ನೀಡುವ ಸೋಗಿನಲ್ಲಿ ಮಾಲಾ ಮನೆ ಪ್ರವೇಶಿದರು. ಆ ಸಮಯದಲ್ಲಿ ಮಾಲಾ ಪತಿ ಶಿವಮ್ ಮನೆಯಲ್ಲಿ ಇರಲಿಲ್ಲ.

ಮಾಲಾಳನ್ನು ಉಸಿರುಗಟ್ಟಿಸಿ ಕೊಂದ ದುಷ್ಟ ದಂಪತಿ, ಆಕೆಯ ಸೂಟ್‍ಕೇಸ್‍ನಲ್ಲಿದ್ದ ಬಂಗಾರದ ಒಡವೆಗಳು, ಹಾಗೂ ಇನ್ನಿತರ ಬೆಲೆಬಾಳುವ ವಸ್ತುಗಳನ್ನು ದೋಚಿದರು. ಖಾಲಿಯಾದ ಸೂಟ್‍ಕೇಸ್ ಒಳಗೆ ಮಾಲಾಳ ಮೃತದೇಹ ತುರುಕಿ ಅದನ್ನು ತಮ್ಮ ಮನೆಗೆ ತಂದು ಅಲ್ಲಿಂದ ಘಾಜಿಯಾಬಾದ್‍ನಲ್ಲಿದ್ದ ರೀತು ಮಾವನ ಮನೆಗೆ ಹೋದರು. ಮಾರ್ಗ ಮಧ್ಯೆ ನಿರ್ಜನ ಪ್ರದೇಶದಲ್ಲಿ ಮಾಲಾ ಶವವಿದ್ದ ಸೂಟ್‍ಕೇಸ್ ಎಸೆದಿದ್ದರು.

ಪತ್ನಿ ಕಾಣೆಯಾಗಿರುವ ಬಗ್ಗೆ ಶಿವಮ್ ಕಂಗಾಲಾದರು. ಇದೇ ವೇಳೆ ಸೂಟ್‍ಕೇಸ್‍ನಲ್ಲಿ ಶವ ಪತ್ತೆಯಾಗಿರುವ ಸಂಗತಿ ಪೊಲೀಸರಿಗೆ ತಿಳಿದುಬಂದಿತು. ತಮ್ಮ ಮಗಳನ್ನು ಗಂಡ ಮತ್ತು ಮನೆಯವರೇ ವರದಕ್ಷಿಣೆಗಾಗಿ ಕಿರುಕುಳ ನೀಡಿ ಕೊಂದಿದ್ದಾರೆ ಎಂದು ಮಾಲಾಳ ಪೋಷಕರು ಆರೋಪಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಶಿವಮ್‍ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಆದರೆ ಆಕೆ ಕಾಣಿಯಾದ ಸಂದರ್ಭದಲ್ಲಿ ಶಿವಮ್ ಉದ್ಯೋಗ ಸ್ಥಳದಲ್ಲೇ ಇದ್ದದ್ದು ಹಾಗೂ ಈ ಹತ್ಯೆಯಲ್ಲಿ ಆತನ ಕೈವಾಡ ಇಲ್ಲ ಎಂಬುದು ದೃಢಪಟ್ಟಿತು.  ಈ ಘಟನೆ ನಡೆದ ನಂತರ ಪಕ್ಕದ ಮನೆಯ ರೀತು ಮತ್ತು ಆಕೆಯ ಗಂಡ ಕಾಣೆಯಾಗಿದ್ದರು. ತನಿಖೆ ತೀವ್ರಗೊಳಿಸಿದ ಪೊಲೀಸರು ದಂಪತಿ ಜಾಡು ಪತ್ತೆ ಮಾಡಿ ವಿಚಾರಣೆಗೆ ಒಳಪಡಿಸಿದಾಗ ಇಡೀ ಸಂಗತಿ ಬಯಲಾಯಿತು. ಆರೋಪಿ ದಂಪತಿಯಿಂದ ಚಿನ್ನಾಭರಣಗಳು ಮತ್ತು ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಪಾಲ್ ಶರ್ಮ ತಿಳಿಸಿದ್ದಾರೆ.

Sri Raghav

Admin