ಪತಂಜಲಿ ಯೋಗ ಕಾರ್ಯಕ್ರಮದಲ್ಲಿ ದುರ್ಗಾ ನಮಸ್ಕಾರ

ಮೈಸೂರು,ಅ.13- ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಚಾಮುಂಡಿಬೆಟ್ಟದಲ್ಲಿ ದುರ್ಗಾಷ್ಟಮಿ ದಿನವಾದ ಇಂದು ಬೆಳಗ್ಗೆ 6ರಿಂದ 7.30ರವರೆಗೆ ಸಾಮೂಹಿಕ ದುರ್ಗಾ ನಮಸ್ಕಾರ ಕಾರ್ಯಮ ಹಮ್ಮಿಕೊಳ್ಳಲಾಗಿತ್ತು. ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ದುರ್ಗಾ ನಮಸ್ಕಾರ ಮಾಡುವ ಮೂಲಕ ಯೋಗಾಸನ ಮಾಡುವವರನ್ನು ಹುರಿದುಂಬಿಸಿದರು.

ಅಗ್ನಿಹೋತ್ರಕ್ಕೆ ಅಕ್ಷತೆ, ಪುಷ್ಪ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಸಚಿವರು, 40 ವರ್ಷಗಳ ಹಿಂದೆ ಸ್ಥಾಪನೆಯಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವ ಎಸ್‍ಪಿವೈಸಿಸಿ ಕಾರ್ಯ ಶ್ಲಾಘನೀಯ ಎಂದು ಬಣ್ಣಿಸಿದರು.

ಯಾವುದೇ ಪ್ರಚಾರ ಇಲ್ಲದೆ ಉಚಿತವಾಗಿ ಕಾರ್ಯಕ್ರಮ ನೀಡುತ್ತಿರುವ ಎಸ್‍ಪಿವೈಸಿಸಿ ಹಾಗೂ ಎಲ್ಲರಿಗೂ ತಾಯಿ ಚಾಮುಂಡೇಶ್ವರಿ ಒಳಿತನ್ನು ಮಾಡಲಿ ಎಂದು ಆಶಿಸಿದರು. ಮೂಡಾ ಅಧ್ಯಕ್ಷ ರಾಜೀವ್, ಸಹಕಾರ ಸಚಿವರ ವಿಶೇಷ ಕರ್ತವ್ಯಾಕಾರಿ ದಿನೇಶ್ ಗೂಳಿಗೌಡ, ಎಸ್‍ಪಿವೈಸಿಸಿ ಅಧ್ಯಕ್ಷರಾದ ಗೋಪಾಲಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.