ಸದಾನಂದಗೌಡರ ಆರೋಗ್ಯದಲ್ಲಿ ಸುಧಾರಣೆ, ಆರೋಗ್ಯ ವಿಚಾರಿಸಿದ ಸಿಎಂ ಬಿಎಸ್‍ವೈ

ಬೆಂಗಳೂರು,ಜ.4-ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಆಸ್ಪತ್ರೆಗೆ ಭೇಟಿ ನೀಡಿ  ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಆರೋಗ್ಯ ವಿಚಾರಿಸಿದರು. ನಿನ್ನೆ ಚಿತ್ರದುರ್ಗದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸದಾನಂದಗೌಡರು ಅಸ್ವಸ್ಥರಾದ ಹಿನ್ನೆಲೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಬೆಂಗಳೂ ರಿನ ಸಿಎಂಆರ್ ಅಸ್ಗರ್ ಆಸ್ಪತ್ರೆಯಲ್ಲಿ ಚಿಕಿತ್ಸೆ  ಪಡೆಯುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ  ಮುಖ್ಯಮಂತ್ರಿ ಯಡಿ ಯೂರಪ್ಪ, ಡಿಸಿಎಂಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಡಾ.ಸಿ.ಎನ್.ಅಶ್ವಥ್ ನಾರಾಯಣ, ಸಚಿವರಾದ ಎಸ್.ಟಿ.ಸೋಮಶೇಖರ್, ಬಿ.ಶ್ರೀರಾಮುಲು ಅವರು ಇಂದು ಆಸ್ಪತ್ರೆಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿಎಸ್‍ವೈ, ಈಗಷ್ಟೇ ನೀವು ಕೋವಿಡ್ -19 ಸೋಂಕಿನಿಂದ ಚೇತರಿಸಿಕೊಂಡಿದ್ದೀರಿ. ಆತುರದಿಂದ ಟೆನ್ಷನ್ ತೆಗೆದುಕೊಳ್ಳಬೇಡಿ ಎಂದು ಸಲಹೆ ಮಾಡಿದರು. ನಿನ್ನೆಯಷ್ಟೇ ಹುಷಾರಾಗಿದ್ದೀರಲ್ಲ ಇದ್ದಕ್ಕಿದ್ದಂತೆ ಏನಾಯಿತು ಎಂದು ವಿಚಾರಿಸಿಕೊಂಡ ಸಿಎಂ, ಈಗ ಹೇಗಿದ್ದೀರಿ, ಬೇಗ ಉಷಾರಾಗಿ  ಎಂದರು.

ಬೆಂಗಳೂರು,ಜ.4-ತೀವ್ರ ಅಸ್ವಸ್ಥರಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರ ಆರೋಗ್ಯ ಸ್ಥಿತಿ ಸುಧಾರಿಸುತ್ತಿದ್ದು, ಇಂದು ಸಂಜೆ ಬಿಡುಗಡೆಯಾಗುವ ಸಂಭವವಿದೆ.  ಸದ್ಯಕ್ಕೆ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇಡಲಾಗಿದ್ದು, ನುರಿತ ವೈದ್ಯರ ತಂಡ ಗೌಡರ ಆರೋಗ್ಯದ ಕಡೆ ನಿಗಾವಹಿಸಿದೆ. ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ.

ರಕ್ತದೊತ್ತಡ, ಉಸಿರಾಟ, ಮಧುಮೇಹ, ಇಸಿಜಿ ಸೇರಿದಂತೆ ಅಗತ್ಯ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗಿದ್ದು, ಎಲ್ಲವೂ ಸಹಜ ಸ್ಥಿತಿಯಲ್ಲಿವೆ ಎಂದು ವೈದ್ಯರು ತಿಳಿಸಿದ್ದಾರೆ. ಯಾರೊಬ್ಬರು ಆತಂಕಪಡುವ ಅಗತ್ಯವಿಲ್ಲ. ನಿನ್ನೆಯಿಂದಲೇ ಅವರ ಆರೋಗ್ಯದಲ್ಲಿ ನಿರೀಕ್ಷೆಗೂ ಮೀರಿದ ಸುಧಾರಣೆ ಕಂಡುಬಂದಿದೆ. ಇಂದು ಸಂಜೆ ಅಥವಾ ನಾಳೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಿದ್ದೇವೆ ಎಂದು ಹೇಳಿದ್ದಾರೆ.

ಸದಾನಂದಗೌಡರು ಚಿಕಿತ್ಸೆ ಪಡೆಯುತ್ತಿರುವ ಅಸ್ಗರ್ ಆಸ್ಪತ್ರೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಸೇರಿದಂತೆ ಬಿಜೆಪಿಯ ಕೆಲ ಪ್ರಮುಖರು, ಕಾರ್ಯಕರ್ತರು, ಹಿತೈಷಿಗಳು, ಸಂಬಂಧಿಕರು ಸೇರಿದಂತೆ ಮತ್ತಿತರರು ಇಂದು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಆದರೆ ಆಸ್ಪತ್ರೆಯಲ್ಲಿ ನಿರ್ಬಂಧ ವಿಧಿಸಿರುವುದರಿಂದ ಎಲ್ಲರ ಭೇಟಿಗೂ ಅವಕಾಶ ನೀಡಲಾಗಿಲ್ಲ. ಕೆಲವೇ ಆಯ್ದ ವ್ಯಕ್ತಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಈ ನಡುವೆ ಸದಾನಂದಗೌಡರ ಆರೋಗ್ಯ ಕುರಿತಂತೆ ಮುಖ್ಯಮಂತ್ರಿ ಯಡಿಯೂರಪ್ಪ, ಸಂಪುಟದ ಹಾಗೂ ಕೆಲಸ ಸಚಿವರು ವೈದ್ಯರಿಂದ ಮಾಹಿತಿ ಪಡೆದಿದ್ದಾರೆ.

ಮೂಲಗಳ ಪ್ರಕಾರ ಸಂಜೆ ಅಥವಾ ನಾಳೆ ಬೆಳಗ್ಗೆ ಸದಾನಂದಗೌಡರು ಆಸ್ಪತ್ರೆಯಿಂದ ಬಿಡುಗಡೆಯಾಗುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.